‘ನಾನು ‘ಡರ್ಟಿ ಪಿಕ್ಟರ್’ ಸಿನಿಮಾಗೆ ಸಹಿ ಮಾಡಿದ್ದು ತಿಳಿದಾಗ ಜನ ನನ್ನನ್ನು ಹುಚ್ಚಿ ಎಂದು ಕರೆದಿದ್ದರು. ಅಲ್ಲದೇ ಆ ಸಿನಿಮಾದಲ್ಲಿ ನಾನು ನಟಿಸಬಾರದು. ಅದು ನನ್ನ ಇಮೇಜ್‌ಗೆ ಧಕ್ಕೆ ತರುತ್ತದೆ ಎಂದೆಲ್ಲಾ ಮಾತನಾಡಿಕೊಂಡಿದ್ದರು. ಆದರೆ ನನ್ನ ತಂದೆ–ತಾಯಿ ನನಗೆ ಪ್ರೋತ್ಸಾಹ ನೀಡಿದ್ದರು. ನಿನ್ನ ಗುರಿಯನ್ನು ನೀನು ಮುಟ್ಟು ಎಂದು ಹುರಿದುಂಬಿಸಿದ್ದರು’ ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ ನಟಿ ವಿದ್ಯಾ ಬಾಲನ್.
ಆಂಗ್ಲ ಮಾಧ್ಯಮ(ಇಂಡಿಯಾ ಟುಡೆ)ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ರೀತಿ ಹೇಳಿಕೊಂಡಿದ್ದಾರೆ ವಿದ್ಯಾ.
‘ನಾನು ಮಿಲನ್ ಲೂಥ್ರಿಯಾ ಅವರನ್ನು ಭೇಟಿ ಮಾಡಿ ಮಾಡಿದಾಗ ಅವರು ನನ್ನ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸಿದ್ದರು. ಈ ಸಿನಿಮಾದಲ್ಲಿ ಕೆಲವೊಂದು ಸೌಂದರ್ಯಮಿಮಾಂಸೆಯ ದೃಶಗಳು ಇವೆ ಎಂಬುದು ನನಗೆ ತಿಳಿದಿತ್ತು. ಆದರೆ ಅದು ನಿಷ್ಕೃಷ್ಟ ಅಲ್ಲ ಎಂದು ನನಗೆ ಅನ್ನಿಸಿತ್ತು. ಅಲ್ಲದೇ ಈ ಸಿನಿಮಾಕ್ಕೆ ಏಕ್ತಾ ಕಪೂರ್ ನಿರ್ಮಾಪಕಿಯಾಗಿದ್ದರು. ಅವರು ಕೂಡ ಒಂದು ಹೆಣ್ಣು. ಅವರು ನನಗೆ ಮೊದಲೇ ಪರಿಚಯ. ನಾನು ನನ್ನ ವೃತ್ತಿ ಬದುಕನ್ನು ಆರಂಭಿಸಿದ್ದು ಅವರೊಂದಿಗೆ. ಆ ಕಾರಣಕ್ಕೆ ನಾನು ಸುರಕ್ಷಿತ ಎಂಬ ಭಾವನೆ ಮೂಡಿತ್ತು. ಆದರೆ ಕೆಲವು ಜನರು ನನಗೆ ‘‘ನೀನು ಹುಚ್ಚಿ, ಮಾರ್ಯದೆ ಇಲ್ಲದವಳು, ನೀನು ಈ ರೀತಿಯ ಸಿನಿಮಾ ಒಪ್ಪಿಕೊಳ್ಳಬಾರದಿತ್ತು’’ ಎಂದೆಲ್ಲಾ ಜರಿದಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.
