ಹಿಂದಿಯ ‘ಕ್ವೀನ್’ ಚಿತ್ರದ ಕನ್ನಡ ರೂಪ ‘ಬಟರ್‌ಫ್ಲೈ’. ಇದು ಪಾತರಗಿತ್ತಿಯಂತೆ ಸ್ವಚ್ಛಂದವಾಗಿ ಹಾರಲು ಬಯಸುವ ಹೆಣ್ಣಿನ ಕಥೆಯೂ ಹೌದು. ನಟ ರಮೇಶ್ ಅರವಿಂದ್ ನಿರ್ದೇಶನದ ಈ ಚಿತ್ರ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಸಿದ್ಧವಾಗಿದೆ.
ಹಿಂದಿಯಲ್ಲಿ ಕಂಗನಾ ರನೋಟ್ ನಿಭಾಯಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ನಿಭಾಯಿಸಿದ್ದಾರೆ. ಪಾರುಲ್ ಅವರು ಕನ್ನಡದಲ್ಲಿ ಇದುವರೆಗೆ ಇಂಥದ್ದೊಂದು ಪಾತ್ರವನ್ನು ನಿಭಾಯಿಸಿದಂತಿಲ್ಲ. ಪಾರುಲ್ ಅವರು ‘ಸಿನಿಮಾ ಪುರವಣಿ’ಗೆ ಮಾತಿಗೆ ಸಿಕ್ಕಿದ್ದರು.
‘ಬಟರ್‌ಫ್ಲೈ ಚಿತ್ರ ಬಿಡುಗಡೆ ಆದ ನಂತರ ನಿಮ್ಮ ಇಮೇಜ್ ಬದಲಾಗಬಹುದೇ’ ಎಂದು ಕೇಳಿದಾಗ ಸುದೀರ್ಘ ಉತ್ತರ ನೀಡಿದರು. ‘ಕರ್ನಾಟಕದಲ್ಲಿ ನನಗೆ ಅಂತಹ ಇಮೇಜ್ ಎಂಬುದೇ ಇಲ್ಲ. ಆದರೆ, ಕೆಲವರು ನನ್ನನ್ನು ಗ್ಲಾಮರ್ ಜೊತೆಗಿಟ್ಟು ನೋಡುವುದು ನಿಜ. ಅಂಥವರಿಗೆ ನಾನು ಗೋಕರ್ಣದಂತಹ ಪುಟ್ಟ ಊರಿನ ಯುವತಿಯ ಪಾತ್ರವನ್ನೂ ನಿಭಾಯಿಸಬಲ್ಲೆ ಎಂಬುದನ್ನು ಅರಗಿಸಿಕೊಳ್ಳಲು ತುಸು ಸಮಯ ಬೇಕಾಗಬಹುದು. ಈ ಸಿನಿಮಾದ ನಂತರ ನನ್ನ ಕುರಿತು ಕೆಲವರಲ್ಲಿ ಇರುವ ಗ್ರಹಿಕೆ ಖಂಡಿತ ಬದಲಾಗುತ್ತದೆ’ ಎಂದರು.
ಅದೇ ಪ್ರಶ್ನೆಯ ಉತ್ತರದ ಮುಂದುವರಿದ ಭಾಗವಾಗಿ, ‘ಈ ಚಿತ್ರಕ್ಕೆ ವೀಕ್ಷಕರು ಒಳ್ಳೆಯ ಸ್ಪಂದನೆ ನೀಡಿದರೆ ಒಬ್ಬಳು ಹೆಣ್ಣಾಗಿ ನನಗೆ ಪ್ರಯೋಜನ ಆಗುತ್ತದೆ. ಕಲಾವಿದೆಯಾಗಿ ನನಗೆ ಈ ಚಿತ್ರದಿಂದ ವೈಯಕ್ತಿಕವಾಗಿ ನಿರೀಕ್ಷೆಗಳಿಲ್ಲ.
ನಮ್ಮಲ್ಲಿ ನೂರು ಚಿತ್ರ ಬಿಡುಗಡೆ ಆದರೆ ಅದರಲ್ಲಿ ಮೂರು ಚಿತ್ರಗಳು ಮಾತ್ರ ಮಹಿಳಾ ಪ್ರಧಾನ ಆಗಿರುತ್ತವೆ. ಈ ಚಿತ್ರ ಯಶಸ್ಸು ಕಂಡರೆ ಇಂತಹ ಸ್ಥಿತಿ ಬದಲಾಗಬಹುದು. ಸಿನಿಮಾ ಉದ್ಯಮದಲ್ಲಿ ಇರುವ ಹೆಣ್ಣುಮಕ್ಕಳ ಪಾಲಿಗೆ ಕೂಡ ಇದು ಗೇಮ್ ಚೇಂಜರ್ ಆಗಬಹುದು’ ಎಂದರು ಪಾರುಲ್.
