‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಶೀಘ್ರದಲ್ಲೇ ನಡೆಯಲಿದ್ದು, 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ನಟ’ ವಿಭಾಗಕ್ಕೆ ನಾಮ ನಿರ್ದೇಶಿತರಾದವರನ್ನು ಪರಿಚಯಿಸುವ ಸಮಯ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್ ನೋಡಿ.
https://www.prajavani.net/cinesamman/season2
ಶಿವರಾಜ್‌ಕುಮಾರ್
‘ಘೋಸ್ಟ್’ ಚಿತ್ರದಲ್ಲಿನ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. 1986ರಲ್ಲಿ ‘ಆನಂದ್’ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಕಾಲಿಟ್ಟ ಶಿವರಾಜ್‌ಕುಮಾರ್, ಸದ್ಯ ಚಂದನವನದಲ್ಲಿ 38 ವರ್ಷ ಪೂರೈಸಿ ಮುನ್ನಡೆಯುತ್ತಿದ್ದಾರೆ. ‘ಆನಂದ್’ ಯಶಸ್ಸಿನ ಬೆನ್ನಲ್ಲೇ ‘ರಥಸಪ್ತಮಿ’, ‘ಮನಮೆಚ್ಚಿದ ಹುಡುಗಿ’ ಚಿತ್ರಗಳೂ ಹಿಟ್ ಆಗಿ ‘ಹ್ಯಾಟ್ರಿಕ್ ಹೀರೊ’ ಎನಿಸಿಕೊಂಡ ‘ಶಿವಣ್ಣ’, ‘ಸೆಂಚುರಿ ಸ್ಟಾರ್’ ಕೂಡಾ. 125ನೇ ಸಿನಿಮಾ ಪೂರೈಸಿದ ಸಂಭ್ರಮದಲ್ಲಿರುವ ಶಿವರಾಜ್‌ಕುಮಾರ್ ಅವರ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ ನೋಡಿದರೆ ಅವರ ವಯಸ್ಸು ಮರೆಯಾಗುತ್ತದೆ. ಕೌಟುಂಬಿಕ ಕಥಾವಸ್ತುಗಳ ಸಿನಿಮಾಗಳ ಜೊತೆಗೆ ‘ಓಂ’, ‘ಜೋಗಿ’, ‘ಟಗರು’, ‘ಮಫ್ತಿ’ ಹೀಗೆ ಮಾಸ್ ಕಥಾವಸ್ತುಗಳನ್ನೊಳಗೊಂಡ ಸಿನಿಮಾಗಳಲ್ಲೂ ಮಿಂಚಿದ್ದಾರೆ. 2023ರಲ್ಲಿ ರಜನಿಕಾಂತ್’ ನಟನೆಯ ‘ಜೈಲರ್’ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಸದ್ಯ ಗೀತಾ ಪಿಕ್ಚರ್ಸ್ ಲಾಂಛನದಡಿ ನಿರ್ಮಾಣವಾಗುತ್ತಿರುವ ‘ಭೈರತಿ ರಣಗಲ್’, ಅರ್ಜುನ್ ಜನ್ಯ ನಿರ್ದೇಶನದ ‘45’, ರೋಹಿತ್ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.
ದರ್ಶನ್
‘ಕಾಟೇರ’ ಚಿತ್ರದ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳನ್ನು ಪೂರೈಸಿರುವ ನಟ ದರ್ಶನ್ ಉದ್ಯಮದ ಮುಂಚೂಣಿ ನಾಯಕರಲ್ಲೊಬ್ಬರು. ಖಳನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ 1990ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. 2001 ರಲ್ಲಿ ಬಿಡುಗಡೆಯಾದ ‘ಮೆಜೆಸ್ಟಿಕ್’ ಚಿತ್ರದ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡಿದರು. ‘ಕರಿಯ’, ‘ನಮ್ಮ ಪ್ರೀತಿಯ ರಾಮು’, ‘ಕಲಾಸಿಪಾಳ್ಯ’, ‘ಗಜ’, ‘ಸಾರಥಿ’ ಮೊದಲಾದ ಹಿಟ್ ಚಿತ್ರಗಳ ಮೂಲಕ ಮನೆ ಮಾತಾದರು. ‘ಸಂಗೊಳ್ಳಿ ರಾಯಣ್ಣ’ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಗೊಂಡ ‘ಕಾಟೇರ’ ಚಿತ್ರ ಸಾಕಷ್ಟು ಜನಮನ್ನಣೆಗೆ ಪಾತ್ರವಾಯಿತು. ಸದ್ಯ ‘ಡೆವಿಲ್’ ಚಿತ್ರದಲ್ಲಿ ಮಗ್ನರಾಗಿದ್ದಾರೆ.
