ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ-2 | ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 23:30 IST
Last Updated 4 ಜುಲೈ 2024, 23:30 IST
<div class="paragraphs"><p>‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರತಂಡದ ಪರವಾಗಿ ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ ಪ್ರಶಸ್ತಿ ಸ್ವೀಕರಿಸಿದರು</p></div>

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರತಂಡದ ಪರವಾಗಿ ನಿರ್ದೇಶಕ ಚಂದ್ರಜಿತ್‌ ಬೆಳ್ಳಿಯಪ್ಪ ಪ್ರಶಸ್ತಿ ಸ್ವೀಕರಿಸಿದರು

   

ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ?

ಸಿನಿಮಾಗಳು ಸಾಮಾಜಿಕ ಮೌಲ್ಯವನ್ನು ಪ್ರತಿಬಿಂಬಿಸಿದಾಗ ಅವು ಸಾರ್ವಕಾಲಿಕವಾಗುತ್ತವೆ. ಇಂತಹ ಹಲವಾರು ಸಿನಿಮಾಗಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಬಂದಿವೆ. 2023ನೇ ಸಾಲಿನಲ್ಲಿ ಬಿಡುಗಡೆಗೊಂಡ ಸಿನಿಮಾಗಳ ಪೈಕಿ ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ?’ ಸಿನಿಮಾ ಈ ಬಾರಿ ‘ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ’ ಪ್ರಶಸ್ತಿಗೆ ಭಾಜನವಾಯಿತು.

‘ಪ್ರಜಾವಾಣಿ’ಗೆ ಇಡೀ ತಂಡದಿಂದ ಧನ್ಯವಾದಗಳು. ನಾನು ಯಾವ ಸಿನಿಮಾದಲ್ಲೂ ಸಂದೇಶಗಳನ್ನು ಇಡುವುದಿಲ್ಲ. ‘ಪಿಂಕಿ ಎಲ್ಲಿ?’ಯಲ್ಲೂ ಇಟ್ಟಿಲ್ಲ. ಸಂದೇಶಗಳು ಪ್ರೇಕ್ಷಕರಿಗೆ ಸಿಕ್ಕಿದ್ದರೆ ಅದು ಬೋನಸ್‌. ನಾನು ನೇರವಾಗಿ ಕಥೆಯನ್ನು ಈ ಸಿನಿಮಾದಲ್ಲಿ ಹೇಳಿದ್ದೇನೆ. ನನ್ನ ಮುಖ್ಯ ಉದ್ದೇಶ ಕಥೆ ಹೇಳುವುದಷ್ಟೇ ಆಗಿತ್ತು’ ಎಂದು ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕ ಪೃಥ್ವಿ ಕೊಣನೂರು ಹೇಳಿದರು.

ADVERTISEMENT

‘ಕಥನ ಕ್ಷೇತ್ರದಲ್ಲಿ ಕನ್ನಡದ ವೈವಿಧ್ಯದ ಧ್ವನಿಗಳು ಕೇಳುತ್ತಿವೆ. ಇವೆಲ್ಲವೂ ಸಾಹಿತ್ಯಕ್ಕೆ ಆಶಾದಾಯಕ ಬೆಳವಣಿಗೆ. ಇದರ ನಡುವೆಯೂ ಸಾಕಷ್ಟು ಕಳೆಗಳಿವೆ. ಕಳೆಗಳು ಕಾಲದ ಅಂತರದಲ್ಲಿ ಕಳೆದುಹೋಗುತ್ತವೆ. ಬೆಳೆಗಳು ಮಾತ್ರ ಉಳಿಯುತ್ತವೆ’ ಎಂದು ಪ್ರಶಸ್ತಿ ಪ್ರದಾನ ಮಾಡಿದ ಕವಿ ಎಸ್‌.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಾಮನಿರ್ದೇಶನಗೊಂಡಿದ್ದ ಚಿತ್ರಗಳು: ಪಾಲಾರ್‌, ವಿರಾಟಪುರ ವಿರಾಗಿ, ಡೇರ್‌ಡೆವಿಲ್‌ ಮುಸ್ತಾಫಾ, ಪಿಂಕಿ ಎಲ್ಲಿ?, ಕ್ಷೇತ್ರಪತಿ

