ರಂಗಭೂಮಿ, ಕಿರುತೆರೆ, ಹಿರಿತೆರೆ ನಟರಾಗಿ ಗುರುತಿಸಿಕೊಂಡ ಸಂಚಾರಿ ವಿಜಯ್ ‘ತಲೆದಂಡ’ ಚಿತ್ರದ ಕುನ್ನೆಗೌಡನ ಪಾತ್ರಕ್ಕಾಗಿ ‘ಪ್ರಜಾವಾಣಿ ಸಿನಿ ಸಮ್ಮಾನ’ದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿದ್ದ 'ತಲೆದಂಡ' ಸಿನಿಮಾಕ್ಕೆ 'ಅತ್ತ್ಯುತ್ತಮ ಪರಿಸರ ಕಾಳಜಿಯ ಸಿನಿಮಾ' ವಿಭಾಗದಲ್ಲಿ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.
ಬುದ್ಧಿಮಾಂದ್ಯ ಹುಡುಗ ಕುನ್ನೇಗೌಡನಾಗಿ ಸಂಚಾರಿ ವಿಜಯ್ ಅಭಿನಯಿಸಿದ್ದರು. ಕಾಡು, ಗಿಡ, ಮರವೆಂದರೆ ಈತನಿಗೆ ಅಚ್ಚುಮೆಚ್ಚು. ಊರಿನಲ್ಲಿರುವ ಮರಗಳನ್ನು ಕಡಿದು ರಸ್ತೆ ಮಾಡಲು ಬಂದ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಹೋಗುತ್ತಾನೆ. ಆತನನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಮಾನಸಿಕ ಅಸ್ವಸ್ಥನಾಗಿರುವುದರಿಂದ ಶಿಕ್ಷೆ ಕೊಡಲು ಆಗುವುದಿಲ್ಲ. ಚಿಕಿತ್ಸೆಯ ಅಗತ್ಯವಿದೆ ಎಂಬ ತೀರ್ಪು ಕೋರ್ಟ್‌ನಿಂದ ಬರುತ್ತದೆ. ಚಿಕಿತ್ಸೆಯ ನಂತರ ತನ್ನೂರಿಗೆ ಮರಳಿದ ಕುನ್ನೇಗೌಡನ ಬದುಕು ಬದಲಾಗುತ್ತದೆ. ಪ್ರಕೃತಿಯನ್ನು ರಕ್ಷಿಸಲೇಬೇಕು ಎಂದು ಪಣ ತೊಡುವ ಪಾತ್ರದಲ್ಲಿ ನಟಿಸಿದ ಸಂಚಾರಿ ವಿಜಯ್ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ್ದರು.
ವಿಜಯ್ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ನಟಿಸಿಹೋದ ಸಾಕಷ್ಟು ಪಾತ್ರಗಳು ಜೀವಂತವಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯ ಬಿ.ವಿಜಯ್ ಕುಮಾರ್‌ಗೆ ‘ಸಂಚಾರಿ’ ರಂಗತಂಡದಿಂದಾಗಿ ‘ಸಂಚಾರಿ ವಿಜಯ್’ ಎಂಬ ಹೆಸರು ಬಂದಿದ್ದು.
1983ರಲ್ಲಿ ಜನಿಸಿದ ವಿಜಯ್‌ಗೆ ಮನೆಯೇ ಮೊದಲ ಕಲಾ ಪಾಠಶಾಲೆ. ಇವರ ತಂದೆ ಬಸವರಾಜಯ್ಯನವರು ಚಿತ್ರ ಕಲಾವಿದರಾಗಿದ್ದರು. ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದರು. ಹೀಗಾಗಿ ವಿಜಯ್‌ಗೆ ಬಾಲ್ಯದಿಂದಲೇ ಕಲಾಸಕ್ತಿ ಬೆಳೆದಿತ್ತು.
ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ ವಿಜಯ್, ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹದಿಮೂರು ವರ್ಷಗಳಿಂದ ಸಂಚಾರಿ ಥಿಯೇಟರ್ ರಂಗತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸುತ್ತಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ ಎರಡು ನಾಟಕಗಳನ್ನು ಸಹ ನಿರ್ದೇಶಿಸಿದ್ದಾರೆ.
