ADVERTISEMENT

‘ಪೆಂಗ್ವಿನ್‌’ ಚಿತ್ರದ ವಿಡಿಯೊ ಸೋರಿಕೆ ಮಾಡಿದ ತಮಿಳುರಾಕರ್ಸ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 12:12 IST
Last Updated 19 ಜೂನ್ 2020, 12:12 IST
‘ಪೆಂಗ್ವಿನ್’ ಚಿತ್ರದ ಪೋಸ್ಟರ್‌
‘ಪೆಂಗ್ವಿನ್’ ಚಿತ್ರದ ಪೋಸ್ಟರ್‌   

ಭಾರತೀಯ ಚಿತ್ರರಂಗಕ್ಕೆ ತಮಿಳುರಾಕರ್ಸ್‌ ವೆಬ್‌ಸೈಟ್‌ ಕಂಟಕವಾಗಿ ಪರಿಣಮಿಸಿದೆ. ಯಾವುದೇ, ಭಾಷೆಯ ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅದರ ವಿಡಿಯೊ ಸೋರಿಕೆ ಮಾಡುವುದರಲ್ಲಿ ತಮಿಳುರಾಕರ್ಸ್‌ ಎತ್ತಿದ ಕೈ. ಇಂದು ಬಿಡುಗಡೆಯಾಗಿರುವ ಕೀರ್ತಿ ಸುರೇಶ್‌ ನಟನೆಯ ‘ಪೆಂಗ್ವಿನ್‌’ ಚಿತ್ರಕ್ಕೂ ಪೈರಸಿಯ ಬಿಸಿ ತಟ್ಟಿದೆ.

ಕಳೆದ ತಿಂಗಳು ‘ಪೆಂಗ್ವಿನ್‌’ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಿಲ್ಲ. ಅಮೆಜಾನ್‌ ಪ್ರೇಮ್‌ನಲ್ಲಿ ಜೂನ್‌ 19ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಮುಂಜಾನೆಯೇ ಒಟಿಟಿಯಲ್ಲಿ ನೂರಾರು ಜನರು ಈ ಸಿನಿಮಾ ವೀಕ್ಷಿಸಿದ್ದಾರೆ. ಕೀರ್ತಿ ಸುರೇಶ್‌ ಅವರ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ತಮಿಳುರಾಕರ್ಸ್‌ ವೆಬ್‌ಸೈಟ್‌ನಲ್ಲಿ ಈ ಚಿತ್ರದ ಎಚ್‌ಡಿ ವಿಡಿಯೊ ಅಪ್‌ಲೋಡ್‌ ಆಗಿದೆ. ಇದು ಚಿತ್ರತಂಡ ಮತ್ತು ಅಮೆಜಾನ್‌ ಪ್ರೇಮ್‌ಗೆ ಆತಂಕ ತರಿಸಿದೆ. ಜನರು ಮತ್ತು ಚಿತ್ರವಿಮರ್ಶಕರಿಂದ ವಿಭಿನ್ನವಾದ ಪ್ರತಿಕ್ರಿಯೆ ಬರುತ್ತಿರುವ ನಡುವೆಯೇ ಚಿತ್ರ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಬೇಸರ ಮೂಡಿಸಿದೆ. ಹಾಗಾಗಿ, ವೆಬ್‌ಸೈಟ್‌ ವಿರುದ್ಧ ದೂರು ನೀಡಲು ನಿರ್ಧರಿಸಿದೆಯಂತೆ. ಆದರೆ, ಅಧಿಕೃತವಾಗಿ ಯಾವುದೇ ದೂರು ದಾಖಲಾಗಿಲ್ಲ.

ADVERTISEMENT

‘ಪೆಂಗ್ವಿನ್‌’ ಚಿತ್ರಕ್ಕೆ ಈಶ್ವರ್ ಕಾರ್ತಿಕ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಇದು ನಿರ್ಮಾಣವಾಗಿದೆ. ಸ್ಟೋನ್‌ ಬೆಂಚ್‌ ಫಿಲ್ಮ್ಸ್‌ ಹಾಗೂ ಫ್ಯಾಷನ್‌ ಸ್ಟುಡಿಯೋಸ್‌ ಪ್ರೊಡಕ್ಷನ್‌ನಡಿ ಕಾರ್ತಿಕ್‌ ಸುಬ್ಬರಾಜ್‌ ಬಂಡವಾಳ ಹೂಡಿದ್ದಾರೆ. ಗರ್ಭಿಣಿಯೊಬ್ಬಳ ತವಕ, ತಲ್ಲಣ ಕುರಿತು ಹೇಳುವ ಚಿತ್ರ ಇದಾಗಿದೆ.

ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಜ್ಯೋತಿಕಾ ನಟನೆಯ ತಮಿಳು ಚಿತ್ರ ‘ಪೊನ್ಮಗಲ್‌ ವಂದಲ್‌’ ಕೂಡ ಪೈರಸಿಯ ಕಾಟಕ್ಕೆ ಸಿಲುಕಿತ್ತು. ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲೇ ಅಂತರ್ಜಾಲ ತಾಣದಲ್ಲಿ ಇದರ ವಿಡಿಯೊ ಸೋರಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.