ಈ ವಾರ ಸಿನಿಮಾಗಳ ಜಾತ್ರೆ. ಒಂದೆಡೆ ಕನ್ನಡದ ಕಾಂತಾರದ ಅಬ್ಬರ ಶುರುವಾಗಿದೆ. ಮತ್ತೊಂದೆಡೆ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ತೆರೆಗೆ ಬಂದಿದೆ. ಹೃತಿಕ್ ರೋಷನ್–ಸೈಫ್ ಅಲಿಖಾನ್ ಮುಖ್ಯಭೂಮಿಕೆಯ ಹಿಂದಿಯ ವಿಕ್ರಂ ವೇದಗೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಣಿರತ್ನಂ ಸಿನಿಮಾ ಎಂದರೆ ನಿರೀಕ್ಷೆ ಹೆಚ್ಚು. ಗಟ್ಟಿಯಾದ ಕಥೆ, ಉತ್ತಮ ನಿರೂಪಣೆ ಜೊತೆಗೆ ಕಾಲಕ್ಕೆ ತಕ್ಕಂತೆ ದೃಶ್ಯಗಳನ್ನು ಶ್ರೀಮಂತಗೊಳಿಸುವಲ್ಲಿ ಎಂದಿಗೂ ಮಣಿರತ್ನಂ ಎಡವಿಲ್ಲ. ಚಿಯಾನ್ ವಿಕ್ರಂ, ಐಶ್ವರ್ಯಾ ರೈ, ಜಯರಾಂ ರವಿ, ಕಾರ್ತಿ, ತ್ರಿಷಾ ಮೊದಲಾದ ದೊಡ್ಡ ತಾರಾ ಬಳಗವನ್ನು ಹೊಂದಿರುವ ಪೊನ್ನಿಯಿನ್ ಸೆಲ್ವನ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುತೇಕ ವಿಮರ್ಶಕರು ಸಿನಿಮಾವನ್ನು ದೃಶ್ಯವೈಭವ ಎಂದು ಬಣ್ಣಿಸಿದ್ದಾರೆ.
2019ರಿಂದ 150 ದಿನಗಳ ಕಾಲ ಚಿತ್ರದ ಎರಡೂ ಭಾಗಗಳನ್ನು ಚಿತ್ರೀಕರಿಸಲಾಗಿದೆ ಎಂದು ನಟ ಜಯರಾಂ ರವಿ ಸಂದರ್ಶನವೊಂದರಲ್ಲಿ ಹೇಳಿದ್ದರು. 1955ರಲ್ಲಿ ಪ್ರಕಟಿತ ಕಲ್ಕಿ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಐತಿಹಾಸಿಕ ಚಿತ್ರ ಪೊನ್ನಿಯಿನ್. ಹೀಗಾಗಿ ಮಣಿರತ್ನಂ ಸುಂದರ ದೃಶ್ಯಗಳನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಎ.ಆರ್.ರೆಹಮಾನ್ ದೃಶ್ಯಗಳಿಗೆ ತಕ್ಕಂತೆ ಅತ್ಯದ್ಬುತ ಸಂಗೀತ ನೀಡಿದ್ದಾರೆ ಎಂದು ಬಹುತೇಕ ವಿಮರ್ಶಕರು ಟ್ವೀಟ್ ಮಾಡಿದ್ದಾರೆ.
ಸಿನಿಮಾದ ಕುರಿತು ಟ್ವೀಟ್ ಮಾಡಿರುವ ನಟ ಕಾರ್ತಿ, ಇದು ಹಿಂದೆಂದೂ ಕಾಣದ ದೃಶ್ಯವೈಭವ. ಮಣಿರತ್ನಂ ಅವರಿಂದ ಅತ್ಯದ್ಬುತ ನಿರೂಪಣೆ. ಈ ಸಿನಿಮಾದ ಭಾಗವಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ.
ತ್ರಿಷಾ ಹಾಗೂ ಐಶ್ವರ್ಯ ರೈ ಬಚ್ಚನ್ ಪಾತ್ರಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಚೋಳರು ಅಬ್ಬರಿಸುತ್ತ ಬಂದಿದ್ದಾರೆ ಎಂಬಂತೆ ಅಭಿಮಾನಿಗಳು ಸಂತಸವ್ಯಕ್ತಪಡಿಸಿದ್ದಾರೆ. ಸಿನಿಮಾದ ದ್ವಿತಿಯಾರ್ಧ ಸ್ವಲ್ಪ ಗಜಿಬಿಜಿಯಿಂದ ಕೂಡಿದೆ ಎಂಬ ಪ್ರತಿಕ್ರಿಯೆಗಳೂ ಬಂದಿವೆ. ಸದ್ಯ ಟ್ವಿಟರ್‌ನಲ್ಲಿ ಪೊನ್ನಿಯಿನ್ ವಿಮರ್ಶೆಗಳು ಅಬ್ಬರಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.