ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ‘ಅನುಭವ’ದ ‘ಗುಲಾಬಿ’ಗೆ ಒಲಿದ ಸಮ್ಮಾನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 11:20 IST
Last Updated 8 ಜೂನ್ 2023, 11:20 IST

ರಂಗಭೂಮಿ ಕಲಾವಿದೆ, ಚಿತ್ರನಟಿ, ಮಾಜಿ ಸಚಿವೆ ‘ಉಮಾಶ್ರೀ’ ಅವರಿಗೆ ‘ವೇದ’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಪ್ರಜಾವಾಣಿ ಸಿನಿ ಸಮ್ಮಾನ’ದ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಲಭಿಸಿದೆ. 

ಶಿವರಾಜ್‌ಕುಮಾರ್‌ ನಟನೆಯ ‘ವೇದ’ ಚಿತ್ರದಲ್ಲಿ ಶಂಕರಿಯಾಗಿ ಉಮಾಶ್ರೀ ನಟಿಸಿದ್ದಾರೆ. ಚಿತ್ರದುದ್ದಕ್ಕೂ ನಾಯಕನ ಕುಟುಂಬದ ಮಾರ್ಗದರ್ಶಿ, ಹಿತೈಷಿಯಾಗಿರುವ ಪಾತ್ರವಿದು. ನಾಯಕನ ಜೊತೆ ಒಡನಾಟ ಹೊಂದಿರುವ ಈ ಪಾತ್ರ ‘ಪುಟ್ನಂಜ’ ಸಿನಿಮಾದಲ್ಲಿನ ಪುಟ್ನಂಜಿಯನ್ನು ಮತ್ತೊಮ್ಮೆ ನೆನಪಿಸುತ್ತದೆ. ಹಾಸ್ಯ, ಭಾವುಕತೆ ಹೊಂದಿರುವ ಪಾತ್ರಕ್ಕೆ ಉಮಾಶ್ರೀ ನ್ಯಾಯ ಸಲ್ಲಿಸಿದ್ದಾರೆ. ಅಲ್ಲಲ್ಲಿ ನಗಿಸಿ, ಸಾವಿಗೀಡಾಗುವ ಪಾತ್ರ ಅದು. ಕೊನೆಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವಂತಹ ಅಭಿನಯ ಮಾಡಿದ್ದಾರೆ.

ನಾಲ್ಕು ದಶಕಗಳಿಗೂ ಮಿಗಿಲಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉಮಾಶ್ರೀ ಅವರು ಹುಟ್ಟಿದ್ದು ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿ. ರಂಗಭೂಮಿಯಿಂದ ನಟನೆ ಪ್ರಾರಂಭಿಸಿದ ಅವರು, ಊಟಕ್ಕಾಗಿ ರಂಗಭೂಮಿಗೆ ಬಂದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಕಡುಬಡತನದಲ್ಲಿ ಬೆಳೆದ ಇವರು ಬದುಕು ಕಟ್ಟಿಕೊಂಡಿದ್ದೇ ಒಂದು ಸ್ಫೂರ್ತಿದಾಯಕ ಕಥೆ.

ADVERTISEMENT

1980ರಲ್ಲಿ ಗ್ರಾಮೀಣ ರಂಗಭೂಮಿಯಿಂದ ನಟನೆ ಪ್ರಾರಂಭಿಸಿದರು. ನಂತರ ಕೈಗಾರಿಕಾ ರಂಗಭೂಮಿಯತ್ತ ಪಯಣ ಬೆಳೆಸಿದ ಅವರು ಅನೇಕ ನಾಟಕೋತ್ಸವಗಳಲ್ಲಿ ಪ್ರಶಸ್ತಿ ಪಡೆದರು. ಪೌರಾಣಿಕ ನಾಟಕಗಳಿಂದ ಅವರ ನಟನೆ ಪ್ರಾರಂಭವಾಗಿದ್ದು. ದ್ರೌಪದಿ, ರುಕ್ಮಿಣಿಯಂತಹ ಸಾಕಷ್ಟು ಪಾತ್ರಗಳಲ್ಲಿ ಗುರುತಿಸಿಕೊಂಡ ಅವರು, ರಂಗಸಂಪದ ತಂಡದೊಂದಿಗೆ ಹವ್ಯಾಸಿ ನಾಟಕದತ್ತ ಹೊರಳಿದರು.

ವೃತ್ತಿ ರಂಗಭೂಮಿಯಲ್ಲಿ ಹಲವಾರು ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ನಿರ್ವಹಿಸಿ, ಹವ್ಯಾಸಿ ರಂಗಭೂಮಿಯಲ್ಲಿ ಬಿ.ವಿ. ಕಾರಂತ್, ನಾಗಾಭರಣ, ಕೃಷ್ಣಸ್ವಾಮಿ ಅವರ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ‘ಒಡಲಾಳ’ ನಾಟಕದ ‘ಸಾಕವ್ವ’ನ ಪಾತ್ರ ಬಹಳ ಜನಪ್ರಿಯವಾಗಿತ್ತು. ‘ಯಯಾತಿ’ಯಲ್ಲಿನ ‘ಶರ್ಮಿಷ್ಠೆ’ಯಾಗಿ ಅವರು ತೋರಿದ ನಟನೆಯ ಸತ್ವ ಈಗಲೂ ಹಸಿರಾಗಿದೆ.

