ADVERTISEMENT

ಕೀರ್ತಿ ಸುರೇಶ್‌ ಅಭಿನಯದ ‘ಪೆಂಗ್ವಿನ್’ ಟೀಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 8:13 IST
Last Updated 9 ಜೂನ್ 2020, 8:13 IST
‘ಪೆಂಗ್ವಿನ್‌’ ಚಿತ್ರದ ಸನ್ನಿವೇಶವೊಂದರಲ್ಲಿ ನಟಿ ಕೀರ್ತಿ ಸುರೇಶ್‌
‘ಪೆಂಗ್ವಿನ್‌’ ಚಿತ್ರದ ಸನ್ನಿವೇಶವೊಂದರಲ್ಲಿ ನಟಿ ಕೀರ್ತಿ ಸುರೇಶ್‌    

‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್‌ ಅಭಿನಯದ ‘ಪೆಂಗ್ವಿನ್’‌ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

1 ನಿಮಿಷ 32 ಸೆಕೆಂಡುಗಳ ಅವಧಿಯ ಈ ಟೀಸರ್‌ ಬಿಡುಗಡೆಯಾದ ಒಂದೇ ದಿನದಲ್ಲಿ 40 ಲಕ್ಷ ಜನರು ವೀಕ್ಷಿಸಿದ್ದಾರೆ.

ಟೀಸರ್‌ನಲ್ಲಿರುವ ಬಹುತೇಕ ದೃಶ್ಯಗಳು ಕಳೆದ ತಿಂಗಳು ತಮಿಳಿನಲ್ಲಿ ಬಿಡುಗಡೆಯಾದ ಜ್ಯೋತಿಕಾ ಅಭಿಯನದ ‘ಪೊನ್‌ ಮಗಳ್‌ ವಂದಾಳ್’‌ ಚಿತ್ರವನ್ನು ನೆನಪಿಸುತ್ತವೆ.

ADVERTISEMENT

‘ಪೆಂಗ್ವಿನ್‌‘ ಕೂಡ ಮಹಿಳಾ ಕೇಂದ್ರಿತ ಚಿತ್ರವಾಗಿದೆ. ಎರಡೂ ಸಿನಿಮಾಗಳ ಕಥೆಯೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ತಾಯಿಯ ಸಂಕಟ, ದೌರ್ಜನ್ಯ ಎಸಗಿದವರ ವಿರುದ್ಧ ಸೇಡು ತೀರಿಸಿಕೊಳ್ಳುವಂತಹ ಚಟುವಟಿಕೆಗಳ ಸುತ್ತಾ ಹೆಣೆಯಲಾಗಿದೆ.

ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅಮ್ಮನ ಪಾತ್ರದಲ್ಲಿ ನಟಿಸಿದ್ದಾರೆ.ಅಮ್ಮ– ಮಗನ ದೃಶ್ಯದೊಂದಿಗೆ ಟೀಸರ್‌ ಆರಂಭವಾಗುತ್ತದೆ. ಎರಡನೇ ದೃಶ್ಯದಲ್ಲಿ ಹಳದಿ ಕೊಡೆ ಹಿಡಿದ ವ್ಯಕ್ತಿಯ ಜೊತೆಯಲ್ಲಿ ಮಗು ಹೋಗುವುದು ಕಾಣಿಸುತ್ತದೆ. ಮಗು ಕಾಣೆಯಾದ ಅಮ್ಮನ ಸಂಕಟ, ಹುಡುಕಾಟದ ದೃಶ್ಯಗಳು ಟೀಸರ್‌ನಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಕಾಡಿನೊಳಗೆ ಕಪ್ಪು ಬಟ್ಟೆ ಧರಿಸಿದ, ಜೋಕರ್‌ನಂತೆ ಮೇಕಪ್‌ ಮಾಡಿದ ವ್ಯಕ್ತಿ ಚಾಕುವಿನಿಂದ ಚುಚ್ಚುವ ದೃಶ್ಯದೊಂದಿಗೆ 1.32 ನಿಮಿಷದ ಟೀಸರ್‌ ಮುಗಿಯುತ್ತದೆ.

ಟೀಸರ್‌ ನೋಡಿದಾಗ ಈ ಚಿತ್ರಕ್ಕೆ ನಿರ್ದೇಶಕರು ಪೆಂಗ್ವಿನ್‌ ಪಕ್ಷಿಯ ಹೆಸರು ನೀಡಿದ್ದು ಯಾಕೆ? ಎಂದು ಅರಿವಾಗುತ್ತದೆ. ಪೆಂಗ್ವಿನ್‌ಗಳು ತಮ್ಮ ಮರಿಗಳನ್ನು ಎಂತಹ ಕಠಿಣ ಹವಾಮಾನದಲ್ಲೂ ಮುಚ್ಚಟೆಯಿಂದ ಕಾದು, ರಕ್ಷಿಸುತ್ತದೆ. ಹಾಗಾಗಿ ಹೆತ್ತವರ ಪ್ರೀತಿಯನ್ನು ತೋರಿಸುವ ಈ ಚಿತ್ರಕ್ಕೆ ಪೆಂಗ್ವಿನ್‌ ಎಂದು ಶೀರ್ಷಿಕೆ ಇಡಲಾಗಿದೆ.ನಿರ್ದೇಶಕರು ‘ಪೆಂಗ್ವಿನ್‌, ಅಮ್ಮನೊಬ್ಬಳ ಕತೆ’ ಎಂದು ಹೇಳಿದ್ದಾರೆ.

‘ಪೆಂಗ್ವಿನ್‘ ಸಿನಿಮಾ ಜೂನ್‌ 19ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶಿಸಿದವರು ಈಶ್ವರ್‌ ಕಾರ್ತಿಕ್‌.ಇದು ಅವರ ಚೊಚ್ಚಲ ಸಿನಿಮಾ. ಸ್ಟೋನ್‌ ಬೆಂಚ್‌ ಫಿಲ್ಮ್ಸ್‌ ಬ್ಯಾನರ್‌ನಡಿ ಕಾರ್ತಿಕ್‌ ಸುಬ್ಬರಾಜ್‌ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನರೇನ್‌, ರಾಗಿಣಿ ಚಂದ್ರನ್‌ ಹಾಗೂ ಮುಖ್ಯಮಂತ್ರಿ ಚಂದ್ರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರವು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದ್ದು, ಜೂನ್‌ 8ರಂದು ಖ್ಯಾತ ನಟಿಯರಾದ ತ್ರಿಷಾ, ಸಮಂತಾ ಅಕ್ಕಿನೇನಿ, ಮಂಜು ವಾರಿಯರ್‌ ಹಾಗೂ ತಾಪ್ಸಿ ಪನ್ನು ಆಯಾಯಾ ಭಾಷೆಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಟೀಸರ್‌ ಬಿಡುಗಡೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.