ಬೆಂಗಳೂರು: ಬಹು ನಿರೀಕ್ಷಿತ ‘ಪ್ರಜಾವಾಣಿ ಕನ್ನಡ ಸಿನಿಮಾ ಸಮ್ಮಾನ’ ಪ್ರದಾನ ಸಮಾರಂಭ ಶನಿವಾರ ಸಂಜೆ 6.30ಕ್ಕೆ ನಡೆಯಲಿದೆ. ಕನ್ನಡ ಚಿತ್ರರಂಗದ ಪ್ರಮುಖ ನಟ- ನಟಿಯರು, ಸಾಂಸ್ಕೃತಿಕ ಲೋಕದ ದಿಗ್ಗಜರು, ಮುಖ್ಯಮಂತ್ರಿಯವರೂ ಒಳಗೊಂಡಂತೆ ನಾಡಿನ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತರನ್ನು 24 ವಿಭಾಗಗಳಲ್ಲಿ ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. 15 ವಿಭಾಗಗಳ ಪುರಸ್ಕಾರಗಳಿಗೆ ಪುರಸ್ಕೃತರನ್ನು ಚಿತ್ರರಂಗದ ಹಲವು ವಿಭಾಗಗಳಲ್ಲಿನ ವೃತ್ತಿಪರರು ಮತದಾನ ಮಾಡಿ ಆಯ್ಕೆ ಮಾಡಿರುವುದು ವಿಶೇಷ. ನಾಲ್ಕು ವಿಭಾಗಗಳಲ್ಲಿ ಜನರೇ ತಮ್ಮಿಷ್ಟದ –ನಾಯಕ, ನಾಯಕಿ, ಸಿನಿಮಾ ಹಾಗೂ ಉತ್ತಮ ಸಂಗೀತ– ಆಯ್ಕೆ ಮಾಡಿದ್ದಾರೆ.
ಪ್ರಜಾವಾಣಿ@75ರ ಸಂದರ್ಭದ ಈ ಸಮ್ಮಾನ ಪತ್ರಿಕೆಯ ಮೊದಲ ಸಾಹಸ. ಕನ್ನಡ ಚಿತ್ರರಂಗದ ಹಬ್ಬವೇ ಇದಾಗಿರುವಂತೆ ಚಿತ್ರೋದ್ಯಮ ಸಂಭ್ರಮಿಸುತ್ತಿದೆ. ‘ವಿಶ್ವಮಟ್ಟದಲ್ಲಿ ಛಾಪು ಮೂಡಿಸುತ್ತಿರುವ ಕನ್ನಡ ಚಿತ್ರರಂಗದ ಹೊಳೆವ ನಕ್ಷತ್ರಗಳನ್ನು, ಅಡಗಿರುವ ಪ್ರತಿಭೆಗಳನ್ನು ಗುರುತಿಸುವ ಅರ್ಥಪೂರ್ಣ ಕೆಲಸ ಇದಾಗಿದೆ’ ಎಂದು ಚಿತ್ರರಂಗದ ದಿಗ್ಗಜರು ಬಣ್ಣಿಸಿದ್ದಾರೆ.
ಇಪ್ಪತ್ತು ಪರಿಣತರ ತಂಡ 2022ರಲ್ಲಿ ತೆರೆಕಂಡ ಕನ್ನಡ ಸಿನಿಮಾಗಳನ್ನು ವೀಕ್ಷಿಸಿ, 23 ವಿಭಾಗಗಳಿಗೆ ನಾಮ ನಿರ್ದೇಶನಗಳನ್ನು ಮಾಡಿತ್ತು. ಆ ಪೈಕಿ, ಚಿತ್ರೋದ್ಯಮಕ್ಕೆ ಹೊಸ ದಿಕ್ಕು ಕಲ್ಪಿಸಬಲ್ಲ ನಾಲ್ಕು ವಿಭಾಗಗಳಿಗೆ ಪ್ರಮುಖ ತೀರ್ಪುಗಾರರು ಅರ್ಹರನ್ನು ಆರಿಸಿದ್ದಾರೆ. ಗಿರೀಶ ಕಾಸರವಳ್ಳಿ, ಹಂಸಲೇಖ, ಯೋಗರಾಜ್ ಭಟ್, ಪ್ರಕಾಶ್ ರಾಜ್, ಶ್ರುತಿ ಹರಿಹರನ್, ವಿದ್ಯಾಶಂಕರ್ ಹಾಗೂ ಸುಮನಾ ಕಿತ್ತೂರು ಪ್ರಮುಖ ತೀರ್ಪುಗಾರರು. ಜೀವಮಾನ ಶ್ರೇಷ್ಠ ಸಾಧನೆಗಾಗಿಯೂ ಸಮ್ಮಾನ ನಡೆಯಲಿದೆ.
ಸಿನಿಮಾದ ತಾರೆಗಳೇ ಮಿಂಚುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮಾನಕ್ಕೆ ಯಾರೆಲ್ಲ ಭಾಜನರಾಗಿದ್ದಾರೆ ಎಂಬ ಪ್ರಶ್ನೆಗೆ ದೊರೆಯುವ ಉತ್ತರಗಳು ಸಮಾರಂಭದ ಹೆಗ್ಗುರುತುಗಳಾಗಿವೆ.
ಸಮಾರಂಭದ ಕ್ಷಣ ಕ್ಷಣದ ಸಾಕ್ಷಾತ್ ಮಾಹಿತಿಗಾಗಿ ವೀಕ್ಷಿಸಿ: prajavani.net
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.