ADVERTISEMENT

ತಾಯಿ– ಮಗನ ಬಾಂಧವ್ಯ ಕಥನ ‘ಪದ್ಮಾವತಿ’

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 12:08 IST
Last Updated 24 ಜೂನ್ 2019, 12:08 IST
ಸಾಕ್ಷಿ ಮೇಘನಾ ಮತ್ತು ವಿಕ್ರಂ ಆರ್ಯ
ಸಾಕ್ಷಿ ಮೇಘನಾ ಮತ್ತು ವಿಕ್ರಂ ಆರ್ಯ   

‘ಅನುಭವಕ್ಕಾಗಿ ಮಾಡಿರುವ ಸಿನಿಮಾ ಇದು’ –‘ಪದ್ಮಾವತಿ’ ಚಿತ್ರದ ನಾಯಕ ನಟ ವಿಕ್ರಂ ಆರ್ಯ ಅವರ ಈ ಮಾತಿನಲ್ಲಿ ಕೊಂಚ ಬೇಸರ ಮಡುಗಟ್ಟಿತ್ತು. ಇದಕ್ಕೆ ಕಾರಣವನ್ನೂ ಅವರೇ ಬಿಡಿಸಿಟ್ಟರು.

ಎರಡೂವರೆ ವರ್ಷದ ಹಿಂದೆ ‘ತಲೆ ಬಾಚ್ಕೊಳ್ಳಿ ಪೌಡರ್‌ ಹಾಕ್ಕೊಳ್ಳಿ’ ಚಿತ್ರದಲ್ಲಿ ಹಾಸ್ಯ ಕಲಾವಿದರ ದಂಡೇ ಇದ್ದರೂ ಚಿತ್ರ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಹಾಗಾಗಿಯೇ, ‘ಪದ್ಮಾವತಿ’ಯಲ್ಲಿ ಅನುಭವದ ಹುಡುಕಾಟಕ್ಕೆ ಬಿದ್ದಿದ್ದೇನೆ ಎಂದು ನಕ್ಕರು.

‘ದೊಡ್ಡ ಬಜೆಟ್‌ ಚಿತ್ರಗಳಷ್ಟೇ ಗಾಂಧಿನಗರದಲ್ಲಿ ಗೆಲ್ಲುವುದಿಲ್ಲ. ಒಳ್ಳೆಯ ಕಂಟೆಂಟ್‌ ಇರುವ ಕಡಿಮೆ ಬಜೆಟ್‌ನ ಸಿನಿಮಾಗಳು ಗೆಲ್ಲುತ್ತವೆ. ಸ್ಟಾರ್‌ ನಟರು ಮತ್ತು ಬಿಗ್‌ ಬಜೆಟ್‌ನ ಚಿತ್ರಗಳು ಕೂಡ ಸೋಲು ಕಾಣುತ್ತವೆ. ಒಳ್ಳೆಯ ಕಥಾವಸ್ತು ಇದ್ದರೆ ಮಾತ್ರ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಾರೆ’ ಎಂದರು ವಿಕ್ರಂ ಆರ್ಯ.

ADVERTISEMENT

ಈ ಸಿನಿಮಾದಲ್ಲಿ ತಾಯಿ ಮತ್ತು ಮಗನ ಸೆಂಟಿಮೆಂಟ್‌ ಸುತ್ತ ಕಥೆ ಹೆಣೆಯಾಗಿದೆ. ಆ್ಯಕ್ಷನ್‌, ಕಾಮಿಡಿಯೂ ಇದೆಯಂತೆ.

ಮಿಥುನ್‌ ಚಂದ್ರಶೇಖರ್‌ ಈ ಚಿತ್ರ ನಿರ್ದೇಶಿಸಿದ್ದಾರೆ. ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಅವರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ದುಡಿದಿದ್ದಾರೆ. ಈ ಸಿನಿಮಾ ಮೂಲಕ ಸಿನಿಮಾ ನಿರ್ದೇಶಕನ‍ಕ್ಯಾಪ್‌ ಧರಿಸಿದ್ದ ಖುಷಿ ಅವರ ಮೊಗದಲ್ಲಿತ್ತು. ‘ವರ್ತಮಾನ ಮತ್ತು ಭೂತಕಾಲದಲ್ಲಿ ಘಟನೆಗೆ ಮತ್ತೆ ವರ್ತಮಾನದಲ್ಲಿ ಉತ್ತರ ಸಿಗುತ್ತದೆ’ ಎಂದರು.

ಸಾಕ್ಷಿ ಮೇಘನಾ ಈ ಚಿತ್ರದ ನಾಯಕಿ. ಇದು ಅವರ ಮೂರನೇ ಚಿತ್ರ. ‘ಮೂರು ವಿಭಿನ್ನವಾದ ಶೇಡ್‌ಗಳಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಮಾಹಿತಿ ನೀಡಿದರು.

ಚಿತ್ರದಲ್ಲಿ ಐದು ಹಾಡುಗಳು ಮತ್ತು ಮೂರು ಬಿಟ್ಸ್‌ಗಳಿದ್ದು, ದಿನೇಶ್‌ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಕೆ.ಎಂ. ಶೋಯೆಬ್‌ ಅಹ್ಮದ್‌ ಅವರ ಛಾಯಾಗ್ರಹಣವಿದೆ. ದಾಮೋದರ ಪರಾಗೆ ಮತ್ತು ನಾಮದೇವ ಭಟ್ಟರ್‌ ಬಂಡವಾಳ ಹೂಡಿದ್ದಾರೆ. ಮುಂದಿನ ತಿಂಗಳು ಜನರ ಮುಂದೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.