ADVERTISEMENT

ಸಕಾರಾತ್ಮಕ ಮನೋಭಾವ ಇದ್ದರೆ ಒತ್ತಡ ಮಾಯ

ರೂಪಾ .ಕೆ.ಎಂ.
Published 15 ಡಿಸೆಂಬರ್ 2019, 19:30 IST
Last Updated 15 ಡಿಸೆಂಬರ್ 2019, 19:30 IST
ಮೇಘನಾ ಗಾಂವ್ಕರ್‌
ಮೇಘನಾ ಗಾಂವ್ಕರ್‌   

ಆರೋಗ್ಯವಾಗಿರುವುದು ನಿಜವಾದ ಫಿಟ್‌ನೆಸ್‌. ಸುಂದರವಾಗಿ ಕಾಣಬೇಕು ನಿಜ; ಆದರೆ, ಆರೋಗ್ಯದ ಕಾಳಜಿಯೂ ಅಷ್ಟೆ ಮುಖ್ಯ ಅಂತಾರೆ ಸಂಪಿಗೆ ಮೂಗಿನ ಚೆಲುವೆ ಮೇಘನಾ ಗಾಂವ್ಕರ್‌.ಚಾರ್‌ಮಿನಾರ್‌, ಸಿಂಪಲ್ಲಾಗ್‌ ಆಗಿ ಇನ್ನೊಂದು ಲವ್‌ ಸ್ಟೋರಿ, ಕಾಳಿದಾಸ ಕನ್ನಡ ಮೇಷ್ಟ್ರು... ಇಂಥ ಕನ್ನಡ ಸಿನಿಮಾಗಳಿಂದ ಗಮನ ಸೆಳೆದಿರುವ ಈ ಬೆಡಗಿ ಫಿಟ್‌ನೆಸ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ...

ನಿಮ್ಮ ವರ್ಕ್ಔಟ್‌ನಲ್ಲಿ ಏನೆಲ್ಲ ಇರುತ್ತೆ?

ವರ್ಕ್‌ಔಟ್‌ ಬಗ್ಗೆ ತುಂಬಾ ಎಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ನಿತ್ಯ ಜಿಮ್‌ಗೆ ಹೋಗ್ತೀನಿ. ಒಂದು ಗಂಟೆಯಾದರೂ ವ್ಯಾಯಾಮ ಮಾಡ್ತೀನಿ. ಕಾರ್ಡಿಯೊವ್ಯಾಯಾಮಕ್ಕೂ ಒತ್ತು ಕೊಡ್ತೀನಿ. ಯೋಗ ಅಂತೂ ಇದ್ದೇ ಇರುತ್ತೆ.

ADVERTISEMENT

ಫಿಟ್‌ ಆಗಿರೊದು ಅಂದ್ರೆ?

ತೂಕ ತುಂಬಾ ಇಳಿಸಿಕೊಂಡು ಬಳುಕುವ ಬಳ್ಳಿಯ ಹಾಗೇ ಆಗಬೇಕು ಅನ್ನೊದಷ್ಟೆ ಫಿಟ್‌ನೆಸ್‌ ಆಗಲ್ಲ. ನಮ್ಮ ದೇಹದ ಎತ್ತರಕ್ಕೆ ತಕ್ಕನಾದ ತೂಕ ಇರಬೇಕು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಮುಖ್ಯ. ಇವೆರಡೂ ಒಂದಕ್ಕೊಂದು ಪೂರಕ. ಹಂಗಿದ್ರೆ ಅದೇ ಫಿಟ್‌ನೆಸ್‌.

ನಿಮ್ಮ ಡಯೆಟ್‌ ಹೇಗಿರುತ್ತೆ?

