ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಸಖತ್ ಖುಷಿಯಲ್ಲಿದ್ದರು. ಅವರ ಒಂದು ಪಕ್ಕದಲ್ಲಿ ನಿರ್ದೇಶಕ ಗುರು ದೇಶಪಾಂಡೆ, ಇನ್ನೊಂದು ಪಕ್ಕದಲ್ಲಿ ಹಿರಿಯ ನಟ ರವಿಚಂದ್ರನ್ ಕುಳಿತಿದ್ದರು.
ಶ್ರೇಯಸ್ ಅವರಲ್ಲಿದ್ದ ಖುಷಿಗೆ ಕಾರಣ, ಅವರ ಅಭಿನಯದ ಮೊದಲ ಸಿನಿಮಾ ‘ಪಡ್ಡೆಹುಲಿ’ ಶುಕ್ರವಾರ ತೆರೆಗೆ ಬರುತ್ತಿರುವುದು. ಚಿತ್ರ ತೆರೆಗೆ ಬರುತ್ತಿದೆ ಎಂಬ ಸುದ್ದಿಯನ್ನು ತಿಳಿಸಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಅಲ್ಲಿ ಇಡೀ ಚಿತ್ರತಂಡ ಹಾಜರಿತ್ತು.
ಮೊದಲು ಮೈಕ್ ಕೈಗೆತ್ತಿಕೊಂಡ ಚಿತ್ರದ ನಿರ್ದೇಶಕ ಗುರು, ‘ಇದು ಶ್ರೇಯಸ್‌ಗಾಗಿ ಮಾಡಿರುವ ಸಿನಿಮಾ. ಅವರನ್ನು ಸಿನಿಮಾ ರಂಗದಲ್ಲಿ ಲಾಂಚ್ ಮಾಡಬೇಕು ಎಂಬ ಉದ್ದೇಶದಿಂದ ಮಾಡಿರುವ ಸಿನಿಮಾ. ನಮಗೊಬ್ಬ ನಾಯಕ ನಟ ಬೇಕಿತ್ತು. ಶ್ರೇಯಸ್ ಮೂಲಕ ಅಂತಹ ನಟ ಸಿಕ್ಕಿದ್ದಾನೆ’ ಎಂದರು.
ನಂತರ ಅವರ ಮಾತುಗಳು ಹೊರಳಿದ್ದು, ಈ ಚಿತ್ರದಲ್ಲಿ ರವಿಚಂದ್ರನ್ ಅಭಿನಯಿಸಲು ಒಪ್ಪಿದ್ದು ಹೇಗೆ ಎಂಬುದರ ಬಗ್ಗೆ. ‘ಈ ಚಿತ್ರ ಮಾಡುವ ಮೊದಲು ನಾನು ಬಹಳ ಸಲ ರವಿ ಸರ್ ಮನೆಗೆ ಭೇಟಿ ನೀಡಿದ್ದೇನೆ. ಈ ಚಿತ್ರದಲ್ಲಿ ನಟಿಸುವಂತೆ ರವಿ ಅವರನ್ನು ಒಪ್ಪಿಸಲು ನಾನು ಮಂಜು ಅವರನ್ನೇ ಕಳುಹಿಸಿದ್ದೆ’ ಎಂದರು ಗುರು.
ಮಾತು ಮುಂದುವರಿಸಿದ ಗುರು, ‘ರವಿ ಸರ್ ನಮ್ಮ ಜೊತೆ ಎಲ್ಲ ಸಿನಿಮಾಗಳಲ್ಲೂ ಇರುವಂತೆ ಆಗಲಿ. ಅವರನ್ನು ನಾವು ಈ ಚಿತ್ರದಲ್ಲಿ ಚೆನ್ನಾಗಿ ಚಿತ್ರಿಸಿದ್ದೇವೆ. ಇದರಲ್ಲಿ ತಂದೆ–ಮಗನ ಭಾವುಕ ಸಂಬಂಧದ ದೃಶ್ಯಗಳು ಬಹಳ ಚೆನ್ನಾಗಿ ಮೂಡಿಬಂದಿವೆ’ ಎಂದರು.
ಚಿತ್ರದಲ್ಲಿ ಹತ್ತು ಹಾಡುಗಳು ಇವೆಯಂತೆ! ಅಯ್ಯೋ, ಹತ್ತು ಹಾಡುಗಳಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಬೇಡ. ಹತ್ತರಲ್ಲಿ ಐದು ಹಾಡುಗಳು ಕಮರ್ಷಿಯಲ್ ಸ್ಪರ್ಶ ಹೊಂದಿರುವಂಥವು. ಇನ್ನೈದು ಹಾಡುಗಳು ಸನ್ನಿವೇಶಕ್ಕೆ ತಕ್ಕಂತೆ ಬರುತ್ತವೆ ಎಂದು ಸಿನಿತಂಡ ಹೇಳಿದೆ.
‘ರವಿ ಸರ್‌ಗೆ ನನ್ನ ಬಗ್ಗೆ ಬಹಳ ಪ್ರೀತಿ. ಶ್ರೇಯಸ್‌ಗೆ ಒಳ್ಳೆಯದಾಗಲಿ ಎಂದು ನಾವು ಅವನಿಗೆ ಸಪೋರ್ಟ್ ಮಾಡಿದ್ದೇವೆ ಎಂದು ರವಿ ಸರ್ ಹೇಳಿದ್ದಾರೆ’ ಎಂದರು ಶ್ರೇಯಸ್.
ನಾಯಕಿ ನಿಶ್ವಿಕಾ ನಾಯ್ಡು ಅವರದ್ದು ಇದರಲ್ಲಿ ಸಂಗೀತಾ ಎನ್ನುವ ಪಾತ್ರ. ನಾಯಕ ಸಂಗೀತವನ್ನು (ಅಂದರೆ ಮ್ಯೂಸಿಕ್) ಇಷ್ಟಪಡುವವ. ಅಲ್ಲದೆ, ಸಂಗೀತಾಳನ್ನು ಪ್ರೀತಿಸುವವ. ನಾಯಕಿ ಇದರಲ್ಲಿ ನಾಯಕನ ವೃತ್ತಿ ಬದುಕಿಗೆ ಆಸರೆಯಾಗಿ ನಿಲ್ಲುತ್ತಾಳೆ.
ಕೊನೆಯಲ್ಲಿ ಮಾತನಾಡಿದ ರವಿಚಂದ್ರನ್, ‘ಈ ಚಿತ್ರ ಕೌಟುಂಬಿಕ ಸಂಬಂಧಗಳ ಬಗ್ಗೆ ಮಾತನಾಡುತ್ತದೆ. ಚಿತ್ರ ಪೂರ್ಣಗೊಳ್ಳಲು ಸರಿಸುಮಾರು ಒಂದು ವರ್ಷ ತೆಗೆದುಕೊಂಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.