ADVERTISEMENT

ಬೀದರ್‌: ರೈತ ಕುಟುಂಬಗಳಿಗೆ ಧೈರ್ಯ ತುಂಬಿದ್ದ ಪುನೀತ್

‘ದೊಡ್ಮನೆ ಹುಡುಗ’ ಚಲನಚಿತ್ರದ ಪ್ರಚಾರಕ್ಕೆ ಬಂದಿದ್ದ ಪವರ್‌ ಸ್ಟಾರ್

ಚಂದ್ರಕಾಂತ ಮಸಾನಿ
Published 29 ಅಕ್ಟೋಬರ್ 2021, 14:29 IST
Last Updated 29 ಅಕ್ಟೋಬರ್ 2021, 14:29 IST
ಅತಿವೃಷ್ಟಿ ಸಂತ್ರಸ್ತ ರೈತ ಕುಟುಂಬಕ್ಕೆ ಪುನೀತ್ ರಾಜಕುಮಾರ್ ಸಾಂತ್ವನ ಹೇಳಿದ್ದರು
ಅತಿವೃಷ್ಟಿ ಸಂತ್ರಸ್ತ ರೈತ ಕುಟುಂಬಕ್ಕೆ ಪುನೀತ್ ರಾಜಕುಮಾರ್ ಸಾಂತ್ವನ ಹೇಳಿದ್ದರು   

ಬೀದರ್‌: ನಟ ಪುನೀತ್ ರಾಜಕುಮಾರ್ 2016ರ ಅಕ್ಟೋಬರ್ 13ರಂದು ಬೀದರ್‌ಗೆ ಬಂದು ಅತಿವೃಷ್ಟಿಯಿಂದ ಹಾನಿಗೊಳಗಾದ ರೈತ ಕುಟುಂಬಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಕೆಲವರಿಗೆ ವೈಯಕ್ತಿಕವಾಗಿಯೂ ನೆರವು ನೀಡಿದ್ದರು.

‘ದೊಡ್ಮನೆ ಹುಡುಗ’ ಚಲನಚಿತ್ರದ ಪ್ರಚಾರಕ್ಕೆ ಹಾಗೂ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮನವಿ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬೀದರ್‌ಗೆ ಆಗಮಿಸಿದ್ದರು.

ಸಪ್ನಾ ಮಲ್ಟಿಪ್ಲೆಕ್ಸ್‌ನಲ್ಲಿ ‘ದೊಡ್ಮನೆ ಹುಡುಗ’ ಚಲನಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದ ಕಾರಣ 10 ನಿಮಿಷ ಚಿತ್ರ ವೀಕ್ಷಣೆ ಮಾಡಿ ಹೊರಗೆ ಹೋಗಿದ್ದರು. ಆದರೂ ಅಭಿಮಾನಿಗಳು ಅವರನ್ನು ಸುತ್ತುವರಿದಿದ್ದರು. ಕಾರಿನಲ್ಲಿ ನಿಂತು ಪ್ರೇಕ್ಷಕರತ್ತ ಕೈಬಿಸಿ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ರೋಗಿಗಳಿಗೆ ಹಣ್ಣು ಹ‍ಂಪಲು ವಿತರಣೆ ಮಾಡಿದ್ದರು.

ADVERTISEMENT

ಆಸ್ಪತ್ರೆಯಿಂದ ಹೊರಗೆ ಬರುವಷ್ಟರಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರು ಜನಜಂಗುಳಿಯನ್ನು ನಿಯಂತ್ರಿಸಲು ಪ್ರಯಾಸಪಟ್ಟಿದ್ದರು. ಜನ ದಟ್ಟಣೆ ನಿಯಂತ್ರಿಸಲು ಪೊಲೀಸರು ಜನರತ್ತ ಲಾಠಿ ಸಹ ಬೀಸಿದ್ದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಭಾಲ್ಕಿ ತಾಲ್ಲೂಕಿನ ಅಂಬೆಸಾಂಘ್ವಿ ಗ್ರಾಮಕ್ಕೆ ಭೇಟಿ ನೀಡಿ ಸಂಕಷ್ಟಕ್ಕೆ ಒಳಗಾದ ರೈತರಿಗೆ ಆರ್ಥಿಕ ನೆರವು ನೀಡಿದ್ದರು. ಬೀದರ್‌ ತಾಲ್ಲೂಕಿನ ಗ್ರಾಮಗಳಿಗೂ ಭೇಟಿ ಕೊಟ್ಟಿದ್ದರು.

‘ನಾವು ತಂದೆ–ತಾಯಿ ಹಾಗೂ ಗುರು ಹಿರಿಯರಿಗೆ ಗೌರವ ಕೊಡಬೇಕು. ನಾವು ಮಾಡುವ ಕೆಲಸದಲ್ಲಿ ನಂಬಿಕೆ ಇಡಬೇಕು. ಸಂಕಷ್ಟ ಎದುರಾದಾಗ ಧೈರ್ಯ ಕಳೆದುಕೊಳ್ಳಬಾರದು. ಆಶಾ ಭಾವನೆಯೊಂದಿಗೆ ಬದುಕು ಸಾಗಿಸಬೇಕು’ ಎಂದು ರೈತ ಕುಟುಂಬಕ್ಕೆ ಧೈರ್ಯ ತುಂಬಿದ್ದರು.

‘ಕೃಷ್ಣ, ಕಾವೇರಿ ನದಿ ನೀರು ಬಳಕೆಯಂತೆ ಗೋದಾವರಿ ಜಲಾನಯದ ನೀರು ಬಳಸಿಕೊಳ್ಳುವ ದಿಸೆಯಲ್ಲಿ ಸೂಕ್ತ ವೇದಿಕೆಯಲ್ಲಿ ಚರ್ಚಿಸಲಾಗುವುದು. ಚಿತ್ರರಂಗದಲ್ಲೂ ಈ ವಿಷಯವನ್ನು ಪ್ರಸ್ತಾಪ ಮಾಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದರು.

‘ನಾಡು, ನುಡಿಯ ವಿಷಯ ಬಂದಾಗ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಅವರೊಬ್ಬ ಸ್ನೇಹ ಜೀವಿ. ಕನ್ನಡ ನಾಡು ಪುನೀತ್‌ ಅಗಲಿಕೆಯಿಂದ ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡಿದೆ’ ಎಂದು ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

‘ಪುನೀತ್‌ ರಾಜಕುಮಾರ ಅವರೊಂದಿಗೆ 25 ವರ್ಷಗಳ ಒಡನಾಡ ಇತ್ತು. ನೀವು ವಿಧಾನಸಭೆಗೆ ಸ್ಪರ್ಧಿಸುವುದಾದರೆ ಪ್ರಚಾರಕ್ಕೆ ಬರುವೆ ಎಂದು ನನಗೆ ಮಾತುಕೊಟ್ಟಿದ್ದರು. ಆದರೆ, ಈಗ ಎಲ್ಲವೂ ನೆನಪು ಮಾತ್ರ’ ಎಂದು ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.