ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ತಮಗೆ ಕಪಾಳಕ್ಕೆ ಹೊಡೆದ ಸಿಐಎಸ್ಎಫ್‌ನ ಮಹಿಳಾ ಸಿಬ್ಬಂದಿಯನ್ನು ಬೆಂಬಲಿಸುತ್ತಿರುವವರು ಮತ್ತು ಸಂಭ್ರಮಿಸುತ್ತಿರುವವರ ವಿರುದ್ಧ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಈ ಘಟನೆಯನ್ನು ಬೆಂಬಲಿಸುತ್ತಿರುವವರು ಅತ್ಯಾಚಾರ ಮತ್ತು ಕೊಲೆಯನ್ನು ಬೆಂಬಲಿಸುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ತಮ್ಮ ‘ಎಕ್ಸ್’ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ‘ಗಾಢವಾದ ಭಾವನಾತ್ಮಕತೆ, ದೈಹಿಕ, ಮಾನಸಿಕ ಅಥವಾ ಆರ್ಥಿಕ ಕಾರಣದಿಂದಾಗಿ ಅತ್ಯಾಚಾರಿ, ಕೊಲೆಪಾತಕಿ ಅಥವಾ ಕಳ್ಳನು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಾನೆ. ಕಾರಣಗಳಿಲ್ಲದೆ ಅಪರಾಧ ಘಟನೆಗಳು ನಡೆಯುವುದಿಲ್ಲ. ಇಂಥ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ’ ಎಂದಿದ್ದಾರೆ.
‘ಯಾವುದೇ ಒಬ್ಬ ವ್ಯಕ್ತಿಯ ಅನುಮತಿ ಇಲ್ಲದೆ, ಆತನ ದೇಹ ಸ್ಪರ್ಶಿಸುವುದು ಮತ್ತು ನಿಂದಿಸುವುದು ಸರಿ ಎಂದು ನೀವು ಹೇಳುವುದಾದರೆ, ಅತ್ಯಾಚಾರ ಮತ್ತು ಕೊಲೆಗೂ ನಿಮ್ಮ ಸಮ್ಮತಿ ಇದೆ ಎಂದೇ ಅರ್ಥ. ಹೀಗಿದ್ದಾಗ, ಅಪರಾಧ ಕೃತ್ಯಗಳ ಪರವಿರುವ ನಿಮ್ಮ ಮಾನಸಿಕತೆಯ ಬಗ್ಗೆ ನೀವೇ ಒಮ್ಮೆ ಪರಾಮರ್ಶಿಸಿಕೊಳ್ಳಬೇಕು. ಇಂಥವರು ಯೋಗ ಮತ್ತು ಧ್ಯಾನ ಮಾಡಬೇಕು ಎಂದು ನಾನು ಸಲಹೆ ನೀಡುತ್ತೇನೆ. ಇಲ್ಲದಿದ್ದರೆ, ನಿಮ್ಮ ಜೀವನವೇ ವ್ಯಥೆ ಮತ್ತು ಒಂದು ಹೊರೆ ಎಂಬ ಭಾವನೆ ಮೂಡಲಿದೆ. ದಯವಿಟ್ಟು ದ್ವೇಷ, ಅಸೂಯೆಯನ್ನು ಬಿಟ್ಟುಬಿಡಿ’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.