ಮುಂಬೈನಿಂದ ಬಂದು ಕನ್ನಡದ ರಸಿಕರ ಕಂಗಳಲ್ಲಿ ಹೊಳೆದ ನಟಿಯರಲ್ಲಿ ಪಾರುಲ್ ಯಾದವ್ ಒಬ್ಬರು. ಹಿಂದಿಯ ‘ಕ್ವೀನ್’ ಸಿನಿಮಾದ ಕನ್ನಡ ಅವತರಣಿಕೆ ‘ಬಟರ್‌ಫ್ಲೈ’ನಲ್ಲಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಹಣವನ್ನೂ ಹೂಡಿರುವ ಅವರು ಕನ್ನಡದಲ್ಲಿಯೇ ಇನ್ನೊಂದು ಚಿತ್ರ ನಿರ್ಮಿಸುವ ಸಿದ್ಧತೆಯಲ್ಲಿದ್ದಾರೆ.
*‘ಬಟರ್‌ಫ್ಲೈ’ ಸಿನಿಮಾ ಒಪ್ಪಿಕೊಳ್ಳಲು ಕಾರಣಗಳೇನು?
ಈ ಚಿತ್ರದ ನಾಯಕಿಯ ಪಾತ್ರ ತುಂಬ ರಿಯಲಿಸ್ಟಿಕ್ ಆಗಿದೆ. ಹಾಗೆಂದು ಇದೇನೂ ಆರ್ಟ್ ಸಿನಿಮಾ ಅಲ್ಲ. ಕಲಾತ್ಮಕ ಗುಣ ಮತ್ತು ರಂಜನೆಯ ಕಮರ್ಷಿಯಲ್ ಅಂಶಗಳು ಎರಡೂ ಹದವಾಗಿ ಬೆರೆತಿರುವ ಸಿನಿಮಾ ಇದು. ಹಾಗಾಗಿ ಗಲ್ಲಾಪೆಟ್ಟಿಗೆಯಲ್ಲಿಯೂ ಗೆಲ್ಲುವ ಸಾಮರ್ಥ್ಯ ಈ ಸಿನಿಮಾಗಿದೆ.
ಒಂದು ಹುಡುಗಿಗೆ ಬ್ರೇಕಪ್ ಆದಾಗ, ಮದುವೆ ಮುರಿದು ಬಿದ್ದಾಗ ಅವಳು ಮನೆಯೊಳಗೇ ಇರಬೇಕು ಎಂದು ಸಮಾಜ ಬಯಸುತ್ತದೆ. ತಾನೊಬ್ಬಳೇ ದೇಶ ಸುತ್ತಲು ಹೋಗುತ್ತೇನೆ ಎಂದು ಹೇಳಿದರೆ ಯಾವ ತಂದೆ ತಾಯಿಯೂ ಒಪ್ಪುವುದಿಲ್ಲ. ಆದರೆ ಯಾವುದೋ ಹುಡುಗ ಹೀಗೆ ಹೇಳಿದರೆ ಸುಲಭವಾಗಿ ಒಪ್ಪಿಬಿಡುತ್ತಾರೆ. ಇಂಥ ಮನಸ್ಥಿತಿ ಮತ್ತು ಅದರ ಪರಿಣಾಮ ಒಬ್ಬಳು ಹುಡುಗಿಯ ಮೇಲೆ ಹೇಗಾಗುತ್ತದೆ ಎನ್ನುವುದರ ಸುತ್ತಲೇ ಈ ಸಿನಿಮಾ ಇದೆ. ಬಹುಮುಖ್ಯವಾದ ಸಾಮಾಜಿಕ ಸಂದೇಶವನ್ನು ರಂಜನೆಯ ರೂಪದಲ್ಲಿ ಕೊಡಲಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಇದು ಹುಡುಗಿಯ ಕುರಿತಾದ ಚಿತ್ರ. ಈ ಚಿತ್ರವನ್ನು ಒಪ್ಪಿ ನಟಿಸಲಿಕ್ಕೆ ಇವೆಲ್ಲಕ್ಕಿಂತ ಹೆಚ್ಚಿಗೆ ಏನು ಬೇಕು?
*ದೊಡ್ಡ ಮಟ್ಟದಲ್ಲಿ ಹಿಟ್ ಆದ ‘ಕ್ವೀನ್’ ಸಿನಿಮಾದ ರೀಮೇಕ್ ‘ಬಟರ್‌ಫ್ಲೈ’. ಈ ಚಿತ್ರದಲ್ಲಿ ನಟಿಸುವಾಗ ನಿಮಗೆ ಎದುರಾದ ಸವಾಲುಗಳೇನು?
