ನವದೆಹಲಿ: ಆಶುತೋಷ್ ಗೊವಾರಿಕರ್ ನಿರ್ದೇಶನದ ಬಹುತಾರಾಗಣದ'ಪಾಣಿಪತ್' ಚಿತ್ರದಲ್ಲಿಅಫ್ಗಾನಿಸ್ತಾನದಚಕ್ರವರ್ತಿ ಅಹಮದ್ ಶಹಾ ಅಬ್ದಾಲಿ (ಅಹ್ಮದ್ ಶಾಹ ದುರ್ರಾನಿ) ಅವರನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಅಫ್ಗಾನ್‌ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ದೆಹಲಿಯಲ್ಲಿರುವ ಅಫ್ಗಾನ್ ರಾಯಭಾರಿತಾಹೀರ್‌ಖಾದಿರಿ,ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಜಾವಡೇಕರ್ ಅವರೊಂದಿಗೆ ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಅಹಮದ್ ಶಹಾ ಅಬ್ದಾಲಿ (ಅಹ್ಮದ್ ಶಾಹ ದುರ್ರಾನಿ) ಪಾತ್ರದಲ್ಲಿ ಸಂಜಯ್ ದತ್,ಸದಾಶಿವ ರಾವ್ ಭಾವು ಪಾತ್ರದಲ್ಲಿ ಅರ್ಜುನ್ ಕಪೂರ್, ಪಾರ್ವತಿ ಬಾಯಿ ಪಾತ್ರದಲ್ಲಿಕೃತಿ ಸೇನನ್ ನಟಿಸಿದ್ದಾರೆ.
ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಪಾಣಿಪತ್ ಸಿನಿಮಾ, 1761ರ ಜನವರಿ 14ರಂದು ಇಂದಿನ ಹರಿಯಾಣದಲ್ಲಿರುವ ಪಾಣಿಪತ್‌ನಲ್ಲಿ ಮರಾಠ ಸಾಮ್ರಾಜ್ಯದ ನಾಯಕರಿಗೂ ಮತ್ತು ಅಹ್ಮದ್ ಶಾಹ ದುರ್ರಾನಿ ನೇತೃತ್ವದ ಪಾಶ್ತುನ್ ಸೇನೆಯ ಮಧ್ಯೆ ನಡೆದಮೂರನೆಯ ಪಾಣಿಪತ್ ಯುದ್ಧದ ಹಿನ್ನೆಲೆಯನ್ನು ಒಳಗೊಂಡಿದೆ.
ನ. 4ರಂದು ಯೂಟ್ಯೂಬ್‌ನಲ್ಲಿಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಅಫ್ಗಾನಿಸ್ಥಾನದ ಸಂಸ್ಥಾಪಕ ಶಹಾ ಅಬ್ದಾಲಿ ಕುರಿತು ಕ್ರೂರ ಆಡಳಿತಗಾರನಾಗಿ ಬಿಂಬಿಸಲಾಗಿದ್ದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅಫ್ಗಾನ್ ತಿಳಿಸಿದೆ.
ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದೆಹಲಿಯಲ್ಲಿರುವ ಅಫ್ಗಾನ್ ರಾಯಭಾರಿ ಅಧಿಕಾರಿಗಳು ಈ ಕುರಿತು ಭಾರತದ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಪಾಣಿಪತ್ ಚಿತ್ರದಲ್ಲಿ ಶಹಾ ಅಬ್ದಾಲಿಗೆ ಸಂಬಂಧಿಸಿ ಆತನ ಪಾತ್ರದ ಬಗ್ಗೆ ಸೂಕ್ತವಲ್ಲದ / ವಿಕೃತ ಚಿತ್ರೀಕರಣ ಅಫ್ಗಾನಿಸ್ಥಾನದ ಜನರ ಭಾವನೆಗಳನ್ನು ಪ್ರಚೋದಿಸಬಹುದು. ಜೊತೆಗೆ ಎರಡು ದೇಶಗಳಲ್ಲಿ ಜನರಲ್ಲಿರುವ ನಂಬಿಕೆ ಮತ್ತು ಸಾಮರಸ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಚಿತ್ರ ಕುರಿತು ಸಮಸ್ಯೆಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಅಫ್ಗಾನಿಸ್ತಾನದ ರಾಯಭಾರಿ ತಾಹೀರ್ ಖಾದಿರಿ ಹಾಗೂ ಜಾವಡೇಕರ್ ನಡುವೆ ಸಭೆಯೊಂದನ್ನು ಏರ್ಪಡಿಸುವಂತೆ ಸಚಿವಾಲಯಕ್ಕೆ ಸೂಚಿಸಿತ್ತು.