‘ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ‘ಪಿಂಕಿ ಎಲ್ಲಿ?’ ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು ಅವರಿಗೆ ಸಾಹಿತಿ ಎಸ್‌.ಜಿ.ಸಿದ್ಧರಾಮಯ್ಯ ನೀಡಿದರು

ಅತ್ಯುತ್ತಮ ನಿರ್ಮಾಣ ವಿನ್ಯಾಸ: 19.20.21

ಪ್ರೊಡಕ್ಷನ್‌ ಡಿಸೈನ್‌ ಎನ್ನುವುದು ಸಿನಿಮಾದ ಬೆನ್ನೆಲುಬು. ಸಿನಿಮಾ ನಿರ್ಮಾಣದ ಪ್ರತಿ ಹೆಜ್ಜೆಯೂ ಈ ವಿಭಾಗವನ್ನು ಅವಲಂಬಿಸಿರುತ್ತದೆ. 2023ರಲ್ಲಿ ಬಿಡುಗಡೆಗೊಂಡ ಸಿನಿಮಾಗಳ ಪೈಕಿ ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿಗೆ ಮಂಸೋರೆ ನಿರ್ದೇಶನದ ‘19.20.21’ ಭಾಜನವಾಯಿತು.

ತಮ್ಮ ತಂಡದೊಂದಿಗೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಂಸೋರೆ, ‘ನಿರ್ಮಾಣ ವಿನ್ಯಾಸವನ್ನು ಸಿನಿಮಾದ ಪ್ರಮುಖ ಭಾಗ ಎಂದು ಗುರುತಿಸಿ ಅದಕ್ಕೆ ಒಂದು ಪ್ರಶಸ್ತಿ ಮೀಸಲಿಟ್ಟಿರುವುದು ಶ್ಲಾಘನೀಯ. ಸಿನಿಮಾದ ಯಶಸ್ಸು ಈ ವಿಭಾಗದ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ನಮ್ಮ ಸಿನಿಮಾಗೆ ಈ ಪ್ರಶಸ್ತಿ ದೊರಕಿರುವುದು ಸಂತೋಷ. ಇದು ಪ್ರಜಾವಾಣಿಯ ವಿಶೇಷ ಗೌರವ. ಪ್ರಶಸ್ತಿಯನ್ನು ಈ ಸಿನಿಮಾದ ಕಥೆಯ ಮಲೆಕುಡಿಯರಿಗೆ ಅರ್ಪಿಸುತ್ತೇನೆ. ಜೊತೆಗೆ ಈ ಚಿತ್ರದ ನಿರ್ಮಾಣ ವಿನ್ಯಾಸ ಮಾಡಿದ ವೀರೇಂದ್ರ ಮಲ್ಲಣ್ಣ ಮತ್ತು ತಂಡಕ್ಕೆ ಈ ಪ್ರಶಸ್ತಿ ಸಲ್ಲಬೇಕು’ ಎಂದರು.

‘ಸಿನಿಮಾ ಇರುವುದು ಕೇವಲ ಮನರಂಜನೆಗಷ್ಟೇ ಅಲ್ಲ. ಅದು ಬದಲಾವಣೆಗೆ ಹಾದಿಯಾಗಬೇಕು. ಜನರಿಗೆ ವಿಷಯಗಳು ತಲುಪಬೇಕು. ಹೀಗೆ ಕನಸು ಇದ್ದಾಗ ಕಥೆಗಳು ಹುಡುಕಿಕೊಂಡು ಬರುತ್ತವೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ದೇವರಾಜ್‌.