ಅವರ ಮಾತಿನಲ್ಲೇ ಇದ್ದ ಎಳೆಯೊಂದು ಗೋಕರ್ಣದ ಸಮುದ್ರದ ಅಲೆಯಂತೆ ಪ್ರಶ್ನೆಯ ರೂಪದಲ್ಲಿ ತೇಲಿಬಂತು. ‘ಕನ್ನಡದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಏಕೆ ಬರುತ್ತಿಲ್ಲ’ ಎಂಬುದು ಆ ಪ್ರಶ್ನೆ. ‘ಇಂತಹ ಸಿನಿಮಾ ಮಾಡಲು ಸಿದ್ಧವಿರುವ ನಿರ್ಮಾಪಕರು ನಮ್ಮಲ್ಲಿ ಇದ್ದಾರೆ. ಆದರೆ ವೀಕ್ಷಕರು ಬದಲಾಗಬೇಕಿದೆ. ಹೊಸದಾಗಿ ಬಿಡುಗಡೆ ಆಗುವ ಸಿನಿಮಾಗಳನ್ನು ಶುಕ್ರವಾರ, ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೋಡುವವರು ಮಾಸ್ ವೀಕ್ಷಕರು. ಅವರು ತಮ್ಮ ಕುಟುಂಬದ ಸದಸ್ಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದಿಲ್ಲ. ಸಿನಿಮಾ ನೋಡುವ ಜನ ಮಹಿಳಾ ಕೇಂದ್ರಿತ ಸಿನಿಮಾಗಳನ್ನು ಒಪ್ಪಿಕೊಳ್ಳಲು ಆರಂಭಿಸಿದರೆ, ಅಂತಹ ಸಿನಿಮಾ ಮಾಡಲು ನಿರ್ಮಾಪಕರು ಸಿದ್ಧರಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳು ಹಿಟ್ ಆದರೆ, ಅಂತಹ ಸಿನಿಮಾ ಮಾಡಲು ನಿರ್ಮಾಪಕರಿಗೆ ಹೆಚ್ಚಿನ ಧೈರ್ಯ ಬರುತ್ತದೆ’ ಎಂದರು.
ಗೋಕರ್ಣದ ಅನುಭವ
ಇದರಲ್ಲಿ ಪಾರುಲ್ ಅವರು ಗೋಕರ್ಣದ ಯುವತಿ. ಅಲ್ಲಿನ ಚಿತ್ರೀಕರಣದ ಅನುಭವದ ಬಗ್ಗೆ ಹೇಳಲು ಉತ್ಸುಕರಾಗಿದ್ದರು. ಅದಕ್ಕೂ ಮೊದಲು ಇನ್ನೊಂದು ವಿಚಾರ ಹೇಳಿದರು.
‘ಇದು ಕಮರ್ಷಿಯಲ್ ಸಿನಿಮಾ ಎನ್ನುವುದು ನಿಜ. ಆದರೆ, ಇಲ್ಲಿ ಕಮರ್ಷಿಯಲ್ ಆಯಾಮವು ಕಲಾತ್ಮಕ ಆಯಾಮದ ಜೊತೆ ಒಳ್ಳೆಯ ಸ್ನೇಹ ಸಂಪಾದಿಸಿದೆ. ಈ ಸಿನಿಮಾದಲ್ಲಿನ ಪಾತ್ರದ ಜೊತೆ ನನ್ನನ್ನು ಗುರುತಿಸಿಕೊಳ್ಳಲು ಸಾಧ್ಯವಾಯಿತು’ ಎನ್ನುವುದು ಆ ಮಾತು.
ಪಾರುಲ್ ಅವರಿಗೆ ಈ ಸಿನಿಮಾ ಕೆಲಸ ಆರಂಭವಾಗುವುದಕ್ಕೂ ಮೊದಲು ಗೋಕರ್ಣದ ಪರಿಸರದ ಬಗ್ಗೆ ಗೊತ್ತಿರಲಿಲ್ಲ. ‘ಆದರೆ ಅಲ್ಲಿಗೆ ಹೋದ ನಂತರ ಖುಷಿಯಾಯಿತು. ಅಲ್ಲಿನ ಸುಂದರ ಕಲ್ಯಾಣಿಯೊಂದರ ಬಳಿ ಚಿತ್ರೀಕರಣ ನಡೆಸಿದ್ದೇವೆ. ಅಲ್ಲಿನ ಸಸ್ಯಾಹಾರಿ ಆಹಾರ ಪದ್ಧತಿ, ಅಲ್ಲಿನ ಅರ್ಚಕರು, ಅಲ್ಲಿನ ಪರಿಸರ... ಇವೆಲ್ಲ ನನಗೆ ಖುಷಿಕೊಟ್ಟವು. ಕಳೆದ ಹತ್ತು ವರ್ಷಗಳಲ್ಲಿ ಇಂತಹ ಇನ್ನೊಂದು ಸಿನಿಮಾ ಕನ್ನಡದಲ್ಲಿ ಬಂದಿರುವುದು ನನಗಂತೂ ಗೊತ್ತಿಲ್ಲ’ ಎನ್ನುವುದು ಅವರ ಅನಿಸಿಕೆ.
