ADVERTISEMENT

ಈ ವಾರ ಹಾರಿಬರುವಳು‘ಪೈಲಟ್‌’ ಪಾರ್ವತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 12:41 IST
Last Updated 22 ಏಪ್ರಿಲ್ 2019, 12:41 IST
ಪಾರ್ವತಿ ಮೆನನ್‌– ಉಯೆರೆ
ಪಾರ್ವತಿ ಮೆನನ್‌– ಉಯೆರೆ   

ತ್ರಿಭಾಷಾ ನಟಿ ಪಾರ್ವತಿ ಮೆನನ್‌ ಪೈಲಟ್‌ ಪಲ್ಲವಿಯಾಗಿ ನಟಿಸಿರುವ ‘ಉಯೆರೆ’ ಮುಂದಿನ ವಾರ ತೆರೆಗೆ ಬರಲಿದೆ. ಪಾತ್ರಗಳೆಂದರೆ ಸವಾಲು ಎಂದೇ ಪರಿಗಣಿಸಿ ನಟಿಸುವುದು ಪಾರ್ವತಿ ಸ್ಟೈಲ್‌. ‘ಉಯೆರೆ’ಯ ಟ್ರೇಲರ್‌ ನೋಡಿದ ಲಕ್ಷಾಂತರ ಮಂದಿ ಪಾರ್ವತಿಯ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ನಾಯಕಿಪ್ರಧಾನ ಕತೆಯುಳ್ಳ ಉಯೆರೆಯಲ್ಲಿ ಪೈಲಟ್‌ ಪಲ್ಲವಿಯೇ ಶಕ್ತಿ.

ಕನ್ನಡದ ಮೂಲಕ ನಾಯಕನಟಿಯಾದ ಮಲಯಾಳಿ ಕುಟ್ಟಿ ಪಾರ್ವತಿ ಮೆನನ್‌ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿಬ್ಯುಸಿ ನಟಿಯಾಗಿದ್ದಾರೆ. ಅವರ ಹೊಸ ಚಿತ್ರ ‘ಉಯಾರೆ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಜಲಿ ಮೆನನ್ ಅವರ ‘ಕೂಡೆ’ಯ ನಂತರ ಪಾರ್ವತಿ ಅಭಿನಯಿಸುತ್ತಿರುವ ಚಿತ್ರ ಇದು.

ಪಾತ್ರಗಳನ್ನು ತನ್ನ ಸಾಮರ್ಥ್ಯ ಸಾಬೀತು ಮಾಡಲು ಸಿಗುವ ಸವಾಲು ಎಂದು ಪರಿಗಣಿಸುವ ಪಾರ್ವತಿಯ ಛಾತಿಯೇ ‘ಮಾರಿ’ಯಂತಹ ಕಠಿಣ ಪಾತ್ರಗಳನ್ನೂ ಸುಲಭ ಸರಾಗವಾಗಿ ನಿರ್ವಹಿಸಲು ಸಾಧ್ಯವಾಗಿಸಿದ್ದು.

ADVERTISEMENT

ಹಾರಾಟದಲ್ಲಿರುವಾಗಲೇ ತಾಂತ್ರಿಕ ದೋಷ ಕಾಣಿಸಿಕೊಳ್ಳುವ ವಿಮಾನದ ಪೈಲಟ್ ಆಗಿ ಪರಿಸ್ಥಿತಿಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಛಲಗಾತಿ ಮತ್ತು ಧೈರ್ಯವಂತೆ ಪೈಲಟ್‌ ಪಲ್ಲವಿ. ಸದಾ ಆತ್ಮವಿಶ್ವಾಸದ ಬುಗ್ಗೆಯಂತೆ ಇರುವ ಪಾರ್ವತಿಯ ವ್ಯಕ್ತಿತ್ವಕ್ಕೆ ಹತ್ತಿರವಾದ ಪಾತ್ರವಿದಾಗಿದೆ. ಜೊತೆಗೆ ಪಲ್ಲವಿ ಪಾತ್ರದಿಂದ ಸಾಕಷ್ಟು ಪಾಠಗಳನ್ನೂ ಕಲಿತಿದ್ದಾರಂತೆ.

ಚಿತ್ರದಲ್ಲಿ ಪೈಲಟ್‌ ಪಲ್ಲವಿ ಆ್ಯಸಿಡ್‌ ದಾಳಿ ಸಂತ್ರಸ್ತೆಯೂ ಹೌದು. ಇಷ್ಟಾದರೂ ವಿಮಾನವೊಂದರ ಚುಕ್ಕಾಣಿ ಹಿಡಿದು ಅತ್ಯಂತ ಸಂಯಮದಿಂದ ಆಪತ್ತನ್ನು ಎದುರಿಸುವ ಮನೋಬಲದ ಯುವತಿ. ಅವಳ ಈ ಛಾತಿಗೆ ಮನಸೋತ ಅಸಿಫ್‌ ಅಲಿ (ನಾಯಕ) ಅವಳೊಂದಿಗೆ ರೊಮ್ಯಾನ್ಸ್‌ ಮಾಡಲು ಬಯಸುತ್ತಾನೆ. ಆ್ಯಸಿಡ್‌ನಿಂದ ಸುಟ್ಟ ಮುಖವನ್ನು ಸುತ್ತಿಕೊಂಡೇ ಇರುವ ಪಲ್ಲವಿಗೂ ರೊಮ್ಯಾಂಟಿಕ್‌ ಆಗಿ ಇರಲು ಇಷ್ಟ. ಟೊವಿನೊ ಥಾಮಸ್‌ ಎರಡನೇ ನಾಯಕನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಮನು ಅಶೋಕನ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಉಯೆರೆ’ಯ ಸಂಭಾಷಣೆ ಬರೆದವರು ಸಂಜಯ್ ಮತ್ತು ಬಾಬ್ಬಿ.

ಇದೇ 26ರಂದು ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮೊದಲು ಟ್ರೇಲರ್‌ಗೆ ಸಿಕ್ಕಿರುವ ಅಭೂತ ಪ್ರತಿಕ್ರಿಯೆ ಚಿತ್ರತಂಡಕ್ಕೆ ಟಾನಿಕ್‌ ಕೊಟ್ಟಂತಾಗಿದೆ. ಚಿತ್ರ ಬಿಡುಗಡೆಯಾದಾಗಲೂ ಇದೇ ಉಮೇದಿನಿಂದ ಚಿತ್ರಮಂದಿರಕ್ಕೆ ಬರುತ್ತಾರೋ ಎಂಬುದಕ್ಕೆ ಮುಂದಿನ ವಾರಗಳಲ್ಲಿ ಉತ್ತರ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.