‘ಈ ಸಿನಿಮಾ ಮಾಡಿರುವುದಕ್ಕೆ ತೃಪ್ತಿ ಇದೆ. ಈ ರೀತಿಯ ಕಥೆಗಳನ್ನು ಯಾರೂ ಸಿನಿಮಾ ಮಾಡುವುದಿಲ್ಲ. ಕಮರ್ಷಿಯಲ್‌ ಸಿನಿಮಾಗಳ ಹೊರತಾಗಿ ಸಾಮಾಜಿಕ ಕಳಕಳಿಯ ಕಥೆಗಳಿಗೆ ಬಂಡವಾಳ ಹೂಡುವ ನಿರ್ಮಾಪಕರು ವಿರಳ. ಬೆರಳೆಣಿಕೆಯ ನಿರ್ಮಾಪಕರಷ್ಟೇ ಇಂತಹ ಕಥೆಗಳನ್ನು ಒಪ್ಪಿ ಮುಂದಡಿ ಇಡುತ್ತಾರೆ. ಅವರಲ್ಲಿ ದೇವರಾಜ್‌ ಅವರು ಒಬ್ಬರು’ ಎನ್ನುತ್ತಾರೆ ಚಿತ್ರಕಥೆ ಬರೆದ ವೀರೇಂದ್ರ ಮಲ್ಲಣ್ಣ.

ನಾಮನಿರ್ದೇಶನಗೊಂಡಿದ್ದ ಚಿತ್ರಗಳು: ಕಾಟೇರ, 19.20.21, ಗುರುದೇವ್ ಹೊಯ್ಸಳ,
ಟಗರುಪಲ್ಯ, ಸಪ್ತ ಸಾಗರದಾಚೆ ಎಲ್ಲೋ

ನಿರ್ಮಾಪಕ ಉಮೇಶ್‌ ಬಣಕಾರ್‌ ಅವರು ‘19.20.21’ ಚಿತ್ರತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು

ಅತ್ಯುತ್ತಮ ವಿಎಫ್‌ಎಕ್ಸ್‌, ಪೋಸ್ಟ್‌ ಪ್ರೊಡಕ್ಷನ್‌ ಹಾಗೂ ಆ್ಯನಿಮೇಷನ್‌: ಕಬ್ಜ

ಚಂದನವದಲ್ಲಿ ‘ಕೆ.ಜಿ.ಎಫ್‌’ ಸಿನಿಮಾ ಬಳಿಕ ವಿಎಫ್‌ಎಕ್ಸ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್‌ಗೆ ಸಿನಿಮಾಗಳ ಹೆಚ್ಚಿನ ಆದ್ಯತೆ ನೀಡುತ್ತಿವೆ. ಭರ್ಜರಿಯಾಗಿರುವ ಗ್ರಾಫಿಕ್ಸ್‌ನೊಂದಿಗೆ ಸಿನಿಮಾಗಳು ತೆರೆಗೆ ಲಗ್ಗೆ ಇಡುತ್ತಿದ್ದು, ಇದುವೇ ಸಿನಿಮಾದ ಯಶಸ್ಸಿನ ಪ್ರಮುಖ ಭಾಗವಾಗುತ್ತಿವೆ. 2023ರಲ್ಲಿ ತೆರೆಕಂಡ ಆರ್‌.ಚಂದ್ರು ಅವರ ನಿರ್ದೇಶನದ ‘ಕಬ್ಜ’ ತನ್ನ ವಿಎಫ್‌ಎಕ್ಸ್‌ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ನಿಂದಲೇ ಪ್ರೇಕ್ಷಕರನ್ನು ಸೆಳೆದಿತ್ತು. ಈ ಸಿನಿಮಾವೇ ಇದೀಗ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದಲ್ಲಿ ‘ಅತ್ಯುತ್ತಮ ವಿಎಫ್‌ಎಕ್ಸ್‌, ಪೋಸ್ಟ್‌ ಪ್ರೊಡಕ್ಷನ್‌ ಹಾಗೂ ಆ್ಯನಿಮೇಷನ್‌’ ಪ್ರಶಸ್ತಿ ಪಡೆದುಕೊಂಡಿದೆ.

