ಲಾಸ್ ಏಂಜಲೀಸ್:ಪ್ರಸಕ್ತ ಸಾಲಿನ ಅಕಾಡೆಮಿ ಆಸ್ಕರ್ ಪ್ರಶಸ್ತಿಗಳು ಘೋಷಣೆಯಾಗಿದ್ದು,ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ವಿಲ್ ಸ್ಮಿತ್ ಸಮಾರಂಭದ ವೇದಿಕೆ ಮೇಲೆ ಸಹ ನಟನ ಕಪಾಳಕ್ಕೆ ಹೊಡೆದಿದ್ದಾರೆ.
ನಟ ಹಾಗೂ ನಿರೂಪಕ ಕ್ರಿಸ್ ರಾಕ್ ಅವರಿಗೆ ವಿಲ್ ಸ್ಮಿತ್ ಕೆನ್ನೆಗೆ ಹೊಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಕರ್ ವೇದಿಕೆಯ ಮೇಲೆ ಈ ಘಟನೆ ನಡೆದಿರುವುದಕ್ಕೆ ಆಯೋಜಕರು, ಪ್ರೇಕ್ಷಕರ ಕ್ಷಮೆ ಕೋರಿದ್ದಾರೆ.
ವಿಲ್ ಸ್ಮಿತ್ ಹಾಗೂ ಪತ್ನಿ ಜಾಡಾ ಪಿಂಕೆಟ್ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದರು. ಕ್ರಿಸ್ ರಾಕ್ ಅವರು ವೇದಿಕೆಯ ಕೆಳ ಭಾಗದಲ್ಲಿ ವಿಲ್ ಸ್ಮಿತ್ ದಂಪತಿ ಭೇಟಿಯಾಗಿ ವಿಶ್ ಮಾಡಿದ್ದರು. ಇದೇ ವೇಳೆ ಜಾಡಾ ಪಿಂಕೆಟ್ ತಲೆಯ (ಜಾಡಾ ತಲೆ ಬೋಳಿಸಿಕೊಂಡಿದ್ದರು) ಬಗ್ಗೆ ತಮಾಷೆ ಮಾಡಿದ್ದರು.
ಜಾಡಾಈ ವಿಷಯವನ್ನು ವಿಲ್ ಸ್ಮಿತ್ ಅವರಿಗೆ ತಿಳಿಸಿದ್ದರು. ಕ್ರಿಸ್ ರಾಕ್ ಸಾಕ್ಷ್ಯಚಿತ್ರವೊಂದರ ಪ್ರಶಸ್ತಿ ಘೋಷಣೆಗಾಗಿ ವೇದಿಕೆ ಮೇಲೆ ನಿರೂಪಣೆ ಆರಂಭಿಸುತ್ತಿದ್ದಂತೆ, ವಿಲ್ ಸ್ಮಿತ್ ವೇದಿಕೆ ಹತ್ತಿ ಕ್ರಿಸ್ ರಾಕ್ ಕೆನ್ನೆಗೆ ಹೊಡೆದು ಕೆಳಗೆ ಇಳಿದರು. ಈ ಘಟನೆಯಿಂದ ಶಾಕ್ ಆದ ಕ್ರಿಸ್ ರಾಕ್ ಕೆಲ ಕ್ಷಣ ಮೌನವಾದರು.
ಘಟನೆ ಬಳಿಕ ಪತ್ನಿಯ ಬಳಿ ಬಂದು ಕುಳಿತ್ತಿದ್ದ ವಿಲ್ ಸ್ಮಿತ್, 'ನನ್ನ ಪತ್ನಿಯ ಬಗ್ಗೆ ಮಾತನಾಡಬೇಡ' ಎಂದು ಜೋರಾಗಿ ಹೇಳಿದರು. ಕೂಡಲೇ ಕ್ರಿಸ್ ರಾಕ್ ಓಕೆ..ಓಕೆ ಎಂದರು. 'ನನ್ನ ಪತ್ನಿಯ ಹೆಸರನ್ನು ನಿನ್ನ ಕೊಳಕು ಬಾಯಿಂದ ಹೇಳಬೇಡ' ಎಂದು ಕಿರುಚಿದರು. ನಂತರ ಕ್ರಿಸ್ ರಾಕ್ ಸುಮ್ಮನಾದರು. ಇದಾದ ನಂತರ ಕ್ರಿಸ್ ರಾಕ್ ಕಾರ್ಯಕ್ರಮವನ್ನು ಮುಂದುವರೆಸಿದರು.
ಎಲ್ಲರೂ ಈ ಘಟನೆಯನ್ನು ತಮಾಷೆ ಎಂದು ಭಾವಿಸಿದ್ದರು. ಆದರೆ ಆಸ್ಕರ್ ಆಯೋಜಕರು ಸ್ಮಿತ್ ಹಾಗೂ ಕ್ರಿಸ್ ರಾಕ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದಾಗ ಇದರ ಗಂಭೀರತೆ ತಿಳಿಯಿತು ಎಂದು ಪ್ರೇಕ್ಷಕರೊಬ್ಬರು ಹೇಳಿದ್ದಾರೆ.
'ಕಿಂಗ್ ರಿಚರ್ಡ್ಸ್' ಸಿನಿಮಾದ ನಟನೆಗೆವಿಲ್ ಸ್ಮಿತ್ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ವಿಲ್ ಸ್ಮಿತ್ ಅವರ ನಡೆಯ ಬಗ್ಗೆ ನೆಟ್ಟಿಗರು ಪರ, ವಿರೋಧದ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.