2019ರ ಆರಂಭದಲ್ಲಿ, ಚಳಿಯ ತೀವ್ರತೆ ಇನ್ನೂ ಆರಿರದಿದ್ದ ಹೊತ್ತಿನಲ್ಲಿ ಬಿಡುಗಡೆಯಾದ ಸಿನಿಮಾ ‘ಬೀರ್‌ಬಲ್’. ಕೊಲೆಯೊಂದರ ರಹಸ್ಯವನ್ನು ಕಥಾ ನಾಯಕ ಭೇದಿಸುವ ಆ ಚಿತ್ರವನ್ನು ವೀಕ್ಷಿಸಿದ ಹಲವರು, ‘ಚಳಿಗಾಲಕ್ಕೊಂದು ಬೆಚ್ಚಗಿನ ಸಿನಿಮಾ ಇದು’ ಎಂದಿದ್ದರು.
ಆ ಚಿತ್ರ ನಿರ್ದೇಶಿಸಿದ್ದ ಎಂ.ಜಿ. ಶ್ರೀನಿವಾಸ್ (ಶ್ರೀನಿ) ಈಗ ‘ಓಲ್ಡ್ ಮಾಂಕ್’ ಎಂಬ ಶೀರ್ಷಿಕೆ ಹೊತ್ತ ಹೊಸ ಸಿನಿಮಾ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಅಂದಹಾಗೆ, ‘ಓಲ್ಡ್ ಮಾಂಕ್’ ಅಂದರೆ ಏನು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯ ಇಲ್ಲ. ಕಿಸೆಗೆ ಹಗುರವಾದ ಈ ‘ಗುಂಡಿನ’ ಗಮ್ಮತ್ತನ್ನು ಬಲ್ಲವರೇ ಬಲ್ಲರು!
ಆದರೆ, ಈ ಚಿತ್ರಕ್ಕೂ ಗಮ್ಮತ್ತು ತಂದುಕೊಡುವ ‘ಓಲ್ಡ್ ಮಾಂಕ್’ಗೂ ನೇರ ಸಂಬಂಧ ಇಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಈ ಚಿತ್ರ ಸುತ್ತುವುದು ದೇವಋಷಿ ನಾರದನ ಸುತ್ತ. ‘ನಾರದ ಮಹರ್ಷಿಗಳು ಹಳೆಯ ಸನ್ಯಾಸಿ. ಹಾಗಾಗಿ ಇಂಗ್ಲಿಷ್‌ನ ಈ ಶೀರ್ಷಿಕೆಯನ್ನು ಸಿನಿಮಾಕ್ಕೆ ಇಡಲಾಗಿದೆ’ ಎನ್ನುವ ವಿವರಣೆ ಸಿನಿತಂಡದ್ದು.
ಈ ಚಿತ್ರದಲ್ಲಿ ಒಟ್ಟು 16 ಜನ ವೃದ್ಧರು ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ಆ ಪಾತ್ರಗಳನ್ನು ನಿಭಾಯಿಸಬಲ್ಲ ಸೂಕ್ತ ಕಲಾವಿದರಿಗಾಗಿ ಹಾಗೂ ಚಿತ್ರದ ನಾಯಕಿಗಾಗಿ ಹುಡುಕಾಟ ನಡೆದಿದೆ. ಇದಕ್ಕಾಗಿ ಚಿತ್ರತಂಡವು ಆಡಿಷನ್ ಕೂಡ ನಡೆಸುತ್ತಿದೆ. ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಆಡಿಷನ್ ನಡೆಯಬೇಕಿದೆ.
‘ಓಲ್ಡ್ ಮಾಂಕ್ ಚಿತ್ರದ ಕೆಲಸಗಳು ಪೂರ್ಣಗೊಂಡು, ಅದು ತೆರೆಗೆ ಬಂದ ನಂತರ ಬೀರ್‌ಬಲ್ ಚಿತ್ರದ ಎರಡನೆಯ ಭಾಗದ ಕೆಲಸಗಳು ಆರಂಭವಾಗಲಿವೆ’ ಎನ್ನುತ್ತಾರೆ ಶ್ರೀನಿವಾಸ್. ‘ಓಲ್ಡ್ ಮಾಂಕ್’ ಚಿತ್ರಕ್ಕೆ ಪ್ರದೀಪ್ ಶರ್ಮ ಅವರು ಹಣ ಹೂಡಿಕೆ ಮಾಡಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣದ ಹೊಣೆ ಹೊರಲಿದ್ದಾರೆ. ಸೌರಭ್ ವೈಭವ್ ಅವರು ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.