ADVERTISEMENT

‘ಲೆಗಸಿ’ಯ ನೊಗ ಹೊತ್ತು ವಿಹಾನ್ ವಿಹಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 13:38 IST
Last Updated 17 ಜನವರಿ 2020, 13:38 IST
ವಿಹಾನ್‌
ವಿಹಾನ್‌   
""

ಪಡ್ಡೆ ಹುಡುಗನಾಗಿ, ನವಿರು ಪ್ರೇಮಿಯಾಗಿ, ಭಗ್ನಹೃದಯದ ಅಬ್ಬೆಪಾರಿಯಾಗಿ ಶೃಂಗಾರದ ಹೊಂಗೆಮರದ ತುದಿಗೇರಿ ತೂಗಾಡಿದ್ದ ‘ಪಂಚತಂತ್ರ’ದ ಹೀರೊ ವಿಹಾನ್ ಈಗ ಲೇಖಕನಾಗಿದ್ದಾನೆ. ‘ಅಂದರೆ, ಸಿನಿಮಾ ಸಾವಾಸ ಸಾಕು ಎಂದು ಬಣ್ಣದ ಜಗತ್ತಿನಿಂದ ದೂರಾಗಿ ಲೇಖನಿ ಹಿಡಿದರಾ?’ ಎಂದು ಹುಬ್ಬೇರಿಸಬೇಡಿ. ಸ್ವಲ್ಪ ತಾಳಿ, ವಿಷಯವಿನ್ನೂ ಬಾಕಿ ಇದೆ. ವಿಹಾನ್ ಲೇಖನಿ ಹಿಡಿದಿರುವುದೂ ಬೆಳ್ಳಿತೆರೆಯ ಚೌಕಟ್ಟಿನೊಳಗಡೆಯೇ.

‘ಪಂಚತಂತ್ರ’ ಸಿನಿಮಾದ ನಂತರ ವಿಹಾನ್, ಜಯಣ್ಣ ಕಂಬೈನ್ಸ್‌ನ ಸಿನಿಮಾವೊಂದರಲ್ಲಿ ನಟಿಸುವ ಸುದ್ದಿ ಸಿಕ್ಕಿತ್ತು. ಹಾಗೆಯೇ ಇನ್ನೊಂದು ಸಿನಿಮಾಕ್ಕೂ ಅವರು ಸಹಿ ಹಾಕಿರುವ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಈಗ ಸಿನಿಮಾದ ಶೀರ್ಷಿಕೆಯೊಟ್ಟಿಗೆ, ಇನ್ನೂ ಕೆಲವು ಮಾಹಿತಿಗಳನ್ನು ಸ್ವತಃ ವಿಹಾನ್‌ ಅವರೇ ಬಹಿರಂಗಪಡಿಸಿದ್ದಾರೆ. ದರ್ಶನ್ ನಟನೆಯ ‘ಕುರುಕ್ಷೇತ್ರ’ ಸಿನಿಮಾಕ್ಕೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಎಂ. ಸುಭಾಷ್‌ಚಂದ್ರ ಎನ್ನುವವರು ಈ ಚಿತ್ರದ ಮೂಲಕ ನಿರ್ದೇಶಕನ ಟೋಪಿ ತೊಡಲಿದ್ದಾರೆ. ಕಥೆಯೂ ಅವರದ್ದೇ. ಈ ಚಿತ್ರದ ಹೆಸರು ‘ಲೆಗಸಿ’. ‘ಗ್ರೇಟ್‌ಬ್ರೋಸ್ ಪಿಕ್ಚರ್ಸ್‌’ ಅಡಿಯಲ್ಲಿ ಮಂಜುನಾಥ್ ಮತ್ತು ರಾಜೇಂದ್ರ ಎನ್ನುವವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುರೇಶ್‌ ರಾಜ್‌ ಸಂಗೀತ ಮತ್ತು ಸುಂದರ್ ಪಂಡಿಯಾನ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಾಕಲೆಟ್ ಬಾಯ್‌ಗೆ ಫೈಟ್ ಕಲಿಸುವ ಹೊಣೆಯನ್ನು ಶಿವ ಪ್ರೇಮ್ ವಹಿಸಿಕೊಂಡಿದ್ದಾರೆ.

‘ಲೆಗಸಿ ಎಂದರೆ ಪರಂಪರೆ ಎಂದು ಅರ್ಥ. ಈ ಚಿತ್ರದ ಕಥೆ ಶೀರ್ಷಿಕೆ ತುಂಬ ಚೆನ್ನಾಗಿ ಹೊಂದುತ್ತದೆ. ಇದೊಂದು ಸಾಹಸಪ್ರಧಾನ ಚಿತ್ರ. ನಾನು ಈ ಚಿತ್ರದಲ್ಲಿ ಲೇಖಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ವಿಹಾನ್ ವಿವರಣೆ ನೀಡುತ್ತಾರೆ.