ಮೂಲಚಿತ್ರದಲ್ಲಿ ನಾಯಕಿ ದೆಹಲಿಯವಳು. ಇಲ್ಲಿ ನಾಯಕಿ ಬೆಂಗಳೂರಿನವಳಲ್ಲ. ಬದಲಿಗೆ ಗೋಕರ್ಣದ ಹುಡುಗಿ. ಆತ್ಮವಿಶ್ವಾಸವೇ ಇಲ್ಲದ, ಅಪ್ಪ ಅಮ್ಮನ ಮೇಲೆಯೇ ಅವಲಂಬಿತಳಾಗಿರುವ ಹುಡುಗಿ. ವೈಯಕ್ತಿಕವಾಗಿ ನಾನು ತುಂಬ ಆತ್ಮವಿಶ್ವಾಸ ಇರುವ ಹುಡುಗಿ. ಆತ್ಮವಿಶ್ವಾಸವೇ ಇಲ್ಲದ ಮುಗ್ಧ ಹುಡುಗಿಯ ಪಾತ್ರದ ಅಂಗಭಾಷೆ, ಭಾವಾಭಿವ್ಯಕ್ತಿಯನ್ನು ರೂಢಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ನಿರ್ದೇಶಕ ರಮೇಶ್ ಅರವಿಂದ್ ಅವರ ಜತೆಗೆ ಐದು ದಿನಗಳ ವರ್ಕ್‌ಶಾಪ್ ಮಾಡಿದೆ. ನಿರ್ದೇಶಕರ ಸಲಹೆಯಂತೆ ಒಬ್ಬರು ಕನ್ನಡ ಟೀಚರ್ ಬಳಿ ಹತ್ತು ದಿನಗಳ ಕನ್ನಡ ಭಾಷಾ ತರಬೇತಿ ಪಡೆದುಕೊಂಡೆ. ಇದರಿಂದ ಸುಲಭವಾಗಿ ಕನ್ನಡ ಸಂಭಾಷಣೆಗಳನ್ನು ಹೇಳಲು ಸಾಧ್ಯವಾಯ್ತು. ನನ್ನ ಜಡೆ ಕಂದುಬಣ್ಣ ಇತ್ತು. ಆದರೆ ಈ ಪಾತ್ರಕ್ಕೋಸ್ಕರ ಜಡೆಯನ್ನು ಕಡುಗಪ್ಪು ಮಾಡಿಕೊಂಡೆ. ಗೋಕರ್ಣಕ್ಕೆ ಹೋಗಿ ಅಲ್ಲಿಯೇ ಬಟ್ಟೆಗಳನ್ನು ಖರೀದಿಸಿ ಅಲ್ಲಿನ ಸ್ಥಳೀಯ ಹುಡುಗಿಯ ಹಾಗೆ ಕಾಣಿಸುವಂತೆ ಮಾಡಿಕೊಂಡೆ. ಈ ಚಿತ್ರದ ಹಿಂದೆ ನನ್ನ ಎರಡು ವರ್ಷಗಳ ಪರಿಶ್ರಮವಿದೆ.
*ನಿಮ್ಮ ನಟನಾವೃತ್ತಿಯಲ್ಲಿ ಈ ಚಿತ್ರ ಮತ್ತು ಪಾತ್ರ ಎಷ್ಟು ಮಹತ್ವದ್ದು?
ನಾನು ಈ ಹಿಂದೆಯೂ ‘ಕಿಲ್ಲಿಂಗ್ ವೀರಪ್ಪನ್’ನಲ್ಲಿ ಸಿಂಪಲ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಈ ಚಿತ್ರದ ಪಾತ್ರ ತುಂಬ ಬೇರೆಯದೇ ರೀತಿಯದ್ದು. ಇಲ್ಲಿ ನಾನು ನಾಯಕಿಯಾಗಿ ನಟಿಸಿಲ್ಲ. ಪಾತ್ರವಾಗಿ ನಟಿಸಿದ್ದೇನೆ. ಮತ್ತೆ ನನ್ನ ವೃತ್ತಿಜೀವನದಲ್ಲಿ ಇಂಥ ಪಾತ್ರ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ತುಂಬ ತೃಪ್ತಿ ಕೊಟ್ಟ ಸಿನಿಮಾ ಇದು.
*ಈ ಚಿತ್ರದ ನಿರ್ಮಾಣದ ಹೊಣೆಯನ್ನೂ ನೀವೇ ಹೊತ್ತಿದ್ದೀರಲ್ಲಾ..?
ಪ್ರತಿ ವೃತ್ತಿಯಲ್ಲಿಯೂ ಪ್ರಮೋಷನ್ ಇರುತ್ತದೆ. ನಟನಾವೃತ್ತಿಯಲ್ಲಿರುವ ನನಗೆ ಇದೊಂದು ಪ್ರಮೋಷನ್. ನಿರ್ಮಾಣ ಎನ್ನುವುದು ಒಂದು ಬಗೆಯ ಥ್ಯಾಂಕ್‌ಲೆಸ್ ಜಾಬ್. ಆದರೆ ಇಂಥದ್ದೊಂದು ಅದ್ಭುತ ಸಿನಿಮಾದ ಮೂಲಕ ನಿರ್ಮಾಪಕಿಯಾಗುತ್ತಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ.
*ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳಿ.
ಕನ್ನಡದಲ್ಲಿಯೇ ಮೂರು ಒಳ್ಳೆಯ ಕಥೆಗಳನ್ನು ಕೇಳಿದ್ದೇನೆ. ಇಷ್ಟವಾಗಿವೆ. ಈ ಮೂರನ್ನೂ ಬಿಟ್ಟು ಇನ್ನೊಂದು ಸಿನಿಮಾವನ್ನು ನಾನೇ ನಿರ್ಮಾಣ ಮಾಡಿ ನಟಿಸುತ್ತಿದ್ದೇನೆ. ಇದು ತಮಿಳು ಮತ್ತು ಕನ್ನಡದಲ್ಲಿ ನಿರ್ಮಾಣವಾಗುತ್ತದೆ. ಸದ್ಯದಲ್ಲಿಯೇ ಅದರ ವಿವರಗಳನ್ನು ಬಹಿರಂಗಪಡಿಸುತ್ತೇವೆ.
ಕೃಪೆ: ಸುಧಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.