ಈ ಚಿತ್ರವು ಯಾವುದೇ ರೀತಿಯಲ್ಲಿ ರಾಜ್ಯದಿಂದ ಧನಸಹಾಯ ಅಥವಾ ಪ್ರಾಯೋಜಕತ್ವವನ್ನು ಹೊಂದಿಲ್ಲ ಎಂದು ಭಾರತವು ಅಪ್ಗಾನ್ ಅಧಿಕಾರಿಗಳಿಗೆ ಹೇಳುವ ಸಾಧ್ಯತೆ ಇದೆ. ಚಿತ್ರವನ್ನು ಬಾಲಿವುಡ್ ಸ್ವತಂತ್ರನಿರ್ದೇಶಕರೊಬ್ಬರು ನಿರ್ಮಾಣ ಮಾಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಆದಾಗ್ಯೂ, ಭಾರತ ಮತ್ತು ಅಫ್ಗಾನಿಸ್ತಾನದ ನಡುವಿನ ಪ್ರಮುಖರಾಜತಂತ್ರಿಕ ಸಹಭಾಗಿತ್ವದಿಂದಾಗಿ ಅಲ್ಲಿನ ಜನತೆ ತೋರಿಸುವ ಕಳವಳದ ಬಗ್ಗೆ ಗಮನ ಹರಿಸಲು ಕೇಂದ್ರ ಸರ್ಕಾರ ಸಿದ್ಧವಿದೆಎಂದು ಮೂಲಗಳು ತಿಳಿಸಿವೆ.
ಅಫ್ಗಾನ್ ವಾದವೇನು?
ಸದ್ಯ ಪಾಣಿಪತ್ ಚಿತ್ರದ ಟ್ರೇಲರ್ ಯೂಟ್ಯೂಬ್‌ನಲ್ಲಿಬಿಡುಗಡೆಯಾಗಿದ್ದು, ಇದುವರೆಗೆ 2.9 ಕೋಟಿ ವೀಕ್ಷಣೆ ಕಂಡಿದೆ. ಜೊತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ಆಗಿದೆ. ಅಫ್ಗಾನಿಸ್ತಾನದ ಜನ, ಚಕ್ರವರ್ತಿ ಅಹಮದ್ ಶಹಾ ಅಬ್ದಾಲಿ (ಅಹ್ಮದ್ ಶಾಹ ದುರ್ರಾನಿ) ಅವರನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂಬ ಭಾವನೆ ಹೊಂದಿದ್ದಾರೆ.
ಚಿತ್ರದ ಕಥಾಸಾರಾಂಶ ಬಗ್ಗೆ ಮಾಹಿತಿ ಪಡೆಯಲು ನಿರ್ದೇಶಕರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದ್ದರು.ಆದರೆ, ಸಂಪರ್ಕ ಸಾಧ್ಯವಾಗಿಲ್ಲ ಎಂದು ದೆಹಲಿಯಲ್ಲಿರುವ ಆಫ್ಗಾನ್ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.
ಭಾರತದ ಮಾಜಿ ಅಫ್ಗಾನಿಸ್ತಾನ ರಾಯಭಾರಿ ಶೈದಾ ಅಬ್ದಾಲಿ, ನಟ ಸಂಜಯ್ ದತ್ ಅವರಿಗೆ ಬುಧವಾರ ಟ್ವೀಟ್ ಮಾಡಿದ್ದು, ‘ಇಂಡೋ- ಆಪ್ಗಾನ್ ಸಂಬಂಧಗಳನ್ನು ಬಲಪಡಿಸುವಲ್ಲಿ ಭಾರತೀಯ ಚಿತ್ರರಂಗವು ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ‘ಪಾಣಿಪತ್‘ ಚಿತ್ರವು ಆ ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದೆ ಎಂದು ನಾನು ಭಾವಿಸುತ್ತೇನೆ‘ ಎಂದಿದ್ದಾರೆ.
ಅಫ್ಗಾನಿಸ್ತಾನದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪಾಣಿಪತ್ ಚಿತ್ರದ ಬಗ್ಗೆ ಟೀಕಿಸಿದ್ದಾರೆ.
ಇದನ್ನೂ ಓದಿ...ಪಾಣಿಪತ್: ಚಿತ್ತಸೆಳೆವ ‘ದುರ್ರಾನಿ’ ದತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.