ADVERTISEMENT

40 ವರ್ಷಗಳ ಬಳಿಕ ಕಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಭಾರತದ ಚಿತ್ರ

ಪಿಟಿಐ
Published 11 ಏಪ್ರಿಲ್ 2024, 13:55 IST
Last Updated 11 ಏಪ್ರಿಲ್ 2024, 13:55 IST
<div class="paragraphs"><p>‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್‌’ ಚಿತ್ರದ ದೃಶ್ಯ ಹಾಗೂ&nbsp;ಪಾಯಲ್ ಕಪಾಡಿಯಾ</p></div>

‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್‌’ ಚಿತ್ರದ ದೃಶ್ಯ ಹಾಗೂ ಪಾಯಲ್ ಕಪಾಡಿಯಾ

   

ಎಕ್ಸ್ ಚಿತ್ರ

ನವದೆಹಲಿ: ನಿರ್ದೇಶಕಿ ಪಾಯಲ್ ಕಪಾಡಿಯಾ ಅವರ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್‌’ ಚಿತ್ರವು ಕಾನ್ ಚಲನಚಿತ್ರೋತ್ಸವದ ಮುಖ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ. 40 ವರ್ಷಗಳ ಬಳಿಕೆ ಈ ಸುತ್ತಿಗೆ ಆಯ್ಕೆಯಾದ ಭಾರತದ ಮೊದಲ ಚಿತ್ರ ಇದಾಗಿದೆ.

ADVERTISEMENT

ಫ್ರಾನ್ಸ್‌ನ ಕಾನ್‌ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಲನಚಿತ್ರೋತ್ಸವದ ಅಧ್ಯಕ್ಷ ಐರಿಸ್ ನಾಬ್ಲಾಕ್ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಕಪಾಡಿಯಾ ಅವರ ಈ ಚಿತ್ರದ ಜತೆಗೆ, ಬ್ರಿಟಿಷ್–ಭಾರತೀಯ ಚಿತ್ರ ತಯಾರಕರಾದ ಸಂಧ್ಯಾ ಸೂರಿ ಅವರ ‘ಸಂತೋಷ್’ ಚಿತ್ರವೂ ಈ 77ನೇ ಆವೃತ್ತಿಯಲ್ಲಿ ಪ್ರದರ್ಶನಗೊಳ್ಳಲಿದೆ. 

ಪ್ರಸಿದ್ಧ ನಿರ್ದೇಶಕರಾದ ಫ್ರಾನ್ಸಿಸ್ ಫೋರ್ಡ್ ಕಪ್ಪೋಲಾ ಅವರ ‘ಮೆಗಾಲೊಪೊಲಿಸ್’ ಹಾಗೂ ಯಾರ್ಗೊಸ್ ಲ್ಯಾಂಥಿಮೋಸ್ ಅವರ ‘ಕೈಂಡ್ಸ್ ಆಫ್ ಕೈಂಡ್‌ನೆಸ್‌’ ಸೇರಿದಂತೆ ಅಂತಿಮ ಸುತ್ತಿಗೆ ಆಯ್ಕೆಯಾದ ಪ್ರಮುಖ 19 ಚಿತ್ರಗಳಲ್ಲಿ ಪಾಯಲ್ ಕಪಾಡಿಯಾ ಅವರ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್‌’ ಚಿತ್ರವೂ ಒಂದು. 

ಪೌಲ್ ಸ್ಕ್ರೇಡರ್ ಅವರ ಓ ಕೆನಡಾ, ಆಂಡ್ರೇ ಅರ್ನಾಲ್ಡ್ ಅವರ ಬರ್ಡ್‌, ಡೇವಿಡ್ ಕಾರ್ನೆನ್‌ಬರ್ಗ್ ಅವರ ದಿ ಶ್ರೂಡ್ಸ್‌ ಹಾಗೂ ಸೀನ್ ಬೇಕರ್ ಅವರ ‘ಅನೋರಾ’ ಚಿತ್ರಗಳು ಅಂತಿಮ ಸುತ್ತಿನಲ್ಲಿ ಪೈಪೋಟಿ ನಡೆಸಲಿವೆ.

