‘ಚಮಕ್’ ಚಿತ್ರದ ಯಶಸ್ಸಿನ ನಂತರ ಗಣೇಶ್ ಅವರು ಮತ್ತೆ ಸಿನಿಮಾ ಪ್ರಿಯರ ಮುಂದೆ ಬಂದಿದ್ದಾರೆ. ‘ಆರೆಂಜ್’ ಚಿತ್ರದ ಮೂಲಕ ಕೌಟುಂಬಿಕ ಸಿನಿಮಾಗಳನ್ನು ನೋಡುವವರ ಮನಗೆಲ್ಲುವ ಹಂಬಲದಲ್ಲಿ ಇದ್ದಾರೆ.
ಆರೆಂಜ್ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಆದರೆ, ಈ ಸಿನಿಮಾ ಬಗ್ಗೆ ಚಿತ್ರತಂಡ ಎಲ್ಲಿಯೂ ಸುದ್ದಿಗೋಷ್ಠಿ ನಡೆಸಿರಲಿಲ್ಲ. ಚಿತ್ರದ ಕುರಿತು ಪ್ರಕಟವಾಗಿದ್ದರಲ್ಲಿ ಬಿಡಿ ವರದಿಗಳೇ ಹೆಚ್ಚು. ‘ಇದು ನಮ್ಮ ಮೊದಲ ಪತ್ರಿಕಾಗೋಷ್ಠಿ. ಹಲವಾರು ಕಾರಣಗಳಿಂದಾಗಿ ಸುದ್ದಿಗೋಷ್ಠಿ ನಡೆಸಲು ಆಗಿರಲಿಲ್ಲ’ ಎನ್ನುತ್ತ ಮಾತು ಆರಂಭಿಸಿದರು ನಿರ್ದೇಶಕ ಪ್ರಶಾಂತ್ ರಾಜ್.
ನಂತರ ಅವರ ಮಾತು ಹೊರಳಿದ್ದು ಈ ಚಿತ್ರದ ಬೀಜ ಮೊಳೆತಿದ್ದು ಎಲ್ಲಿ ಎಂಬುದರ ಬಗ್ಗೆ. ‘ಗಣೇಶ್ ಅಭಿನಯದ ಜೂಮ್ ಚಿತ್ರವನ್ನು ಬಿಡುಗಡೆಗೆ ಎರಡು ದಿನ ಮೊದಲು ಶಿಲ್ಪಾ ಗಣೇಶ್ ಅವರು ನೋಡಿದರು. ಆ ಸಿನಿಮಾ ನೋಡಿದವರೇ, ಗಣೇಶ್ ನನ್ನ ಜೊತೆ ಇನ್ನೊಂದು ಸಿನಿಮಾ ಮಾಡಬೇಕು ಎಂದು ಹೇಳಿದರು. ಈ ಸಿನಿಮಾ ಮಾಡುವ ಆಲೋಚನೆ ಹುಟ್ಟಿದ್ದು ಅಲ್ಲಿ’ ಎಂದರು ಪ್ರಶಾಂತ್.
ಪ್ರಶಾಂತ್ ಅವರು ಇದೇ ವೇಳೆ ಇನ್ನೊಂದು ಅಂಶವನ್ನು ಹಂಚಿಕೊಂಡರು. ‘ನಾನು ಗಣೇಶ್ ಅವರ ಅಭಿಮಾನಿ. ಯಾವತ್ತಿಗೂ ಅವರ ಅಭಿಮಾನಿಯಾಗಿ ಮುಂದುವರಿಯುವೆ. ನಾನು ನನ್ನ ಸಿನಿಮಾಗಳನ್ನು ರೂಪಿಸುವುದು ಅವರ ಅಭಿಮಾನಿ ಸ್ಥಾನದಲ್ಲಿ ನಿಂತು. ಅಭಿಮಾನಿಯಾಗಿ ಸಿನಿಮಾ ಪರಿಕಲ್ಪನೆ ಸಿದ್ಧಪಡಿಸಿಕೊಂಡು, ತಂತ್ರಜ್ಞನಾಗಿ ಮಾರ್ಪಾಡುಗಳನ್ನು ತರುತ್ತೇನೆ’ ಎಂದರು ಪ್ರಶಾಂತ್.
ಈ ಸಿನಿಮಾದಲ್ಲಿ ಏನು ನಡೆಯುತ್ತಿದೆ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿರುತ್ತದೆ. ಆದರೆ, ಚಿತ್ರದಲ್ಲಿ ಏನು ನಡೆಯುತ್ತಿದೆ ಎಂಬುದು ಪಾತ್ರಗಳಿಗೆ ಗೊತ್ತಾಗುವುದಿಲ್ಲ. ಪಾತ್ರಗಳು ಒಂದಿಷ್ಟು ಗೊಂದಲದಲ್ಲೇ ಇರುತ್ತವೆ. ಈ ಸಿನಿಮಾ ನಿರೂಪಣಾ ಶೈಲಿ ಹಾಗಿದೆ ಎಂದರು ಗಣೇಶ್.
ನಾಯಕಿ ಪ್ರಿಯಾ ಅವರನ್ನು ಇದರಲ್ಲಿ ಎರಡು ಶೇಡ್‌ಗಳಲ್ಲಿ ತೋರಿಸಲಾಗಿದೆ. ಮೊದಲ ಶೇಡ್‌ನಲ್ಲಿ ಅವರು ಹಳ್ಳಿ ಹುಡುಗಿಯಾಗಿ, ಎರಡನೆಯ ಶೇಡ್‌ನಲ್ಲಿ ಆಧುನಿಕ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಈ ಸಿನಿಮಾ ವೀಕ್ಷಕರನ್ನು ಕಾಡುವಂಥ ಕಂಟೆಂಟ್ ಹೊಂದಿದೆ. ಚಿತ್ರ ನೋಡಿದ ಯಾರೊಬ್ಬರೂ ಮುಜುಗರಪಟ್ಟುಕೊಳ್ಳುವ ದೃಶ್ಯಗಳು ಇದರಲ್ಲಿ ಇಲ್ಲ’ ಎಂಬುದು ನಿರ್ದೇಶಕರ ವಿಶ್ವಾಸದ ಮಾತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.