ಪ್ರಭಾಸ್ ನಟನೆಯ ಪೌರಾಣಿಕ ಕಥೆಯಾಧರಿತ 'ಆದಿಪುರುಷ' ಚಿತ್ರ ಶುಕ್ರವಾರ ತೆರೆಕಂಡಿದೆ. ಚಿತ್ರ ತೆರೆಗೆ ಬಂದ ದಿನದಿಂದಲೂ ಚಿತ್ರತಂಡ ಒಂದಲ್ಲ ಒಂದು ವಿವಾದಕ್ಕೆ ಆಹಾರವಾಗುತ್ತಿದೆ. ಇದೀಗ ಚಿತ್ರದ ಸಂಭಾಷಣೆ ವಿರುದ್ಧ ಮಹಾರಾಷ್ಟ್ರ ಶಿವಸೇನಾ(ಉದ್ಧವ್ ಠಾಕ್ರೆ ಬಣ) ಸಂಸದರೊಬ್ಬರು ಆಕ್ಷೇಪ ಎತ್ತಿದ್ದಾರೆ.
ಸಿನೆಮಾದಲ್ಲಿ 'ಕೀಳುಮಟ್ಟದ ಸಂಭಾಷಣೆ' ಬಳಸಲಾಗಿದೆ ಎಂದು ಸಂಸದೆ ಪ್ರಿಯಾಂಕಾ ಚತುರ್ವೇದಿ ಆಕ್ಷೇಪ ಎತ್ತಿದ್ದಾರೆ. ಈ ವಿಚಾರವಾಗಿ ಚಿತ್ರತಂಡ ಇಡೀ ದೇಶದ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
'ಪೌರಾಣಿಕ ಚಿತ್ರದಲ್ಲಿ ಕೀಳುಮಟ್ಟದ ಸಂಭಾಷಣೆ ಬರೆದುದಕ್ಕಾಗಿ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಶಿರ್ ಜೊತೆಗೆ ಚಿತ್ರದ ನಿರ್ದೇಶಕ ಇಡೀ ದೇಶದ ಜನರಲ್ಲಿ ಅದರಲ್ಲೂ ವಿಶೇಷವಾಗಿ ಭಗವಂತ ಹನುಮಂತನಲ್ಲಿ ಕ್ಷಮೆಯಾಚಿಸಬೇಕು' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
'ಮನರಂಜನೆಯ ಹೆಸರಿನಲ್ಲಿ ಪೂಜ್ಯ ದೇವರುಗಳ ಸಿನಿಮಾದಲ್ಲಿ ಕೀಳುಮಟ್ಟದ ಸಂಭಾಷಣೆಯನ್ನು ಬಳಸುವುದು ಜನರಲ್ಲಿ ನೋವುಂಟು ಮಾಡುತ್ತದೆ. ಮರ್ಯಾದಾ ಪುರಷೋತ್ತಮನ ಹೆಸರಿನಲ್ಲಿ ಸಿನಿಮಾ ಮಾಡಿ ಮರ್ಯಾದೆಯನ್ನು ಬಿಟ್ಟು ಬಾಕ್ಸ್ ಆಫೀಸ್‌ನಲ್ಲಿ ಹಣ ಗಳಿಸುವುದಕ್ಕೆ ಮುಂದಾಗುವುದು ಸರಿಯಲ್ಲ' ಎಂದು ತಿಳಿಸಿದ್ದಾರೆ.
ಶುಕ್ರವಾರ ತೆರೆಕಂಡ 'ಆದಿಪುರುಷ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾ ಘೋಷಣೆಯಾದ ದಿನದಿಂದಲು ಇಲ್ಲಿಯವರೆಗೆ ವಿಪಿಎಕ್ಸ್‌ನಿಂದ ಹಿಡಿದು ಹಲವಾರು ವಿಷಯಕ್ಕೆ ಚಿತ್ರತಂಡ ಟ್ರೋಲ್‌ಗೆ ಒಳಗಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.