ADVERTISEMENT

ತಮ್ಮ ಮೊದಲ ಚಿತ್ರ ‘ಕಾಲ್ ಕೇಜಿ ಪ್ರೀತಿ’ ಮತ್ತು ಯೋಗರಾಜ ಭಟ್ಟರ ‘ಪಂಚತಂತ್ರ’ ಸಿನಿಮಾಗಳೆರಡರಲ್ಲಿಯೂ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ವಿಹಾನ್‌ ಕೈಯಲ್ಲಿ ಮಚ್ಚು ಹಿಡಿದರೆ ಹೇಗಿರಬಹುದು? ಅದೂ ಲೇಖಕನ ಪಾತ್ರದಲ್ಲಿ ಕಾಣಿಸಿಕೊಂಡು ಫೈಟ್ ಮಾಡುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದಲ್ಲಿಯೇ ಉತ್ತರ ಸಿಗಲಿದೆ ಎಂದು ಕುತೂಹಲದ ಒಗ್ಗರಣೆ ಹಾಕಿ ನಗುತ್ತಾರೆ ಅವರು. ಪಾತ್ರ ಲೇಖಕನಾದರೂ, ಹೆಸರಲ್ಲಿಯೇ ಪರಂಪರೆಯ ಸುಳಿವು ಇದ್ದರೂ ಸಾಂಪ್ರದಾಯಿಕ ಲೇಖಕನ ರೂಪದಲ್ಲೇನೂ ಅವರು ಕಾಣಿಸಿಕೊಂಡಿಲ್ಲ. ಸಖತ್ ಮಾಡ್‌ ಹುಡುಗನ ಲುಕ್‌ನಲ್ಲಿಯೇ ಮಿಂಚುತ್ತಿದ್ದಾರೆ.

‘ಪಂಚತಂತ್ರ ಸಿನಿಮಾದಲ್ಲಿನ ನಟನೆಗೆ ನನಗೆ ಸಾಕಷ್ಟು ಪ್ರಶಂಸೆ ಸಿಕ್ಕಿತು. ಸಾಕಷ್ಟು ಅವಕಾಶಗಳೂ ಬಂದವು. ಬಂದಿದ್ದೆಲ್ಲವನ್ನೂ ಬಾಚಿಕೊಳ್ಳುವ ಮನಸ್ಥಿತಿ ನನ್ನದಲ್ಲ. ಸಿನಿಮಾ ಮೂಲಕ ಹಣ ಮಾಡಬೇಕು ಎಂಬ ಉದ್ದೇಶವೂ ನನ್ನದಲ್ಲ. ಸಿನಿಮಾ ನನ್ನ ಇಷ್ಟದ ಮಾಧ್ಯಮ. ನಾನು ನಟಿಸಿದ ಪಾತ್ರಗಳನ್ನು ಜನರು ಬಹುಕಾಲ ನೆನಪಿನಲ್ಲಿಡಬೇಕು. ಒಳ್ಳೆಯ ಸಿನಿಮಾಗಳಲ್ಲಿಯೇ ನಟಿಸಬೇಕು ಎಂದು ನನ್ನ ನಿಲುವು. ಹಾಗಾಗಿ ಹಲವು ಕಥೆಗಳನ್ನು ಒಪ್ಪಿಕೊಳ್ಳಲಿಲ್ಲ. ಆದರೆ ‘ಲೆಗಸಿ’ ಕಥೆ ತುಂಬ ಭಿನ್ನವಾಗಿದೆ. ನಾನು ಈ ಚಿತ್ರದಲ್ಲಿ ನಟಿಸಲೇಬೇಕು ಅನಿಸಿತು. ಹಾಗಾಗಿ ಒಪ್ಪಿಕೊಂಡೆ’ ಎಂದು ಚಿತ್ರದ ಭಾಗವಾದ ಕುರಿತು ಅವರು ಹೇಳುತ್ತಾರೆ.

ಜ.16ರಂದು ಚಿತ್ರದ ಮುಹೂರ್ತವಾಗಿ ಚಿತ್ರೀಕರಣವೂ ಆರಂಭವಾಗಿದೆ. ಚಿತ್ರದ ಹಲವು ಪಾತ್ರಗಳಿಗೆ ನಟರ ಆಯ್ಕೆ ಇನ್ನೂ ನಡೆಯಬೇಕಿದೆ. ಈ ಚಿತ್ರದಲ್ಲಿ ನಾಯಕಿಯ ಪಾತ್ರವೂ ಅಷ್ಟೇ ಮುಖ್ಯವಾಗಿದೆಯಂತೆ. ಹಾಗಾಗಿ ನಾಯಕಿಗಾಗಿ ಶೋಧ ನಡೆಸಲಾಗುತ್ತಿದೆ. ಸದ್ಯವೇ ಚಿತ್ರದ ಮೋಷನ್ ಪೋಸ್ಟರ್‌ ಕೂಡ ಬಿಡುಗಡೆ ಮಾಡುತ್ತಿದ್ದಾರೆ. ಜಯಣ್ಣ ಕಂಬೈನ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಇನ್ನೊಂದು ಸಿನಿಮಾದಲ್ಲಿಯೂ ವಿಹಾನ್ ನಾಯಕನಾಗಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.