ಭಾರತೀಯ ಚಲನಚಿತ್ರ ಹಾಗೂ ಕಿರುತೆರೆ ಸಂಸ್ಥೆ (FTII) ವಿದ್ಯಾರ್ಥಿಯಾದ ಕಪಾಡಿಯಾ ಅವರು, ತಾವು ನಿರ್ದೇಶಿಸಿದ ಸಾಕ್ಷ್ಯಚಿತ್ರ ‘ಎ ನೈಟ್‌ ಆಫ್ ನೋಯಿಂಗ್ ನಥಿಂಗ್‌’ ಮೂಲಕ ಚಿರಪರಿಚಿತರು. 2021ರಲ್ಲಿ ಕಾನ್ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡು ಡೈರೆಕ್ಟರ್ಸ್‌ ಫೋರ್ಟ್‌ನೈಟ್ ಸೈಡ್‌ ಬಾರ್‌ ವಿಭಾಗದಲ್ಲಿ ಗೋಲ್ಡನ್ ಐ ಪ್ರಶಸ್ತಿ ಬಾಚಿತ್ತು.

‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್‌’ ಚಿತ್ರದ ಕಥೆಯನ್ನೂ ಕಪಾಡಿಯಾ ಅವರೇ ಬರೆದಿದ್ದಾರೆ. ಚಿತ್ರವು ಪ್ರಭಾ ಎಂಬ ಶುಶ್ರೂಷಕಿ, ತನ್ನನ್ನು ತೊರೆದ ಪತಿಯು ಕೆಲ ವರ್ಷಗಳ ನಂತರ ಕಳುಹಿಸಿದ ಒಂದು ಉಡುಗೊರೆ, ಆಕೆಯನ್ನು ಏನೆಲ್ಲಾ ಸಂಕಷ್ಟಗಳಿಗೆ ನೂಕುತ್ತದೆ ಎಂಬುದನ್ನು ಹೇಳಿದೆ. ಕಥೆಯಲ್ಲಿ ಬರುವ ಮತ್ತೊಂದು ಪಾತ್ರ ಪ್ರಭಾ ಅವರೊಂದಿಗೆ ಒಂದೇ ಮನೆಯಲ್ಲಿರುವ ಕಿರಿಯ ಗೆಳತಿ ಅನು. ಆಕೆ ತನ್ನ ಸ್ನೇಹಿತನೊಂದಿಗೆ ಖಾಸಗಿಯಾಗಿರಲು ದೊಡ್ಡ ನಗರದಲ್ಲಿ ಪುಟ್ಟದೊಂದು ಜಾಗ ಹುಡುಕುವ ವ್ಯರ್ಥ ಪ್ರಯತ್ನ ನಡೆಸುತ್ತಿರುತ್ತಾಳೆ. ಒಂದು ದಿನ ಈ ಇಬ್ಬರು ಶುಶ್ರೂಷಕಿಯರು ಕಡಲ ತೀರದ ಪ್ರವಾಸಕ್ಕೆ ಹೊರಡುತ್ತಾರೆ. ಆಕಸ್ಮಿಕವಾಗಿ ಅರಣ್ಯದೊಳಗೆ ಪ್ರವೇಶಿಸುತ್ತಾರೆ. ಅಲ್ಲಿ ಅವರ ಕನಸುಗಳು ಸಾಕಾರಗೊಳ್ಳುತ್ತವೇ ಎಂಬುದನ್ನು ನಿರ್ದೇಶಕಿ ಈ ಚಿತ್ರದಲ್ಲಿ ಹೇಳಿದ್ದಾರೆ.

