ಚೆನ್ನೈ: ದೇಸೀಯ ಮುರ್ಪೋಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷದ ಸಂಸ್ಥಾಪಕ, ತಮಿಳು ನಟ ವಿಜಯಕಾಂತ್ (71) ಇನ್ನು ನೆನಪು. ನ್ಯುಮೋನಿಯಾದಿಂದಾಗಿ ಆಸ್ಪತ್ರೆಗೆ ಸೇರಿದ್ದ ಅವರಿಗೆ ಕೊರೊನಾ ಸೋಂಕು ಕೂಡ ಇತ್ತು. ಗುರುವಾರ ಅವರು ಎಂಐಒಟಿ ಆಸ್ಪತ್ರೆಯಲ್ಲಿ ನಿಧನರಾದರು.
ತಮಿಳು ಸಿನಿಮಾಗಳಲ್ಲಿ ಮಾತ್ರ ಅಭಿನಯಿಸುವ ಸಂಕಲ್ಪ ಮಾಡಿದ್ದ ನಟರಲ್ಲಿ ಪ್ರಮುಖರು ವಿಜಯಕಾಂತ್. ಹಾಗಿದ್ದೂ ತೆಲುಗು ಹಾಗೂ ಹಿಂದಿ ಭಾಷೆಗಳಿಗೆ ಅವರ ಸಿನಿಮಾಗಳಲ್ಲಿ ಅನೇಕವು ಡಬ್ ಆಗಿವೆ. 1991ರಲ್ಲಿ ತೆರೆಕಂಡಿದ್ದ ‘ಕ್ಯಾಪ್ಟನ್ ಪ್ರಭಾಕರನ್’ ಸಿನಿಮಾದಲ್ಲಿ ಅವರು ಐಎಫ್‌ಎಸ್ ಅಧಿಕಾರಿಯಾಗಿ ನಟಿಸಿದ್ದರು. ಅದು ಅವರ ನೂರನೇ ಚಿತ್ರ. ಅದರ ಜನಪ್ರಿಯತೆಯಿಂದಾಗಿ ಅವರನ್ನು ಆಪ್ತೇಷ್ಟರು ‘ಕ್ಯಾಪ್ಟನ್’ ಎಂದೇ ಕರೆಯುತ್ತಿದ್ದರು. ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದರು.
ವಿಜಯಕಾಂತ್ ಹುಟ್ಟಿದ್ದು 1952, ಆಗಸ್ಟ್ 25ರಂದು; ಮದುರೈನಲ್ಲಿ. ಅವರ ಜನ್ಮನಾಮ ವಿಜಯರಾಜ್ ಅಳಗರಸ್ವಾಮಿ. 1979ರಲ್ಲಿ ‘ಇನಿಕುಂ ಇಳಮೈ’ ಸಿನಿಮಾದಿಂದ ಅವರ ಚಿತ್ರಪಯಣ ಶುರುವಾಗಿತ್ತು. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಅವರು ಸಾಹಸ ದೃಶ್ಯಗಳು ಹಾಗೂ ಹರಿತವಾದ ಸಂಭಾಷಣೆಗಳಿಂದಲೇ ಜನಪ್ರಿಯರಾಗಿದ್ದರು. ‘ಪುರಚ್ಚಿ ಕಳೆನ್ಯರ್’ (ಕ್ರಾಂತಿಕಾರಿ ಕಲಾವಿದ) ಎನ್ನುವ ವಿಶೇಷಣಕ್ಕೆ ಅವರು ಭಾಜನರಾಗಿದ್ದರು.
ಅವರು ನಟಿಸಿದ್ದ ‘ದೂರತ್ತು ಇಡಿ ಮುಳಕ್ಕಮ್’ ಸಿನಿಮಾ ಗೋವಾ ಚಿತ್ರೋತ್ಸವದ ಪನೋರಮಾಗೆ ಆಯ್ಕೆಯಾಗಿತ್ತು. ‘ನೂರಾವದು ನಾಳ್’, ‘ಸೆಂದೂರ ಪೂವೆ’, ‘ಪುಳನ್ ವಿಸಾರಣೈ’, ‘ಚಿನ್ನ ಗೌಂಡರ್’, ‘ಸೇತುಪತಿ ಐಎಎಸ್’, ‘ಚತ್ರಿಯನ್’, ‘ಆನೆಸ್ಟ್ ರಾಜ್’, ‘ವಾನತ್ತೈ ಪೋಲ’, ‘ನಾನೇ ರಾಜ ನಾನೇ ಮಂದಿರಿ’ ಅವರ ಜನಪ್ರಿಯ ಸಿನಿಮಾಗಳ ಸಾಲಿನಲ್ಲಿ ಎದ್ದುಕಾಣುತ್ತವೆ. 1981ರಲ್ಲಿ ತೆರೆಕಂಡ ‘ಸಟ್ಟಂ ಒರು ಇರುತರೈ’ ಚಿತ್ರದಿಂದ ಅವರಿಗೆ ಕಮರ್ಷಿಯಲ್ ಹೀರೊ ಇಮೇಜ್ ಪ್ರಾಪ್ತವಾಯಿತು. ಆ ಸಿನಿಮಾ ಕನ್ನಡ, ತೆಲುಗು, ಮಲಯಾಳ ಭಾಷೆಗಳಿಗೂ ಡಬ್ ಆಗಿತ್ತು. 