‘ನನಗಿನ್ನೂ ನೆನಪಿದೆ. ಆಗ ನನ್ನ ಪೋಷಕರ ಬಳಿ ನಾನು ಈ ಸಿನಿಮಾವನ್ನು ಮಾಡಲೇ? ಎಂದು ಕೇಳಿದ್ದೆ. ಆಗ ಅವರು ನಿನಗೆ ಏನು ಸರಿ ಎನ್ನಿಸುತ್ತದೆ ಅದನ್ನು ಮಾಡು ಎಂದಿದ್ದರು. ನನ್ನ ಪೋಷಕರಿಗೆ ಸಿನಿಮಾ ಹಿನ್ನೆಲೆಯಿಲ್ಲ. ಆದರೂ ಅವರು ಎಂದೂ ನನಗೆ ಯಾವುದಕ್ಕೂ ಅಡ್ಡಿಪಡಿಸಿಲ್ಲ’ ಎಂದಿದ್ದಾರೆ ವಿದ್ಯಾ.
‘ಡರ್ಟಿ ಪಿಕ್ಚರ್’ ಚಿತ್ರವು ನಟಿ ಸಿಲ್ಕ್ ಸ್ಮಿತಾ ಅವರ ಅರೆ–ಜೀವನಾಧಾರಿತ ಚಿತ್ರವಾಗಿತ್ತು. ಇದರಲ್ಲಿ ಹಳ್ಳಿಯಿಂದ ಚೆನ್ನೈ ಪಟ್ಟಣಕ್ಕೆ ಬಂದು ಸಿನಿಮಾಗಳ ಮೂಲಕ ತನ್ನ ಅದೃಷ್ಟ ಪರೀಕ್ಷೆಗೆ ಇಳಿಯುವ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದರು ಶಕುಂತಲಾ ದೇವಿ ಖ್ಯಾತಿಯ ನಟಿ.
‘ನಾನು ಚಿಕ್ಕವಳಿದ್ದಾಗ ನನ್ನ ಅಮ್ಮ ನನಗೆ ಶಾರ್ಟ್ಸ್ ತೊಡಿಸುತ್ತಿದ್ದರು. ನಾನು ದಪ್ಪಗಿದ್ದ ಕಾರಣಕ್ಕೆ ಎಲ್ಲರೂ ನನ್ನನ್ನು ಆಡಿಕೊಳ್ಳುತ್ತಿದ್ದರು. ಅಲ್ಲಿಂದ ಮುಂದೆ ನಾನು ನನ್ನ ಜೀವನದಲ್ಲಿ ಎಂದಿಗೂ ಶಾರ್ಟ್ಸ್ ಧರಿಸಿರಲಿಲ್ಲ. ಆದರೆ ಈ ಸಿನಿಮಾದ ಮೊದಲ ಕಾಸ್ಟ್ಯೂಮ್ ಟ್ರಯಲ್‌ನಲ್ಲಿ ನಿಹಾರಿಕಾ ಸಿಂಗ್ ನನಗೆ ಒಂದು ಜೊತೆ ಶಾರ್ಟ್ಸ್ ನೀಡಿದ್ದರು. ನಾನು ಹಿಂದಿನ ಭಾವನೆಯಿಂದ ಹೊರ ಬಂದು ಶಾರ್ಟ್ ಧರಿಸಿದ್ದೆ. ಅಲ್ಲದೇ ಅದು ತಪ್ಪು ಎಂದೂ ನನಗೆ ಅನ್ನಿಸಲಿಲ್ಲ’ ಎಂದಿದ್ದಾರೆ.
ಡರ್ಟಿ ಪಿಕ್ಚರ್ ಸಿನಿಮಾ 2011ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಇಮ್ರಾನ್ ಹಶ್ಮಿ, ತುಷಾರ್ ಕಪೂರ್ ಹಾಗೂ ನಾಸಿರುದ್ದಿನ್ ಶಾ ನಟಿಸಿದ್ದರು. ಈ ಚಿತ್ರದ ಅಭಿನಯಕ್ಕೆ ವಿದ್ಯಾ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಇದು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.