2011ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ ಅವರು ನಟಿಸಿದ ಮೊದಲ ಚಿತ್ರ 'ರಂಗಪ್ಪ ಹೋಗ್ಬಿಟ್ನಾ'. ‘ದಾಸವಾಳ’ ಚಿತ್ರದಲ್ಲಿ ಗುರುತಿಸಿಕೊಂಡರು. 'ನಾನು ಅವನಲ್ಲ ಅವಳು' ಸಿನಿಮಾ ವೃತ್ತಿ ಜೀವನಕ್ಕೆ ತಿರುವು ನೀಡಿದ ಚಿತ್ರ. ಈ ಚಿತ್ರದ ನಟನೆಗಾಗಿ 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದರು. ಇದೇ ಪಾತ್ರಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ, ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಗಳು ಲಭಿಸಿದವು.
ತೆಲುಗು, ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದ ಅವರು, ಕನ್ನಡದ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹರಿವು, ಒಗ್ಗರಣೆ, ಕೃಷ್ಣ ತುಳಸಿ, ನಾತಿಚರಾಮಿ, ಆಕ್ಟ್–1978 ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿರುವ ವಿಜಯ್, ಹಲವಾರು ನಾಟಕಗಳಲ್ಲಿ ಹಾಡಿದ್ದು, ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದರು.
ಸಂಚಾರಿ ವಿಜಯ್ ಅವರು ಬೆಂಗಳೂರಿನಲ್ಲಿ ಸ್ನೇಹಿತನ ಜೊತೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಕೋಮಾ ಸ್ಥಿತಿ ತಲುಪಿದ್ದರು. 2021ರ ಜೂನ್ 15ರಂದು ಸಾವಿಗೀಡಾದರು. ವಿಜಯ್ ನಿಧನದ ನಂತರ ಅವರ ‘ಲಂಕೆ’, ‘ಮೇಲೊಬ್ಬ ಮಾಯಾವಿ’, ‘ಪುಕ್ಸಟ್ಟೆ ಲೈಫು’, ‘ತಲೆದಂಡ’ ಸಿನಿಮಾಗಳು ತೆರೆಕಂಡಿವೆ.
‘ಅಣ್ಣನನ್ನು ಕಳೆದುಕೊಂಡಿದ್ದು ಕುಟುಂಬಕ್ಕೆ, ಸಿನಿಮಾರಂಗಕ್ಕೆ ನಷ್ಟ. ಇನ್ನಷ್ಟು ಕಾಲ ಬದುಕಿರಬೇಕಿತ್ತು. ಬಹಳ ಕಷ್ಟಪಟ್ಟು ಮೇಲೆ ಬಂದಿದ್ದ’ ಎಂದು ಪ್ರಶಸ್ತಿ ಸ್ವೀಕರಿಸಿದ ಅವರ ಸಹೋದರ ಸಿದ್ದೇಶ್ ಹೇಳಿದರು.
’ಸಂಭ್ರಮ, ಸಂಕಟ ಎರಡನ್ನೂ ಬಿಟ್ಟುಹೋಗಿದ್ದಾನೆ. ಪ್ರಶಸ್ತಿ ಬಂದಿದೆ ಎಂಬ ಖುಷಿ ಒಂದೆಡೆಯಾದರೆ, ಸ್ವೀಕರಿಸಲು ಅವನಿಲ್ಲ ಎಂಬ ನೋವು ಇನ್ನೊಂದೆಡೆ. ವಿಜಯ್ ಇರಬೇಕಿತ್ತು. ಯಾಕೆಂದರೆ ಅವನು ಮಾಡಬೇಕಿದ್ದ ಕೆಲಸ ಸಾಕಷ್ಟಿತ್ತು. ಈಗಷ್ಟೇ ಪಯಣ ಪ್ರಾರಂಭವಾಗಿತ್ತು’ ಎಂದು ವೇದಿಕೆ ಮೇಲಿದ್ದ ಸಂಚಾರಿ ತಂಡದ ರೂವಾರಿ ಎನ್. ಮಂಗಳಾ ಹೇಳಿದರು.
ಅತ್ಯುತ್ತಮ ನಟ: ಸಂಚಾರಿ ವಿಜಯ್ (ಚಿತ್ರ: ತಲೆದಂಡ)
ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವರು
* ಸಂಚಾರಿ ವಿಜಯ್ (ಚಿತ್ರ: ತಲೆದಂಡ)
* ರಕ್ಷಿತ್ ಶೆಟ್ಟಿ (ಚಿತ್ರ:777 ಚಾರ್ಲಿ)
* ಶರಣ್ (ಚಿತ್ರ: ಗುರು ಶಿಷ್ಯರು)
* ಅಚ್ಯುತ್ ಕುಮಾರ್ (ಚಿತ್ರ:ಫೋರ್ ವಾಲ್ಸ್)
* ಯಶ್ (ಚಿತ್ರ:ಕೆ.ಜಿ.ಎಫ್. ಚಾಪ್ಟರ್–2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.