ನಾನು ಆಹಾರ ಪಥ್ಯ ಅಂತೆಲ್ಲ ಏನೂ ಮಾಡಲ್ಲ. ಪಕ್ಕಾ ಸಸ್ಯಾಹಾರಿ. ಸರಿಯಾದ ಸಮಯಕ್ಕೆ ತಿನ್ನಬೇಕು ಅನ್ನುವ ನಿಯಮವನ್ನು ತಪ್ಪಲ್ಲ. ದಕ್ಷಿಣ ಭಾರತೀಯ ತಿನಿಸುಗಳೆಲ್ಲವೂ ನನಗಿಷ್ಟ. ಸಾಂಬಾರ್‌, ರಸಂ ಇಷ್ಟ. ಏನೇ ಇಷ್ಟ ಇದ್ರೂ ಕಡಿಮೆ ಪ್ರಮಾಣದಲ್ಲಿ ತಿಂತೀನಿ.ತಿಂಗಳಿಗೊಮ್ಮೆ ಪೀಜಾ ತಿಂತಿನಿ. ಸಕ್ಕರೆ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ಕಡಿಮೆ ಮಾಡಿದ್ದೀನಿ. ಸಕ್ಕರೆ ಬದಲು ಬೆಲ್ಲ ಬಳಸ್ತೀನಿ. ಡಯೆಟ್‌ಗೆ ವಿರುದ್ಧ ಪದ ಅಕ್ಕಿ ಅನ್ನೊ ಹಾಗೇ ಬಿಂಬಿತ ಆಗಿದೆ. ಆದರೆ, ದಕ್ಷಿಣ ಭಾರತದವಳಾಗಿ ಅನ್ನ ತಿನ್ನದೇ ಇರೊಕೆ ಆಗೊಲ್ಲ.‌ ಆದರೆ ರಾತ್ರಿತಿನ್ನುವುದಿಲ್ಲ ಅಷ್ಟೆ.

ಮನಸ್ಸಿನ ಆರೋಗ್ಯಕ್ಕೆ ಹೇಗೆಲ್ಲ ಕಾಳಜಿ ಮಾಡ್ತೀರಾ?

ಒತ್ತಡದ ಬದುಕಿಗೆ ಧ್ಯಾನವೊಂದೇ ಮದ್ದು. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲುನಿತ್ಯ ಧ್ಯಾನದ ಮೊರೆ ಹೋಗ್ತೀನಿ. ಎಂಥ ಕ್ಲಿಷ್ಟ ಸಂದರ್ಭದಲ್ಲಿಯಾದರೂ ಸಕಾರಾತ್ಮಕವಾಗಿ ಇರಲು ಇಷ್ಟಪಡ್ತೀನಿ. ಒಳ್ಳೆಯದನ್ನು ಮಾತಾಡುವವರು ಹತ್ತಿರ ಇದ್ದರೆ ಧನಾತ್ಮಕತೆಯನ್ನು ಸಂಪಾದಿಸುವುದು ಬಹಳ ಸುಲಭ. ಅಂಥವರ ಜತೆ ಜಾಸ್ತಿ ಬೆರೆಯೋಕೆ ಇಷ್ಟ ಪಡ್ತೀನಿ. ಜತೆಗೆ ಪುಸ್ತಕ ಓದೋದು ಅಂದ್ರೆ ಇಷ್ಟ. ಕನ್ನಡ, ಮರಾಠಿ, ಫ್ರೆಂಚ್‌ ಸಂಗೀತವನ್ನು ಆಲಿಸುತ್ತೀನಿ. ಇವೆಲ್ಲವೂ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.

ಫಿಟ್‌ನೆಸ್‌ ವಿಚಾರದಲ್ಲಿ ನಿಮಗೆ ರೋಲ್‌ಮಾಡೆಲ್‌ ಯಾರು?

ಈ ವಿಚಾರದಲ್ಲಿ ನನಗೆ ರೋಲ್‌ ಮಾಡೆಲ್‌ ಬಾಲಿವುಡ್‌ ನಟಿ ಕತ್ರೀನಾ ಕೈಫ್‌. ಅವರು ತುಂಬಾ ಶ್ರದ್ಧೆ ವಹಿಸಿ ವರ್ಕ್‌ಔಟ್‌ ಮಾಡ್ತಾರೆ. ಅವರನ್ನು ಫಾಲೋ ಮಾಡ್ತೀನಿ. ಕೆಲವು ಚಿತ್ರಗಳು ನೋಡಿದಾಗ ಅವರ ಹಾಗೇ ಆಗಬೇಕು ಅಂತೆಲ್ಲ ಅಂದ್ಕೊಳ್ತಾ ಇರ್ತೀನಿ. ಆದರೆ, ಅದು ತುಸು ಕಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.