‘ಕರ್ನಾಟಕದ ವಿಶ್ವಾಸಾರ್ಹ ಪತ್ರಿಕೆಯು ಈ ಪ್ರಶಸ್ತಿ ನೀಡಿದೆ. ಈ ಪ್ರಶಸ್ತಿ ಇಡೀ ನನ್ನ ತಂಡಕ್ಕೆ ಸೇರಬೇಕು. ವಿಶೇಷ ಏನೆಂದರೆ ನನ್ನ ಗುರುಗಳಾದ ನಿರ್ದೇಶಕರಾದ ಎಸ್‌.ನಾರಾಯಣ್‌ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ಪ್ರಜಾವಾಣಿ ಕೊಡುತ್ತಿರುವ ಈ ಪ್ರಶಸ್ತಿ ರಾಜ್ಯ ಪ್ರಶಸ್ತಿ, ಫಿಲಂ ಫೇರ್‌ಗಿಂತ ಕಮ್ಮಿಯೇನಲ್ಲ. ಪ್ರಜಾವಾಣಿ ನೇರ, ದಿಟ್ಟ, ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿರುವ ಪತ್ರಿಕೆ. ಹಾಗಾಗಿ ಇಂತಹ ಜವಾಬ್ದಾರಿಯುತ, 75 ವರ್ಷಗಳ ಇತಿಹಾಸ ಇರುವ ಪತ್ರಿಕೆ ಸನ್ಮಾನ ಮಾಡುತ್ತದೆ ಎಂದರೆ ಯಾವುದೇ ದೊಡ್ಡ ಪ್ರಶಸ್ತಿಗೆ ಕಡಿಮೆಯೇನಿಲ್ಲ. ಈ ಪ್ರಶಸ್ತಿಯು ನನಗೆ ಕೊಟ್ಟ ಗೌರವವಷ್ಟೇ ಅಲ್ಲ, ಒಂದು ಜವಾಬ್ದಾರಿ ಎಂದು ಭಾವಿಸುತ್ತೇನೆ. ಇನ್ನೂ ಒಳ್ಳೊಳ್ಳಯ ಸಿನಿಮಾ ಮಾಡಲು ಇದು ಪ್ರೇರಣೆ’ ಎಂದರು ಆರ್‌.ಚಂದ್ರು.

ನಾಮನಿರ್ದೇಶನಗೊಂಡಿದ್ದ ಚಿತ್ರಗಳು: ಕಾಟೇರ, ಘೋಸ್ಟ್‌, ವಿರಾಟಪುರ ವಿರಾಗಿ, ಟಗರುಪಲ್ಯ, ಕಬ್ಜ

ನಿರ್ಮಾಪಕ ಭಾ.ಮ.ಹರೀಶ್‌ ಅವರು ‘ಕಬ್ಜ’ ಚಿತ್ರದ ನಿರ್ಮಾಪಕ, ನಿರ್ದೇಶಕ ಆರ್‌.ಚಂದ್ರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು

ಅತ್ಯುತ್ತಮ ಧ್ವನಿಗ್ರಹಣ ಹಾಗೂ ಶಬ್ದವಿನ್ಯಾಸ: ಸಪ್ತ ಸಾಗರದಾಚೆ ಎಲ್ಲೋ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಗೊಂಡಾಗಲೇ ಚಿತ್ರದಲ್ಲಿನ ಸಂಗೀತದ ಬಗ್ಗೆ ಚಿತ್ರರಂಗದೊಳಗೆ ಒಳ್ಳೆಯ ಮಾತು ಶುರುವಾಗಿತ್ತು. ಅದಕ್ಕೆ ಪೂರಕವಾಗಿ ಇಡೀ ಸಿನಿಮಾದ ಧ್ವನಿ ವಿನ್ಯಾಸ ಮೂಡಿಬಂದಿತ್ತು. ಇವುಗಳು ಚಿತ್ರದ ಯಶಸ್ಸಿನ ಗುಟ್ಟಾಗಿದ್ದವು. 2023ರಲ್ಲಿ ಬಿಡುಗಡೆಗೊಂಡ ಚಿತ್ರಗಳ ಪೈಕಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ‘ಅತ್ಯುತ್ತಮ ಧ್ವನಿಗ್ರಹಣ ಹಾಗೂ ಶಬ್ದವಿನ್ಯಾಸ’ ಪ್ರಶಸ್ತಿ ಪಡೆಯಿತು.

ನಾಮನಿರ್ದೇಶನಗೊಂಡಿದ್ದ ಚಿತ್ರಗಳು: ಕಾಟೇರ, ವಿರಾಟಪುರ ವಿರಾಗಿ, ಸಪ್ತ ಸಾಗರದಾಚೆ ಎಲ್ಲೋ, ಪಿಂಕಿ ಎಲ್ಲಿ?, 19.20.21

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.