ಮುಂಬೈ: ಜೂನ್ 27ರಂದು ಬಿಡುಗಡೆಗೊಂಡಿದ್ದ ‘ಕಲ್ಕಿ 2898 ಎಡಿ’ ಚಿತ್ರವು ವಿಶ್ವದಾದ್ಯಂತ ₹1000 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಅಧಿಪತ್ಯ ಮುಂದುವರಿಸಿದೆ ಎಂದು ಚಿತ್ರ ತಯಾರಕರು ಶನಿವಾರ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಿತ್ರ ತಯಾರಕರು ಗಳಿಕೆಯ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. 'ಈ ಚಿತ್ರವು ಮೈಲಿಗಲ್ಲಿನತ್ತ ಸಾಗಿರುವುದು ನಿಮ್ಮ ಪ್ರೀತಿಯಿಂದ, ಈ ಚಿತ್ರವನ್ನು ಪ್ರೀತಿಯಿಂದ ನಾವು ಮಾಡಿದ್ದೇವೆ. ಅಷ್ಟೇ ಪ್ರೀತಿಯಿಂದ ನೀವು (ಅಭಿಮಾನಿಗಳು) ಸ್ವೀಕರಿಸಿದ್ದೀರಿ. ಸಿನಿ ಪ್ರೇಕ್ಷಕರಿಗೆ ತುಂಬು ಹೃದಯದ ಧನ್ಯವಾದಗಳು' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮತ್ತು ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಮಹಾನಟಿ, ಎವಡೆ ಸುಬ್ರಹ್ಮಣ್ಯಂ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಮಹಾಭಾರತ ಮತ್ತು ವೈಜ್ಞಾನಿಕ ಕಾದಂಬರಿಗಳ ಮಿಶ್ರಣದ ₹600 ಕೋಟಿ ವೆಚ್ಚದ ಈ ಚಿತ್ರವನ್ನು ವೈಜಯಂತಿ ಮೂವೀಸ್ ನಿರ್ಮಿಸಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ ಚಿತ್ರದ ಗಳಿಕೆ ₹500 ಗಡಿ ದಾಟಿತ್ತು ಎಂದು ಚಿತ್ರ ತಯಾರಕರು ತಿಳಿಸಿದ್ದರು.
ಕಲ್ಕಿ ಚಿತ್ರವನ್ನು 2ಡಿ ಮತ್ತು 3ಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.