1984ರಲ್ಲಿ ಅವರು ನಟಿಸಿದ್ದ 18 ಸಿನಿಮಾಗಳು ತೆರೆಕಂಡಿದ್ದವು. ಮೂರು ಪಾಳಿಗಳಲ್ಲಿ ಅವರು ಚಿತ್ರೀಕರಣದಲ್ಲಿ ತೊಡಗಿದ್ದ ಕಾಲವದು. 1985ರಲ್ಲಿ ‘ಅಣ್ಣೈ ಭೂಮಿ’ ಸಿನಿಮಾದಲ್ಲಿ ಅವರು ರಾಧಿಕಾ ಹಾಗೂ ಕನ್ನಡದ ನಟ ಟೈಗರ್ ಪ್ರಭಾಕರ್ ಜೊತೆಗೆ ಅಭಿನಯಿಸಿದ್ದರು. ತಮಿಳಿನಲ್ಲಿ ತಯಾರಾಗಿದ್ದ ಮೊದಲ 3ಡಿ ಸಿನಿಮಾ ಅದು ಎಂದು ಕೆಲವರು ಉಲ್ಲೇಖಿಸಿದ್ದಾರೆ. ‘ವೀರ ಪಾಂಡಿಯನ್’ ಸಿನಿಮಾದಲ್ಲಿ ಶಿವಾಜಿ ಗಣೇಶನ್ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದರು. ‘ಮನಕನಕು’ ಚಿತ್ರದಲ್ಲಿ ಕಮಲ ಹಾಸನ್ ಜೊತೆಯಲ್ಲಿ ನಟಿಸಿದ್ದರು. ‘ವಿರುದಗಿರಿ’ ಎಂಬ ಸಿನಿಮಾವನ್ನು ಅವರು ನಿರ್ದೇಶಿಸಿದ್ದರು.
ತಮ್ಮ ಪುತ್ರ ಷಣ್ಮುಗ ಪಾಂಡಿಯನ್ ಅಭಿನಯಿಸಿದ್ದ ‘ಸಗಾಪ್ತಂ’ ಚಿತ್ರದಲ್ಲಿ 2015ರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಅವರು, ‘ತಮಿಳನ್ ಎಂಡ್ರು ಸೊಲ್’ ಎನ್ನುವ ಮತ್ತೊಂದು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಮಗನೊಟ್ಟಿಗೆ ತೆರೆ ಹಂಚಿಕೊಂಡಿದ್ದರು.
ತಮಿಳುನಾಡು ಸರ್ಕಾರ ನೀಡುವ ಗೌರವ ಪ್ರಶಸ್ತಿ, ಕಲೈಮಾಮಣಿ ಪ್ರಶಸ್ತಿಗೆ ವಿಜಯಕಾಂತ್ ಭಾಜನರಾಗಿದ್ದರು.
2005ರಲ್ಲಿ ಡಿಎಂಡಿಕೆ ಪಕ್ಷವನ್ನು ಸ್ಥಾಪಿಸಿದ ಅವರು ಪರ್ಯಾಯ ರಾಜಕಾರಣದಲ್ಲಿ ನಂಬಿಕೆ ಇಟ್ಟಿದ್ದರು. 2006ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿರುದಾಚಲಂನಿಂದ ನಿಂತು ಗೆದ್ದಿದ್ದರು. ಆಗ ತಮ್ಮ ಪಕ್ಷದಿಂದ ಚುನಾಯಿತರಾಗಿದ್ದ ಏಕೈಕ ಅಭ್ಯರ್ಥಿ ಅವರಾಗಿದ್ದರು. 2011ರ ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನೂ ಹಿಂದಿಕ್ಕಿ, 29 ಸ್ಥಾನಗಳನ್ನು ಅವರ ಪಕ್ಷ ತನ್ನದಾಗಿಸಿಕೊಂಡಿತ್ತು. ಆಗ ಡಿಎಂಡಿಕೆ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು.
ಕಳೆದ ನಾಲ್ಕೈದು ವರ್ಷಗಳಿಂದ ವಿಜಯಕಾಂತ್ ಸಕ್ರಿಯರಾಗಿ ಇರಲಿಲ್ಲ. ಆರೋಗ್ಯದ ಸಮಸ್ಯೆ ಅವರನ್ನು ಪದೇಪದೇ ಬಾಧಿಸಿತ್ತು. ಇದೇ ತಿಂಗಳ ಆರಂಭದಲ್ಲಿ ಅವರ ಪತ್ನಿ ಪ್ರೇಮಲತಾ ಅವರನ್ನು ಪಕ್ಷದ ಕಾರ್ಯದರ್ಶಿ ಮಾಡಲಾಯಿತು. ಅವರಿಗೆ ಇಬ್ಬರು ಗಂಡುಮಕ್ಕಳು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.