ಕಾನ್‌ನಲ್ಲಿ ಭಾರತದ ಚಿತ್ರ ಮೊದಲ ಪ್ರಶಸ್ತಿ ಪಡೆದಿದ್ದು 1946ರಲ್ಲಿ

ಕಾನ್ ಚಲನಚಿತ್ರೋತ್ಸವದ ಅಂತಿಮ ಸುತ್ತಿಗೆ 1983ರಲ್ಲಿ ಮೃಣಾಲ್ ಸೇನ್ ಅವರ ’ಖರೀಜ್’ ಚಿತ್ರ ಪ್ರವೇಶಿಸಿತ್ತು. ಇದಕ್ಕೂ ಮೊದಲು 1974ರಲ್ಲಿ ಎಂ.ಎಸ್.ಸತ್ಯು ಅವರ ‘ಗರಂ ಹವಾ’, 1958ರಲ್ಲಿ ಸತ್ಯಜೀತ್ ರೇ ಅವರ ‘ಪರಾಶ್ ಪಾಥರ್’, 1953ರಲ್ಲಿ ರಾಜ್ ಕಪೂರ್ ಅವರ ‘ಆವಾರ’, 1952ರಲ್ಲಿ ವಿ.ಶಾಂತಾರಾಮ ಅವರ ‘ಭೂಪಾಲಿ’ ಹಾಗೂ 1946ರಲ್ಲಿ ಚೇತನ್ ಆನಂದ್ ಅವರ ‘ನೀಚ ನಗರ್’ ಚಿತ್ರಗಳು ಕೇನ್ಸ್‌ಗೆ ಸ್ಪರ್ಧೆಗೆ ಅರ್ಹತೆ ಗಟ್ಟಿಸಿಕೊಂಡಿದ್ದವು.

ಆದರೆ ಇವುಗಳಲ್ಲಿ 1946ರಲ್ಲಿ ತೆರೆ ಕಂಡ ‘ನೀಚ್ ನಗರ್‌’ ಚಲನಚಿತ್ರ ಮಾತ್ರ ಈವರೆಗೂ ಕಾನ್‌ನ ಅತ್ಯುನ್ನತ ಪ್ರಶಸ್ತಿ ಪಡೆಯುವಲ್ಲಿ ಸಫಲವಾಗಿದೆ. ಆ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ‘ಗ್ರ್ಯಾಂಡ್ ಪ್ರಿಕ್ಸ್ ಡು ಫೆಸ್ಟಿವಲ್ ಇಂಟರ್‌ನ್ಯಾಷನಲ್‌ ಡು ಫಿಲ್ಮ್’ ಎಂದು ಕರೆಯಲಾಗುತ್ತಿತ್ತು.

ಮುಖ್ಯ ಸ್ಪರ್ಧೆಯೊಂದಿಗೆ ಜತೆಯಾಗಿಯೇ ನಡೆಯುವ ಅನ್‌ಸರ್ಟೆನ್ ರಿಗಾರ್ಡ್ಸ್‌ ವಿಭಾಗಕ್ಕೆ ಆಯ್ಕೆಯಾಗಿರುವ 14 ಚಿತ್ರಗಳಲ್ಲಿ ಸೂರಿ ಅವರ ‘ಸಂತೋಷ್’ ಚಿತ್ರವೂ ಸೇರಿದೆ. ಭಾರತ–ಐರೋಪ್ಯ ರಾಷ್ಟ್ರಗಳ ನಿರ್ಮಾಣದ ಈ ಚಿತ್ರ ಸಹನಾ ಗೋಸ್ವಾಮಿ ನಟಿಸಿದ್ದಾರೆ. ಉತ್ತರ ಭಾರತದ ಕಥಾ ವಸ್ತುವನ್ನು ಇದು ಹೊಂದಿದೆ. 

ಕಾನ್ ಚಲನಚಿತ್ರೋತ್ಸವವು ಮೇ 14ರಿಂದ 25ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.