ರಾಜ್ ಬಿ.ಶೆಟ್ಟಿ
‘ಟೋಬಿ’ ಮತ್ತು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಗಳಲ್ಲಿನ ನಟನೆಗಾಗಿ ರಾಜ್ ಬಿ.ಶೆಟ್ಟಿ ನಾಮನಿರ್ದೇಶನಗೊಂಡಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಸಿನಿಮಾದ ಮುಖಾಂತರ ಕನ್ನಡದ ಪ್ರೇಕ್ಷಕರ ಮುಂದೆ ನಟನಾಗಿ, ನಿರ್ದೇಶಕನಾಗಿ ಬಂದ ರಾಜ್, ನಂತರದಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಒಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆದ ಬಳಿಕ ರಾಜ್ ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು. ನಾಯಿಗಳನ್ನು ಇಷ್ಟಪಡುವ ರಾಜ್, ಇವುಗಳನ್ನೇ ರೂಪಕವನ್ನಾಗಿ ತಮ್ಮ ಸಿನಿಮಾಗಳಲ್ಲಿ ಬಳಸಿಕೊಂಡಿರುವುದು ವಿಶೇಷ. ರಾಜ್ ಯಾವುದೇ ಪಾತ್ರದ ಪರಕಾಯ ಪ್ರವೇಶ ಮಾಡುವ ಸಾಮರ್ಥ್ಯವುಳ್ಳ ನಟ. ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ‘ಶಿವ’ನಾಗಿ ತೆರೆಯ ಮೇಲೆ ತನ್ನೊಳಗಿನ ನಟ ಹಾಗೂ ನಿರ್ದೇಶಕನ ಸಾಮರ್ಥ್ಯವನ್ನು ತೋರಿಸಿದ್ದಾರೆ. ‘ಟೋಬಿ’ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣಕ್ಕಾಗಿ ಮೂಗು ಚುಚ್ಚಿಸಿಕೊಂಡರು. ‘ಟೋಬಿ’ಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ, ಪರಿಸ್ಥಿತಿಗೆ ಮಿಕವಾಗುತ್ತಲೇ ಹೋಗುವ ಅಮಾಯಕನೊಬ್ಬ ಮಾರಿಯಾಗಿ ಮಾರ್ಪಡುವ ಪಾತ್ರವನ್ನು ನಿಭಾಯಿಸಿದ ರೀತಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದ ಚಿತ್ರಕಥಾ ಬರವಣಿಗೆಯಲ್ಲಿ ರಾಜ್ ಕಸುಬುದಾರಿಕೆ ಕಂಡುಬಂದಿತ್ತು. ಕನ್ನಡಕ್ಕಿಂತಲೂ ಮಲಯಾಳದಲ್ಲಿ ಈ ಸಿನಿಮಾ ಸದ್ದು ಮಾಡಿತು.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ರಾಜ್ ‘ಟೋಬಿ’ಯ ತದ್ವಿರುದ್ಧ ಪಾತ್ರದಲ್ಲಿ ಕಾಣಿಸಿಕೊಂಡರು. ಇವರು ನಿಭಾಯಿಸಿದ ‘ಅನಿಕೇತ್’ ನಂದಿ ಬಟ್ಟಲು ಹೂವನ್ನು ಇಷ್ಟ ಪಡುವ ನಾಯಕ. ಆತ ಬದುಕನ್ನು ನೋಡುವುದೂ ಈ ಹೂವಿನ ಮೂಲಕವೇ. ಈ ಸಣ್ಣ ವಿಷಯವನ್ನಿಟ್ಟಿಕೊಂಡು ಒಂದು ಪ್ರಬುದ್ಧ ಪಯಣವನ್ನು ಇಲ್ಲಿ ರಾಜ್ ಕಟ್ಟಿದ್ದಾರೆ. ಪಾತ್ರಗಳ ಬರವಣಿಗೆ, ಹೆಣಿಗೆಯಲ್ಲಿ ರಾಜ್ ಇಲ್ಲಿ ಗೆದ್ದಿದ್ದರು. ರಾಜ್ ಪ್ರಯತ್ನಕ್ಕೆ ಮೆಚ್ಚುಗೆ ದೊರೆಯಿತು. ಸದ್ಯ ‘ಟರ್ಬೊ’ ಸಿನಿಮಾ ಮೂಲಕ ಮಲಯಾಳ ಸಿನಿಮಾ ಇಂಡಸ್ಟ್ರಿಗೂ ಹೆಜ್ಜೆ ಇಟ್ಟಿರುವ ರಾಜ್, ಅರ್ಜುನ್ ಜನ್ಯ ನಿರ್ದೇಶನದ ಕನ್ನಡ ಚಿತ್ರ ‘45’ನಲ್ಲಿ ನಟಿಸುತ್ತಿದ್ದಾರೆ.
ಶಿಶಿರ್ ಬೈಕಾಡಿ
‘ಡೇರ್ ಡೆವಿಲ್ ಮುಸ್ತಾಫಾ’ ಚಿತ್ರದಲ್ಲಿನ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ಮೈಸೂರಿನವರಾದ ಇವರು ‘ನಟನ’ ರಂಗಶಾಲೆಯ ವಿದ್ಯಾರ್ಥಿ. ಆರನೇ ವರ್ಷದಿಂದಲೇ ನಟನೆ ಪ್ರಾರಂಭಿಸಿ, ಪಿಯುಸಿ ಮುಗಿಯುತ್ತಿದ್ದಂತೆ ರಂಗಭೂಮಿಯನ್ನು ಗಂಭೀರವಾಗಿ ಪರಿಗಣಿಸಿ, ಅದರಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ಇವರು ಈ ಚಿತ್ರದಲ್ಲಿ ‘ಮುಸ್ತಾಫಾ’ನ ಪಾತ್ರ ನಿರ್ವಹಿಸಿದ್ದು, ಈ ಪಾತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದರು. ಮೈಸೂರಿನ ಮಸೀದಿಗೆ ಭೇಟಿ ತಿಂಗಳ ಕಾಲ ಅಲ್ಲಿನ ಪರಿಸರವನ್ನು ಗಮನಿಸಿ, ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಪ್ರೇಕ್ಷಕರ ಗಮನ ಸೆಳೆದರು. ಸದ್ಯ ಜಡೇಶ್ ಹಂಪಿ ನಿರ್ದೇಶನದಲ್ಲಿ, ದುನಿಯಾ ವಿಜಯ್ ನಟಿಸುತ್ತಿರುವ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.