ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2 | ಶಾಂತಿಯ ತೋಟದ ಮುಸ್ತಾಫಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 0:41 IST
Last Updated 5 ಜುಲೈ 2024, 0:41 IST
<div class="paragraphs"><p>‘ವರ್ಷದ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಿರ್ದೇಶಕ ಶಶಾಂಕ್‌ ಸೋಗಾಲ್‌ಗೆ ಪ್ರದಾನ ಮಾಡಿದರು. ನಿರ್ದೇಶಕ, ಕನ್ನಡ ಸಿನಿ ಸಮ್ಮಾನದ ಮುಖ್ಯ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಕಾಸಾಗ್ರಾಂಡ್‌ ಮಾರ್ಕೆಟಿಂಗ್‌ ವಿಭಾಗದ ಸೀನಿಯರ್‌ ವೈಸ್‌ಪ್ರೆಸಿಡೆಂಟ್‌ ವಿಮೇಶ್‌ ಇದ್ದಾರೆ.</p></div>

‘ವರ್ಷದ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಿರ್ದೇಶಕ ಶಶಾಂಕ್‌ ಸೋಗಾಲ್‌ಗೆ ಪ್ರದಾನ ಮಾಡಿದರು. ನಿರ್ದೇಶಕ, ಕನ್ನಡ ಸಿನಿ ಸಮ್ಮಾನದ ಮುಖ್ಯ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಟಿ.ಎಸ್‌.ನಾಗಾಭರಣ, ಕಾಸಾಗ್ರಾಂಡ್‌ ಮಾರ್ಕೆಟಿಂಗ್‌ ವಿಭಾಗದ ಸೀನಿಯರ್‌ ವೈಸ್‌ಪ್ರೆಸಿಡೆಂಟ್‌ ವಿಮೇಶ್‌ ಇದ್ದಾರೆ.

   
  • ವರ್ಷದ ಅತ್ಯುತ್ತಮ ಚಿತ್ರ: ಡೇರ್‌ಡೆವಿಲ್‌ ಮುಸ್ತಾಫಾ

  • ನಿರ್ದೇಶನ: ಶಶಾಂಕ್‌ ಸೋಗಾಲ್‌ 

    ADVERTISEMENT
  • ನಿರ್ಮಾಣ: ಸಿನಿಮಾಮರ 

ತನ್ನ ಕಥಾವಸ್ತುವಿನಿಂದಲೇ ಪ್ರೇಕ್ಷಕರನ್ನು ಸೆಳೆದಿದ್ದ ಸಿನಿಮಾ ‘ಡೇರ್‌ಡೆವಿಲ್‌ ಮುಸ್ತಾಫಾ’. ಸಮಾಜದಲ್ಲಿರುವ ವಾಸ್ತವ ಚಿತ್ರಣವನ್ನು ಮುಂದಿಟ್ಟುಕೊಂಡು ಅದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ನಿರ್ದೇಶಕ ಶಶಾಂಕ್‌ ಸೋಗಾಲ್‌ ಈ ಕಥೆ ಹೆಣೆದಿದ್ದರು.  

