ಮುಂಬೈ: ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ಅವರಿಗೆಭಾರತದ ಅತ್ಯುನ್ನತ ಗೌರವ ಪದ್ಮ ಶ್ರೀ ಪುರಸ್ಕಾರ ನೀಡಿರುವುದು ವಿವಾದಕ್ಕೆ ಕಾರಣವಾಗಿದ್ದು 'ನನಗೆ ಪದ್ಮ ಶ್ರೀ ನೀಡಿರುವುದಕ್ಕೂ ನನ್ನ ಪಾಕ್ ತಂದೆಗೂ ಸಂಬಂಧ ಕಲ್ಪಿಸುವುದು ಬೇಡ' ಎಂದುಅದ್ನಾನ್ ಸಾಮಿ ಹೇಳಿದ್ದಾರೆ.
2016ರಲ್ಲಿ ನಾನು ಭಾರತೀಯ ಪೌರತ್ವವನ್ನು ಪಡೆದಿದ್ದೇನೆ. ಈ ಅತ್ಯುನ್ನತ ಗೌರವ ನೀಡಿರುವುದಕ್ಕಾಗಿ ಸರ್ಕಾರಕ್ಕೆನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆದರೆಪದ್ಮ ಶ್ರೀ ನೀಡಿರುವುದಕ್ಕೂ ನನ್ನ ತಂದೆಗೂ ಏನು ಸಂಬಂಧ? ಎಂದು ವಿರೋಧ ವ್ಯಕ್ತಪಡಿಸುವವರನ್ನು ಅದ್ನಾನ್ ಸಾಮಿ ಕೇಳಿದ್ದಾರೆ.
ನನ್ನ ತಂದೆ ಪಾಕಿಸ್ತಾನ ವಾಯುಪಡೆಯಲ್ಲಿ ಫೈಲಟ್ ಆಗಿ ಕೆಲಸ ಮಾಡಿದ್ದರು ಎಂಬ ಕಾರಣಕ್ಕೆ ನನಗೆ ಪದ್ಮ ಪುರಸ್ಕಾರ ನೀಡಿರುವುದನ್ನು ವಿರೋಧಿಸುತ್ತಿರುವವರ ವಾದ ಅಪ್ರಸ್ತುತ ಎಂದು ಅವರು ಹೇಳಿದ್ದಾರೆ.
ನನ್ನ ತಂದೆ ವೃತ್ತಿಪರ ಸೈನಿಕರಾಗಿದ್ದು ಅವರು ಪಾಕಿಸ್ತಾನ ವಾಯುಪಡೆಯಲ್ಲಿ ಫೈಲಟ್ ಆಗಿ ಕೆಲಸ ಮಾಡಿದ್ದಾರೆ. ಅವರು ತಮ್ಮ ದೇಶಕ್ಕಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅದಕ್ಕಾಗಿ ನಾನು ಅವರನ್ನು ಗೌರವಿಸುತ್ತೇನೆ, ಅವರು ಸೇವೆಗಾಗಿ ಪ್ರಶಸ್ತಿಗಳು ಬಂದಿವೆ. ಅದರಿಂದ ನಾನು ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಅದೇ ರೀತಿ ನಾನು ಮಾಡುವ ಕೆಲಸಕ್ಕೆ ಅವರು ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಪ್ರಶಸ್ತಿಗೂ ನನ್ನ ತಂದೆಗೂ ಏನು ಸಂಬಂಧವಿದೆ ಎಂದು ಅದ್ನಾನ್ ಸಾಮಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪ್ರಕಟಿಸಿರುವ118 ಪದ್ಮ ಶ್ರೀ ಪುರಸ್ಕೃತರಲ್ಲಿ ಅದ್ನಾನ್ ಸಾಮಿ ಕೂಡ ಒಬ್ಬರು. ಅವರಿಗೆ ಈ ಉನ್ನತ ಗೌರವ ನೀಡಿರುವುದನ್ನು ಬಿಜೆಪಿ ಬಲವಾಗಿ ಸಮರ್ಥಿಸಿಕೊಂಡಿದೆ. ಆದರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ವಿರೋಧ ವ್ಯಕ್ತಪಡಿಸಿವೆ.
ಟೀಕೆ ಮಾಡುವ ಜನರು ಕೇವಲ ಸಣ್ಣತನದ ರಾಜಕಾರಣಿಗಳು, ಅವರು ತಮ್ಮ ರಾಜಕೀಯ ಅಜೆಂಡಾಗಳ ಕಾರ್ಯಾಸೂಚಿಗೆ ಅನುಗುಣವಾಗಿ ಈ ರೀತಿ ಮಾಡುತ್ತಿದ್ದಾರೆ. ನನಗೂ ಅದಕ್ಕೂ ಸಂಬಂಧ ಇಲ್ಲ, ನಾನು ರಾಜಕಾರಣಿ ಅಲ್ಲ, ನಾನು ಸಂಗೀತಗಾರ ಎಂದು ಸಾಮಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನನಗೆ ನೌಶಾದ್ ಪ್ರಶಸ್ತಿ ನೀಡಲಾಗಿತ್ತು. ಆಗ ನಾನು ಪಾಕಿಸ್ತಾನದ ಪ್ರಜೆಯಾಗಿದ್ದೆ.ಈಗ ನಾನು ಭಾರತೀಯ ಪ್ರಜೆಯಾಗಿದ್ದುಪದ್ಮ ಪುರಸ್ಕಾರ ಪಡೆಯಲು ಅರ್ಹನಾಗಿದ್ದೇನೆ. ಅವರು ಪಾಕಿಸ್ತಾನದ ಅಂಶತರುತ್ತಿರುವುದು ತಮಾಷೆಯಾಗಿದೆ ಎಂದುಅದ್ನಾನ್ ಸಾಮಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸಂದರ್ಭದಲ್ಲಿ ಅದ್ನಾನ್ ಸಾಮಿ ತಂದೆ ಪಾಕಿಸ್ತಾನ ವಾಯುಪಡೆಯಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಈ ಕಾರಣಕ್ಕಾಗಿ ಕಾಂಗ್ರೆಸ್ ಅದ್ನಾನ್ ಸಾಮಿಗೆ ದೇಶದ ಅತ್ಯುನ್ನತ ಗೌರವ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.