ಬೆಂಗಳೂರು: ಮುಂಗಾರು ಮಳೆ ಚಿತ್ರದ ಮೂಲಕ ಚಂದನವನದಲ್ಲಿ ಸದ್ದು ಮಾಡಿದ್ದ ನಟಿ ಪೂಜಾ ಗಾಂಧಿ, ನಂತರದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ‘ದಂಡುಪಾಳ್ಯ’ದಲ್ಲಿ ಕಾಣಿಸಿಕೊಂಡ ಬಳಿಕ ಕಳೆದ ಕೆಲ ವರ್ಷದಿಂದ ಮರೆಯಾಗಿದ್ದ ಪೂಜಾ ಗಾಂಧಿ ಇದೀಗ ‘ಸಂಹಾರಿಣಿ’ ಚಿತ್ರದ ಮೂಲಕ ಮತ್ತೆ ತೆರೆಗೆ ಬರುತ್ತಿದ್ದಾರೆ.
ಕೆ.ಜಾವಹರ್ ನಿರ್ದೇಶನದ ಈ ಚಿತ್ರವು ಕಳೆದ ಫೆಬ್ರುವರಿಯಲ್ಲೇ ಸಿದ್ಧವಾಗಿದ್ದರೂ, ಕೋವಿಡ್ ಕಾರಣದಿಂದ ತೆರೆ ಮೇಲೆ ಬರಲು ವಿಳಂಬವಾಗಿತ್ತು. ಇದೀಗ ಏಪ್ರಿಲ್‌ನಲ್ಲಿ ಚಿತ್ರವು ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡವು ಘೋಷಿಸಿದೆ. ಚಿತ್ರದಲ್ಲಿವಿಭಿನ್ನ ಪಾತ್ರದಲ್ಲಿ ಪೂಜಾ ಗಾಂಧಿ ಕಾಣಿಸಿಕೊಂಡಿದ್ದಾರೆ. ನಟರಾದ ಕಿಶೋರ್, ರಾಹುಲ್ ದೇವ್ ತಾರಾಗಣದಲ್ಲಿ ಇದ್ದಾರೆ.
ತಮ್ಮ ಪಾತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾ, ‘ದಂಡುಪಾಳ್ಯ ಚಿತ್ರದ ಬಳಿಕ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಸಂಹಾರಿಣಿ ಮನಸ್ಸಿಗೆ ಹತ್ತಿರವಾದ ಪಾತ್ರವಾಗಿದೆ. ಹೆಣ್ಣು ಮಕ್ಕಳ ಭಾವನೆಯನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಸಂಹಾರಿಣಿ ಭಾವನಾತ್ಮಕ, ಆ್ಯಕ್ಷನ್ ಚಿತ್ರ. ಪ್ರತೀಕಾರ ಆಧರಿತ ಸಿನಿಮಾ ಇದಾಗಿದ್ದು, ನಾಲ್ಕು ಫೈಟ್ಸ್ ಇವೆ. ಇದು ನನಗೆ ಅತ್ಯಂತ ಸವಾಲಾಗಿತ್ತು. ಮಾಲಾಶ್ರಿ ಅವರ ಸಾಧನೆಗೆ ಮೆಚ್ಚಬೇಕು. ಎಷ್ಟೊಂದು ಚಿತ್ರದಲ್ಲಿ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ. ನಾನು ನನ್ನ ಕೈಲಾದ ಪ‍್ರಯತ್ನವನ್ನು ಮಾಡಿದ್ದೇನೆ’ ಎಂದರು.
‘ತಮಿಳಿನಲ್ಲಿ ಹಲವು ಚಿತ್ರಗಳನ್ನು ನಿರ್ಮಾಪಕರಾದ ವಿನೋದ್ ಮಾಡಿದ್ದಾರೆ. ನಿರ್ದೇಶಕರಾದ ಜಾವಹರ್ ಕನ್ನಡದಲ್ಲಿ ಉತ್ತಮವಾದ ಚಿತ್ರಕಥೆಯೊಂದನ್ನು ತಂದಿದ್ದಾರೆ. ಒಂದೇ ತಿಂಗಳಲ್ಲಿ ನಿರಂತರವಾಗಿ ಚಿತ್ರೀಕರಣ ಮಾಡಿದ್ದೆವು. ಪಾತ್ರದ ಕುರಿತು ಮತ್ತಷ್ಟು ಮಾಹಿತಿ ಟ್ರೇಲರ್‌ನಲ್ಲಿ ದೊರೆಯುತ್ತದೆ. ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ’ ಎಂದರು.
ಇತ್ತೀಚೆಗಷ್ಟೇ ಚಿತ್ರತಂಡವು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಇದರಲ್ಲಿ ಮಚ್ಚು, ಗನ್ ಹಾಗೂ ಚಾಕೂ ಹಿಡಿದ ರಗಡ್ ಲುಕ್‌ನಲ್ಲಿ ಪೂಜಾ ಗಾಂಧಿ ಕಾಣಿಸಿಕೊಂಡಿದ್ದರು. ಜೊತೆಗೆ ಬಾಕ್ಸಿಂಗ್ ಅಭ್ಯಾಸದ ದೃಶ್ಯವೂ ಅದರಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.