ಈ ಚಿತ್ರಕ್ಕಾಗಿ ಚಿಕ್ಕ ಊರಿನ ಯುವತಿಯ ಹಾವಭಾವಗಳನ್ನು ಅಭಿನಯಿಸಲು ಪಾರುಲ್ ಅವರು ಶಿಕ್ಷಕರೊಬ್ಬರನ್ನು ಗೊತ್ತುಮಾಡಿಕೊಂಡಿದ್ದರು. ಕನ್ನಡ ಶಿಕ್ಷಕರೊಬ್ಬರನ್ನು ಗೊತ್ತುಮಾಡಿಕೊಂಡು ಪ್ರಾದೇಶಿಕ ಭಾಷಾ ಶೈಲಿಯನ್ನು ರೂಢಿಸಿಕೊಂಡರು. ಅಷ್ಟೇ ಅಲ್ಲ, ಗೋಕರ್ಣದ ಹುಡುಗಿಯರು ಹೇಗಿರುತ್ತಾರೆ, ಅವರು ಹೇಗೆ ಬಟ್ಟೆ ಹಾಕುತ್ತಾರೆ ಎಂಬುದನ್ನೂ ಗಮನಿಸುತ್ತಿದ್ದರು ಪಾರುಲ್!
ಮಾತಿನ ಕೊನೆಯಲ್ಲಿ ಒಂದು ಮಾತನ್ನು ಸೇರಿಸಿದರು: ‘ಲಿಂಗ ಸಮಾನತೆ ಇಂದು ಎಲ್ಲೆಡೆ ಚರ್ಚೆಯಾಗುತ್ತಿರುವ ವಿಷಯ. ಈ ಚಿತ್ರವನ್ನು ಜನ ತಮ್ಮ ಕುಟುಂಬದ ಎಲ್ಲರ ಜೊತೆ ಬಂದು ನೋಡಬೇಕು. ಇಲ್ಲಿ ಹಾಸ್ಯದ ಜೊತೆ ಒಳ್ಳೆಯ ಸಂದೇಶವಿದೆ. ಪ್ರತಿ ಪುರುಷ, ಹುಡುಗ ಈ ಸಿನಿಮಾ ನೋಡಬೇಕು. ಪುರುಷರು ಭಾರತದ ಹೆಣ್ಣಿನ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೇಗೆ ಸೋಲುತ್ತಿದ್ದಾರೆ ಎಂಬುದು ಇದರಲ್ಲಿ ಇದೆ.’
ಸಿನಿಮಾ ಯಾವಾಗ ಬಿಡುಗಡೆ?
ಚಿತ್ರ ತೆರೆಯ ಮೇಲೆ ಬರುವುದು ಜುಲೈ ತಿಂಗಳಲ್ಲಿ ಎನ್ನುತ್ತಾರೆ ಪಾರುಲ್. ‘ರಂಜಾನ್ ತಿಂಗಳು ಮುಗಿಯಲಿ ಎಂಬ ಅಭಿಪ್ರಾಯ ಸಿನಿಮಾ ತಂಡದಲ್ಲಿ ಇದೆ. ಏಕೆಂದರೆ ಯುಎಇ (ಸಂಯುಕ್ತ ಅರಬ್ ಸಂಸ್ಥಾನ) ಸಿನಿಮಾ ಮಾರುಕಟ್ಟೆ ಕೂಡ ನಮಗೆ ದೊಡ್ಡದು. ನಾಲ್ಕು ಭಾಷೆಗಳಲ್ಲೂ ಚಿತ್ರವನ್ನು ಏಕಕಾಲಕ್ಕೆ ಚಿತ್ರೀಕರಿಸಿರುವ ಕಾರಣ, ಬಿಡುಗಡೆ ಕೂಡ ಏಕಕಾಲಕ್ಕೆ ಆಗಬೇಕು ಎಂಬುದು ನಮ್ಮ ಉದ್ದೇಶ. ಐಪಿಎಲ್ ಟೂರ್ನಿ ಈಗಷ್ಟೇ ಮುಗಿದಿದೆ. ಕ್ರಿಕೆಟ್ ವಿಶ್ವಕಪ್ ಟೂರ್ನಿ ಇನ್ನಷ್ಟೇ ಆರಂಭ ಆಗಬೇಕಿದೆ. ವಿಶ್ವಕಪ್ ಟೂರ್ನಿ ಜುಲೈನಲ್ಲಿ ಮುಗಿಯಲಿದೆ. ಹಾಗಾಗಿ, ಆ ತಿಂಗಳಲ್ಲಿ ಈ ಚಿತ್ರ ತೆರೆಗೆ ತರುವ ಉದ್ದೇಶವಿದೆ’ ಎಂಬ ವಿವರಣೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.