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಥೆಯನ್ನೇ ಸಿನಿಮಾ ರೂಪಕ್ಕಿಳಿಸಿದ ಚಿತ್ರತಂಡ ಸಹಬಾಳ್ವೆಯ ಸಂದೇಶವನ್ನು ಸಮಾಜಕ್ಕೆ ನೀಡಿತ್ತು. ಕಿರುಚಿತ್ರ ನಿರ್ದೇಶಿಸಿ ಅನುಭವ ಹೊಂದಿದ್ದ ಶಶಾಂಕ್‌ ಸೋಗಾಲ್‌ ಅವರ ಚೊಚ್ಚಲ ಪ್ರಯತ್ನ ಈ ಸಿನಿಮಾ. ಪೂರ್ತಿ ಹಿಂದೂಗಳೇ ಇರುವ ಮೂಡಿಗೆರೆಯ ಕಾಲೇಜಿಗೆ ಪ್ರವೇಶ ಪಡೆಯುವ ಏಕೈಕ ಮುಸ್ಲಿಂ ವಿದ್ಯಾರ್ಥಿ ‘ಮುಸ್ತಾಫಾ’ನ ಬದುಕಿನ ಸುತ್ತ ಚಿತ್ರ ಸಾಗುತ್ತದೆ. ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಚಿತ್ರವಿದು. ಕೋಮುದ್ವೇಷ ಹೇಗೆ ಒಂದು ಊರನ್ನು ಹೊತ್ತಿ ಉರಿಸುತ್ತದೆ, ನಾವು ಹೇಗೆ ಸಹಬಾಳ್ವೆ ನಡೆಸಬೇಕು ಎಂಬುದನ್ನು ನಿರ್ದೇಶಕರು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರಕ್ಕೆ ನಟ ಧನಂಜಯ ಬೆಂಬಲವಾಗಿ ನಿಂತಿದ್ದರು. 

ಹೊಸ ಜವಾಬ್ದಾರಿ: ‘ಪ್ರಶಸ್ತಿ ದೊರೆತಿದ್ದು ಬಹಳ ಖುಷಿ ತಂದಿದೆ. ಈ ಸಿನಿಮಾ ಗೆಲುವಿನ ಹಿಂದೆ ಕನ್ನಡ ಜನತೆ ಇದೆ. ಸಿನಿಮಾ ಬಿಡುಗಡೆ ಮೊದಲು ಒಂದು ಅಸ್ಪಷ್ಟತೆ ಇತ್ತು. ಜನ ಹೇಗೆ ಈ ಸಿನಿಮಾವನ್ನು ಸ್ವೀಕರಿಸುತ್ತಾರೆ ಎಂದು. ಆದರೆ ನಂತರ ಏನಾಗಿದೆ ಎಂದು ನೀವೇ ನೋಡಿದ್ದೀರಿ. ಇದೀಗ ಪ್ರಶಸ್ತಿ ಬಂದ ಬಳಿಕ ದೊಡ್ಡ ಜವಾಬ್ದಾರಿ ಹೆಗಲೇರಿದೆ. ಮೊದಲ ಸಿನಿಮಾ ಮಾಡಿದಾಗ ಸಿನಿಮಾ ಮಾಡಿದರೆ ಸಾಕು ಎನಿಸುತ್ತದೆ. ಆದರೆ ಈಗ ಹೊಸ ಸವಾಲು ನಮ್ಮ ಮುಂದಿದೆ. ಪ್ರತಿ ಪಯಣಕ್ಕೂ ಹೊಸ ಜವಾಬ್ದಾರಿ ಇರಬೇಕು ಎನ್ನುವುದು ನನ್ನ ಅನಿಸಿಕೆ’ ಎಂದು ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕ ಶಶಾಂಕ್‌ ಸೋಗಾಲ್‌ ಹೇಳಿದರು. 

‘ಯಾವುದಾದರೂ ಒಂದು ಪತ್ರಿಕೆ ನಂಬಿಕೆಗೆ ಅರ್ಹವಾಗಿದೆ ಎಂದರೆ ಅದು ‘ಪ್ರಜಾವಾಣಿ’. ಚಿತ್ರಮಂದಿರದ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಬಾಡಿಗೆ ಕಟ್ಟಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಅವರಿಗೆಲ್ಲ ಶಕ್ತಿ ಸಿಗಬೇಕಿದೆ. ಪ್ರಶಸ್ತಿ ಪಡೆದವರಿಗೆ ಜವಾಬ್ದಾರಿ ಹೆಚ್ಚುತ್ತದೆ. ಸಿನಿಮಾ ನಿರ್ಮಾಣದ ಹಿಂದೆ ಬಹಳ ಶ್ರಮವಿದೆ. ಚಿತ್ರರಂಗ ಉಳಿಯಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.