ADVERTISEMENT

‘ದಿ ವ್ಯಾಕ್ಸಿನ್‌ ವಾರ್‌’ ಚಿತ್ರಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

ಪಿಟಿಐ
Published 5 ಅಕ್ಟೋಬರ್ 2023, 12:45 IST
Last Updated 5 ಅಕ್ಟೋಬರ್ 2023, 12:45 IST
<div class="paragraphs"><p>ಪ್ರಧಾನಿ ಮೋದಿ ಮತ್ತು ‘ದಿ ವಾಕ್ಸಿನ್ ವಾರ್‌’ ಚಿತ್ರದ ಪೋಸ್ಟರ್‌</p></div>

ಪ್ರಧಾನಿ ಮೋದಿ ಮತ್ತು ‘ದಿ ವಾಕ್ಸಿನ್ ವಾರ್‌’ ಚಿತ್ರದ ಪೋಸ್ಟರ್‌

   

ರಾಜಸ್ಥಾನ: ‘ದಿ ವಾಕ್ಸಿನ್‌ ವಾರ್‌’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಚಿತ್ರ ನೋಡಿದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಾನೆ ಎಂದು ಹೇಳಿದ್ದಾರೆ.

‘ದಿ ಕಾಶ್ಮೀರಿ ಫೈಲ್ಸ್‌’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ, ‘ದಿ ವ್ಯಾಕ್ಸಿನ್‌ ವಾರ್‌‘ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಸೆಪ್ಟೆಂಬರ್‌ 28ರಂದು ಚಿತ್ರ ಬಿಡುಗಡೆಗೊಂಡಿತ್ತು. ಹಿರಿಯ ನಟರಾದ ಅನುಪಮ್ ಖೇರ್, ನಾನಾ ಪಾಟೇಕರ್, ಕನ್ನಡದ ನಟಿ ಸಪ್ತಮಿ ಗೌಡ ಸೇರಿದಂತೆ ಅನೇಕರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋವಿಡ್‌ ಸಮಯದಲ್ಲಿ ದೇಶದ ಜನರಲ್ಲಿದ್ದ ಭೀತಿ ಹಾಗೂ ದೇಶಿಯವಾಗಿ ವ್ಯಾಕ್ಸಿನ್‌ ಅಭಿವೃದ್ದಿಪಡಿಸಿದ ವಿಜ್ಞಾನಿಗಳ ಶ್ರಮವನ್ನು ಚಿತ್ರದಲ್ಲಿ ತೋರಿಸಲಾಗಿದೆ.

ADVERTISEMENT

ಜೋಧ್‌ಪುರದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವ್ಯಾಕ್ಸಿನ್‌ ಅಭಿವೃದ್ದಿಪಡಿಸುವಲ್ಲಿ ವಿಜ್ಞಾನಿಗಳು ಪಟ್ಟ ಶ್ರಮವನ್ನು ಸ್ಮರಿಸಿದ್ದಾರೆ. ‘‘ದಿ ವ್ಯಾಕ್ಸಿನ್‌ ವಾರ್‌’ ಎಂಬ ಹೆಸರಿನ ಚಿತ್ರ ಬಿಡುಗಡೆಗೊಂಡಿದೆ. ಕೋವಿಡ್‌ ಸಾಂಕ್ರಾಮಿಕದ ವಿರುದ್ಧ ನಮ್ಮ ವಿಜ್ಞಾನಿಗಳ ಹೋರಾಟವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಕೇಳಿದ್ದೇನೆ. ಚಿತ್ರ ನೋಡಿದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುತ್ತಾನೆ’ ಎಂದು ಹೇಳಿದ್ದಾರೆ.

‘ಇಂತಹ ಚಿತ್ರ ನಿರ್ಮಿಸುವ ಮೂಲಕ ದೇಶದ ವಿಜ್ಞಾನಿಗಳು ಮತ್ತು ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಚಿತ್ರದ ನಿರ್ದೇಶಕರಿಗೆ ಅಭಿನಂದನೆಗಳು. ಇದು ನಮ್ಮ ಮುಂದಿನ ಪೀಳಿಗೆಗೆ ತುಂಬಾ ಉಪಯುಕ್ತವಾಗಲಿದೆ’ ಎಂದರು.

ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿಯವರಿಗೆ ನಿರ್ದೇಶಕ ಅಗ್ನಿಹೋತ್ರಿ ಧನ್ಯವಾದ ತಿಳಿಸಿದ್ದಾರೆ. ‘ದೇಶದಲ್ಲಿ ತಯಾರಾದ ಕೋವಿಡ್‌ ಲಸಿಕೆ ವಿದೇಶಗಳಲ್ಲೂ ಹಲವರ ಜೀವ ಉಳಿಸಿತು. ಈ ಕಾರ್ಯ ಸಾಧ್ಯವಾಗಿಸಿದ ಭಾರತೀಯ ವಿಜ್ಞಾನಿಗಳು, ವಿಶೇಷವಾಗಿ ಮಹಿಳಾ ವಿಜ್ಞಾನಿಗಳ ಕೊಡುಗೆಯನ್ನು ಪ್ರಧಾನಿ ಮೋದಿ ಸ್ಮರಿಸಿರುವುದನ್ನು ಕಂಡು ಸಂತಸವಾಗಿದೆ. ತಮ್ಮ ಶ್ರಮವನ್ನು ಪ್ರಧಾನಿ ಮೋದಿ ಅವರು ಕೊಂಡಾಡಿರುವುದಕ್ಕೆ ಮಹಿಳಾ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.