ADVERTISEMENT

ಪಡ್ಡೆಹುಲಿಯ ನಿಧಾನ ನಡಿಗೆ

ವಿಜಯ್ ಜೋಷಿ
Published 20 ಏಪ್ರಿಲ್ 2019, 6:35 IST
Last Updated 20 ಏಪ್ರಿಲ್ 2019, 6:35 IST
‘ಪಡ್ಡೆಹುಲಿ’ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಮತ್ತು ಶ್ರೇಯಸ್‌
‘ಪಡ್ಡೆಹುಲಿ’ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಮತ್ತು ಶ್ರೇಯಸ್‌   

ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್ ಅವರ ಮೊದಲ ಸಿನಿಮಾ ‘ಪಡ್ಡೆಹುಲಿ’. ಹೊಸ ನಾಯಕ ನಟನನ್ನು ಪರಿಚಯಿಸುವ ಉದ್ದೇಶದ ಈ ಸಿನಿಮಾದ ನಿರ್ದೇಶಕ ಗುರು ದೇಶಪಾಂಡೆ. ಇಲ್ಲಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಒಂದು ಎಳೆ ತುಸು ಮಾಮೂಲಿ ಎನ್ನಬಹುದು.

ಸಂಪತ್ (ಶ್ರೇಯಸ್) ಚಿತ್ರದುರ್ಗದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವ. ಅವನ ತಂದೆ (ರವಿಚಂದ್ರನ್) ಕನ್ನಡ ಪ್ರೊಫೆಸರ್. ತಾಯಿ (ಸುಧಾರಾಣಿ) ಗೃಹಿಣಿ. ಸಂಪತ್‌ಗೆ ಸಂಗೀತವೆಂದರೆ ಪ್ರಾಣ. ಈತ ಓದಲು ಸೇರುವುದು ದಾವಣಗೆರೆಯ ಎಂಜಿನಿಯರಿಂಗ್ ಕಾಲೇಜನ್ನು. ಅಲ್ಲಿ ಸಂಗೀತಾ (ನಿಶ್ವಿಕಾ) ಎನ್ನುವ ಹುಡುಗಿಯ ಜೊತೆ ಪ್ರೀತಿ ಅರಳುತ್ತದೆ.

ಆದರೆ, ನಿಶ್ವಿಕಾ ಅವರ ಮನೆಯಲ್ಲಿ ಪ್ರೀತಿ–ಪ್ರೇಮಕ್ಕೆ ಅವಕಾಶ ಇಲ್ಲ. ಇಷ್ಟಿದ್ದರೂ, ಇವರಿಬ್ಬರ ನಡುವಿನ ಪ್ರೀತಿ ಹೇಗೋ ಮುಂದೆ ಸಾಗುತ್ತಿರುತ್ತದೆ. ಇದು ಚಿತ್ರದ ಕಥೆಯ ಒಂದು ಎಳೆ ಮಾತ್ರ. ಕಥೆಯ ಇನ್ನೊಂದು ಮಗ್ಗುಲು ಬೇರೆಯದೇ ಇದೆ.

ADVERTISEMENT

ಆ ಮಗ್ಗುಲಿನಲ್ಲಿ, ಸಂಪತ್‌ಗೆ ಎಂಜಿನಿಯರಿಂಗ್‌ ಪದವಿ ಮುಗಿಸಿ ಕೆಲಸಕ್ಕೆ ಸೇರುವ ಮನಸ್ಸು ಇಲ್ಲ. ಆತನಿಗೆ ಸಂಗೀತ ಕ್ಷೇತ್ರದಲ್ಲೇ ಏನಾದರೂ ಸಾಧನೆ ಮಾಡುವ ಆಸೆ. ಅದಕ್ಕಾಗಿ ಆತ ಅನುಭವಿಸುವ ಕಷ್ಟಗಳು ಒಂದೆರಡಲ್ಲ. ಎರಡೂ ಎಳೆಯನ್ನು ಒಟ್ಟಿಗೆ ತಂದು ನೋಡಿದಾಗ, ‘ಒಂದನ್ನು ಪಡೆದು ಇನ್ನೊಂದನ್ನು ಕಳೆದುಕೊಳ್ಳುವ’ ಕಥೆ ಹೇಳುವ ಸಿನಿಮಾ ಇದು ಅನಿಸುತ್ತದೆ.

ಈ ಸಿನಿಮಾದಲ್ಲಿ ಕನ್ನಡದ ಜಾನಪದ ಹಾಡುಗಳನ್ನು, ವಚನಗಳನ್ನು ಆಧುನಿಕ ಟ್ಯೂನ್‌ ನೀಡಿ ಬಳಸಿಕೊಳ್ಳಲಾಗಿದೆ. ಇದು ಈಗಿನ ‘ಪಡ್ಡೆ’ಗಳಿಗೆ ಇಷ್ಟವಾಗಬಹುದು. ಒಂದು ರೀತಿಯಲ್ಲಿ, ಹಾಡುಗಳು ಹಾಗೂ ಸಂಗೀತದ ಟ್ರ್ಯಾಕ್‌ ಚಿತ್ರದ ಪ್ಲಸ್ ಪಾಯಿಂಟ್.

ಆದರೆ, ಚಿತ್ರ ವೀಕ್ಷಿಸುತ್ತಾ ಸಾಗಿದಂತೆ, ನಿರೂಪಣೆ ತುಸು ದೀರ್ಘವಾಯಿತು ಅನಿಸುತ್ತದೆ. ಇಂದಿನ ಸಿನಿಮಾ ವೀಕ್ಷಕರು, ಕೈಯಲ್ಲಿರುವ ಒಟಿಟಿ ಆ್ಯಪ್‌ಗಳನ್ನು ಬಳಸಿ ಬಿಗಿಯಾದ ನಿರೂಪಣೆಯ ವೆಬ್‌ ಸಿರೀಸ್‌ಗಳನ್ನೂ ನೋಡುವವರು. ಅಂಥವರಿಗೆ ದೀರ್ಘ ಅನಿಸುವ ಸಿನಿಮಾಗಳನ್ನು ತೋರಿಸಿದರೆ ಇಷ್ಟವಾಗಬಹುದೇ ಎಂಬ ಬಗ್ಗೆ ನಿರ್ದೇಶಕರು ಆಲೋಚಿಸಬೇಕು.

ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಪುನೀತ್ ರಾಜ್‌ಕುಮಾರ್‌ ಅಭಿನಯಿಸಿದ್ದಾರೆ. ರಕ್ಷಿತ್ ಅವರು ಕಿರಿಕ್ ಪಾರ್ಟಿ ಚಿತ್ರದ ‘ಕರ್ಣ’ನನ್ನು ನೆನಪಿಸಿದರೆ ಅಚ್ಚರಿಯಿಲ್ಲ. ಪುನೀತ್ ಅವರು ಒಮ್ಮೆ ವೇದಿಕೆ ಮೇಲೆ ಬಂದುಹೋಗುತ್ತಾರಷ್ಟೆ! ರವಿಚಂದ್ರನ್ ಅವರು ಸಂಪತ್ ತಂದೆಯಾಗಿ, ಗತ್ತಿನ ಅಭಿನಯ ತೋರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.