ADVERTISEMENT

₹1028 ಕೋಟಿ ಗಳಿಸಿ ಹಿಂದಿಯಲ್ಲಿ ಸಾರ್ವಕಾಲಿಕ ದಾಖಲೆ ಬರೆದ ‘ಪಠಾಣ್’

ಪಿಟಿಐ
Published 5 ಮಾರ್ಚ್ 2023, 5:53 IST
Last Updated 5 ಮಾರ್ಚ್ 2023, 5:53 IST
   

ಮುಂಬೈ: ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಚಿತ್ರ ಬಿಡುಗಡೆಯಾದಾಗಿನಿಂದ ಇಲ್ಲಿವರೆಗೆ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ₹ 1028 ಕೋಟಿ ಗಳಿಸುವ ಮೂಲಕ ಭಾರತದಲ್ಲಿ ಸಾರ್ವಕಾಲಿಕವಾಗಿ ಗರಿಷ್ಠ ಗಳಿಕೆ ಕಂಡ ಹಿಂದಿ ಚಲನಚಿತ್ರವೆಂಬ ದಾಖಲೆ ಬರೆದಿದೆ ಎಂದು ಯಶ್ ರಾಜ್ ಫಿಲ್ಮ್ಸ್ (ವೈಆರ್‌ಎಫ್) ಹೇಳಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಭಾರತದಲ್ಲಿ ಬಿಡುಗಡೆಗೊಂಡ 6ನೇ ಶುಕ್ರವಾರ ₹1.07 ಕೋಟಿ ನಿವ್ವಳ ಗಳಿಕೆ ಕಂಡಿದೆ. (ಹಿಂದಿ - ₹1.05 ಕೋಟಿ, ಎಲ್ಲಾ ಡಬ್ಬಿಂಗ್ ಆವೃತ್ತಿಗಳು - ₹ 0.02 ಕೋಟಿ)

‘ಬಿಡುಗಡೆ ದಿನದಿಂದಲೂ ಜನರ ಮೆಚ್ಚುಗೆಗೆ ಪಾತ್ರವಾದ ಚಿತ್ರ 39 ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು ₹ 1028 ಕೋಟಿ (ಭಾರತದಲ್ಲಿ ₹ 641.50 ಕೋಟಿ, ಸಾಗರೋತ್ತರ: ₹ 386.50 ಕೋಟಿ) ಗಳಿಸಿದೆ ಎಂದು ವೈಆರ್‌ಎಫ್‌ ಪ್ರಕಟಣೆ ತಿಳಿಸಿದೆ.

ADVERTISEMENT

ನಾಲ್ಕು ವರ್ಷಗಳ ನಂತರ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡ ಶಾರುಖ್‌ಗೆ ದೊಡ್ಡ ಮಟ್ಟದ ಯಶಸ್ಸು ನೀಡಿದ ಚಲನಚಿತ್ರವು ಜನವರಿ 25 ರಂದು ಬಿಡುಗಡೆಗೊಂಡಿತ್ತು. ಪ್ರಾರಂಭದಲ್ಲಿ ‘ಬೇಷರಾಮ್‌ ರಂಗ್‌’ ಗೀತೆಯಲ್ಲಿ ಕೇಸರಿ ಬಣ್ಣವನ್ನು ಅವಮಾನಿಸಲಾಗಿದೆ ಎಂದು ಹಿಂದು ಸಂಘಟನೆಗಳ ಆಕ್ರೋಶ, ಬಾಯ್ಕಾಟ್‌ನಂತಹ ಅಡಚಣೆಗಳು ಎದುರಾದರೂ, ಚಿತ್ರದ ಗಳಿಕೆಗೆ ಮಾತ್ರ ಚ್ಯುತಿ ಬರಲಿಲ್ಲ. ಮೊದಲ ದಿನವೇ ಚಿತ್ರದ ಟಿಕೆಟ್‌ಗಾಗಿ ದೇಶದೆಲ್ಲೆಡೆ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು.

‘ಪಠಾಣ್ ಭಾರತದ ನಂಬರ್ ಒನ್ ಹಿಂದಿ ಚಿತ್ರವಾಗಿದೆ ಎಂದು ನಂಬಲಾಗುತ್ತಿಲ್ಲ. ಪ್ರೇಕ್ಷಕರು ಚಿತ್ರಕ್ಕೆ ತೋರಿಸಿದ ಪ್ರೀತಿ ಮತ್ತು ಮೆಚ್ಚುಗೆ ಐತಿಹಾಸಿಕವಾಗಿದೆ ಮತ್ತು ಇದು ಬಾಕ್ಸ್ ಆಫೀಸ್ ಫಲಿತಾಂಶದಲ್ಲಿ ಸಾಬೀತಾಗಿದೆ. ನಿರ್ದೇಶಕನಾಗಿ, ನಾನು ಜಾಗತಿಕ ಮಟ್ಟದಲ್ಲಿ ಜನರನ್ನು ರಂಜಿಸುವ ಸಿನಿಮಾ ಮಾಡಿದ್ದೇನೆ ಎಂಬ ಹೆಮ್ಮೆ ಇದೆ’ ಎಂದು ನಿರ್ದೇಶಕ ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪಠಾಣ್‌’ ತನ್ನ ಆರಂಭಿಕ ಗಳಿಕೆಯಲ್ಲಿಯೇ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ವಿಶ್ವದಾದ್ಯಂತ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವಾಗಿದೆ. ಸುಮಾರು ₹ 2,000 ಕೋಟಿ ಗಳಿಸಿರುವ ‘ದಂಗಲ್‌’ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಲನಚಿತ್ರವಾಗಿದೆ. ಅಮಿರ್‌ ಖಾನ್‌ ನಟನೆಯ ಚಿತ್ರ ಬಿಡುಗಡೆಯ ಮೊದಲ ಹಂತದಲ್ಲಿ ₹ 700 ಕೋಟಿ ಗಳಿಸಿತು. ಚೀನಾದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ವಿಶ್ವಾದ್ಯಂತ ಒಟ್ಟು ₹ 1,000 ಕೋಟಿ ಗಡಿಯನ್ನು ದಾಟಿತು.

‘ಬಾಹುಬಲಿ 2: ದಿ ಕನ್‌ಕ್ಲೂಷನ್’, ‘ಆರ್‌ಆರ್‌ಆರ್’ ಮತ್ತು ‘ಕೆ.ಜಿ.ಎಫ್: ಚಾಪ್ಟರ್‌ 2’ ಗಲ್ಲಾಪೆಟ್ಟಿಗೆಯಲ್ಲಿ ₹ 1,000 ಕೋಟಿ ದಾಟಿದ ಇತರ ಭಾರತೀಯ ಚಲನಚಿತ್ರಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.