ಇದೇ ವೇಳೆ ಅವರ ಸಿನಿ ಪಯಣ ಶುರುವಾಯಿತು. ‘ಅಮೃತ ಘಳಿಗೆ’ ಅವರು ಅಭಿನಯಿಸಿದ ಮೊದಲ ಸಿನಿಮಾ. ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ಉಮಾಶ್ರೀ, ‘ಬಂಗಾರದ ಜಿಂಕೆ’, ’ಪಟ್ಟಣಕ್ಕೆ ಬಂದ ಪತ್ನಿಯರು’ ಮೊದಲಾದ ಸಿನಿಮಾಗಳಲ್ಲಿ ನಟಿಸಿದರು. ತಿರುವು ನೀಡಿದ್ದು 1984ರಲ್ಲಿ ತೆರೆಗೆ ಬಂದ ‘ಅನುಭವ’ ಚಿತ್ರ. ಬೋಲ್ಡ್‌ ಪಾತ್ರದಲ್ಲಿ ಉಮಾಶ್ರೀ ಜನಪ್ರಿಯರಾದರು. ‘ಗೋಲ್ ಮಾಲ್ ರಾಧಾಕೃಷ್ಣ’ ಚಿತ್ರದಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಿದರು.

‘ಪುಟ್ನಂಜ’ ಚಿತ್ರದ ‘ಪುಟ್ನಂಜಿ’ ಪಾತ್ರ ಮರೆಯಲಾಗದ್ದು. ‘ಕೋತಿಗಳು ಸಾರ್ ಕೋತಿಗಳು’ ಚಿತ್ರದಲ್ಲಿನ ಮುನಿಯಮ್ಮ ಪಾತ್ರವೂ ಕಾಡುತ್ತದೆ. ಹೀಗೆ ಉಮಾಶ್ರೀ ನಟಿಸಿದ ಅತ್ಯುತ್ತಮ ಪಾತ್ರಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಅನುಭವ, ಸ್ವಾಭಿಮಾನ...450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಿರುವ ಬಹುತೇಕ ಎಲ್ಲ ನಾಯಕರಿಗೂ ತಾಯಿಯಾಗಿ ಅಭಿನಯಿಸಿದ್ದಾರೆ. ‘ಸಂಗ್ಯಾಬಾಳ್ಯಾ’ ಚಿತ್ರದ ನಟನೆಗಾಗಿ ಪನೋರಮಾ ಪ್ರಶಸ್ತಿ ಲಭಿಸಿತು.

‘ಗುಲಾಬಿ ಟಾಕೀಸ್’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ, ರಾಜ್ಯ ‍ಪ್ರಶಸ್ತಿಗಳು ಸಂದವು. ಇವರಿಗೆ ಆರು ಬಾರಿ ರಾಜ್ಯ ಪ್ರಶಸ್ತಿ ಲಭಿಸಿದೆ. ಮಹಿಳೆಯರಲ್ಲಿ ಅತಿ ಹೆಚ್ಚು ಸಲ ರಾಜ್ಯ ಪ್ರಶಸ್ತಿ ಸಿಕ್ಕಿರುವುದು ಇವರಿಗೆ ಎನ್ನುವುದು ವಿಶೇಷ.

‘ಪ್ರಶಸ್ತಿ ಪಡೆಯುತ್ತಿರುವುದು ಒಂದು ಕಡೆ ಸಂತೋಷವಾಗುತ್ತಿದೆ. ಇನ್ನೊಂದೆಡೆ ಭಯ ಕೂಡ ಇದೆ. ನಾನು ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿರುವೆ. ಆದರೆ ಇವತ್ತು ಅದ್ಯಾಕೊ ಭಯವಾಗುತ್ತಿದೆ. ‘ಪ‍್ರಜಾವಾಣಿ’ ಎಂದರೇನೇ ಆ ಘನತೆ, ಗೌರವ, ಹಿರಿತನವಿದೆ. ಬಹುಶಃ ಅದನ್ನು ನೋಡಿಯೇ ಭಯವಾಗುತ್ತಿರಬೇಕು. ಹವ್ಯಾಸಿ ರಂಗಭೂಮಿಗೆ ಸೇರಿದ ನಂತರ ಪತ್ರಿಕೆ ಓದು ಶುರುವಾಯಿತು. ಇವತ್ತಿಗೂ ನಮ್ಮ ಮನೆಯಲ್ಲಿ ಪ್ರಜಾವಾಣಿ ಪತ್ರಿಕೆ ಓದುತ್ತೇವೆ. ಪತ್ರಿಕೆಯ ಸಂಪಾದಕೀಯ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತದೆ. ಇಂತಹ ಪತ್ರಿಕೆಯ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಧನ್ಯತಾ ಭಾವವಿದೆ’ ಎಂದು ಉಮಾಶ್ರೀ ವೇದಿಕೆಯಲ್ಲಿ ಭಾವುಕದರು.

ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ (ಚಿತ್ರ:ವೇದ)

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವರು
* ಅರ್ಚನಾ ಜೋಯಿಸ್‌ (ಚಿತ್ರ: ಕೆ.ಜಿ.ಎಫ್‌ ಚಾಪ್ಟರ್‌–2)
* ಈಶ್ವರಿ ರಾವ್‌ (ಚಿತ್ರ: ಕೆ.ಜಿ.ಎಫ್‌ ಚಾಪ್ಟರ್‌–2)
* ಎನ್‌.ಮಂಗಳ (ಚಿತ್ರ: ತಲೆದಂಡ)
* ಉಮಾಶ್ರೀ (ಚಿತ್ರ:ವೇದ)
* ಸುಧಾ ಬೆಳವಾಡಿ (ಚಿತ್ರ: ಸಾರಾ ವಜ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.