ಕೆಂಪು ರತ್ನಗಂಬಳಿ. ಪಾದವೂರಿದರೆ ಮೃದುಕೋಮಲ ಅನುಭವ. ಅಭಿಮಾನಿಗಳ ಕಂಗಳಲ್ಲಿ ಆರಾಧನೆ, ನಾಮಿನಿಗಳ ಕಂಗಳಲ್ಲಿ ಕಾತರ, ಪ್ರಶಸ್ತಿ ನೀಡಲು ಬಂದ ಅತಿಥಿಗಳ ಕಂಗಳಲ್ಲಿ ಕುತೂಹಲ. ಯಾರಿಗೆ ಕೊಡಬಹುದು ತಾವು.. ವೇದಿಕೆಯ ಮೇಲೆ ಯಾರೊಟ್ಟಿಗೆ ನಿಲ್ಲುವೆವು ಎಂಬ ಕುತೂಹಲ.
ನೆರೆದ ಆಹ್ವಾನಿತ ಶ್ರೋತೃಗಳಿಗೆ ತಮ್ಮಿಷ್ಟದ ಚಂದನವನದ ಚಂದದ ವದನಗಳನ್ನೆಲ್ಲ ಕಾಣುವ ತವಕ. ಜಗಮಗಿಸುವ ಲೈಟುಗಳು. ಅವುಗಳಿಗೆ ಸೆಡ್ಡು ಹೊಡೆಯುವಂತಹ ಹೊಳಪು ಬಂದವರ ಕಂಗಳಲ್ಲಿ, ನಗೆ ಮಿಂಚಿನಲ್ಲಿ.
ಪ್ರಜಾವಾಣಿ ಸಿನಿ ಸಮ್ಮಾನ ಸಮಾರಂಭದ ಝಲಕುಗಳಿವು. ಎರಡನೆಯ ವರ್ಷದ ಈ ಪ್ರತಿಷ್ಠಿತ ಸಮಾರಂಭದಲ್ಲಿ ಹಲವಾರು ತಾರೆಗಳು ಬುವಿಗಿಳಿದರು. ಹೊರಗೆಲ್ಲ ಮೋಡ ಕವಿದ ಮಂಪರು, ಒಳಗೆಲ್ಲ ತಾರೆಗಳ ಹೊಳಪು. ಕಾಲಿಟ್ಟ ತಕ್ಷಣ ನಿರೀಕ್ಷೆಯ ಕಂಗಳಿಗೆ ನಿರಾಸೆಯಾಗದಂತೆ ಸೆಲ್ಫಿ ಕಾರ್ನರ್. ತಮ್ಮಿಷ್ಟದ ಗಾಯಕ–ಗಾಯಕಿ, ನಟ–ನಟಿಯರು ಆತ್ಮೀಯರೊಂದಿಗೆ ಒಂದು ನಗೆ ಚೆಲ್ಲಿ, ಆ ಕ್ಷಣವನ್ನು ಸೆರೆ ಹಿಡಿದರು.
ಇನ್ನೆರಡು ಹೆಜ್ಜೆ ಹಾಕಿದರೆ, ಸೆಲೆಬ್ರಿಟಿಗಳ ಮನದ ಮಾತುಗಳನ್ನು ಸೆರೆ ಹಿಡಿಯುತ್ತಿದ್ದ ಪ್ರಜಾವಾಣಿ ಬಳಗದ ಪತ್ರಕರ್ತರು. ಅವರ ಮಾತುಗಳನ್ನು ಕೇಳುತ್ತ, ಅವರ ಕಣ್ಣಾಲಿಗಳನ್ನು ಕಣ್ತುಂಬಿಕೊಳ್ಳುತ್ತ, ಆಂಗಿಕ ಚಲನೆಯನ್ನು ಅಭಿಮಾನಿಗಳು ಗಮನಿಸುತ್ತಿದ್ದರು. ಆದರೆ ಯಾರಿಗೂ ಮುಜುಗರವಾಗದಂತೆ ಸಮಾರಂಭದತ್ತ ಹೆಜ್ಜೆಹಾಕುತ್ತಿದ್ದರು. ಸಭ್ಯ ವೀಕ್ಷಕರು.
ಹೊರಗಿನ ಫಳಫಳ ಬೆಳಕಿನ ನಡುವೆಯೇ ಸಿನಿ ಸಮ್ಮಾನದ ಪ್ರಶಸ್ತಿ ಕರ್ನಾಟಕದ ನಕ್ಷೆಯೊಂದಿಗೆ ಬಾಗಿ ಬಳಕಿರುವ ಬಳ್ಳಿ ಇರುವ ಪ್ರಶಸ್ತಿಯ ಪ್ರತಿಕೃತಿಯ ಬಳಿ ನಿಂತು ತಮ್ಮದೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸ್ನೇಹಿತರಿಗೆ ಕೇಳಿ ಫೋಟೊ ತೆಗೆಯಿಸಿಕೊಂಡರು. ಹಾಗೆ ತೆಗೆಯಿಸಿಕೊಳ್ಳುವಾಗಲೇ ವಾರೆನೋಟದಲ್ಲಿ ಬಂದವರು ಯಾರು, ಹೋದವರು ಯಾರು ಎಂದೆಲ್ಲ ಕಣ್ಣಿಟ್ಟಿದ್ದರು.
ನೀಳ ಕಾಲ್ಗಳ, ಸಪೂರ ಕಾಯದ ಮತ್ಸ್ಯೆ ಕನ್ಯೆಯರು ಆಗಷ್ಟೇ ಹಾಡಿಗೆ ಹೆಜ್ಜೆ ಹಾಕಿ, ಅಂಗಳಕ್ಕೆ ಬಂದಿದ್ದರು. ಸಮುದ್ರ ದಂಡೆಯಲ್ಲಿದ್ದ ಮತ್ಸ್ಯಕನ್ಯೆಯರಿಗೆ ಅಲೆಗಳ ಹನಿ ಸಿಡಿದಂತೆ ಬೆವರ ಹನಿಗಳು ಕೆನ್ನೆಗುಂಟ ಇಳಿಯುತ್ತಿದ್ದವು. ಅಲ್ಲಲ್ಲಿ ನಿಂತು ಹರಟುತ್ತಿದ್ದ ಈ ಸುಂದರಿಯರನ್ನು ಕಂಡವರೆಲ್ಲ ಮೆಚ್ಚುಗೆಯ ನಗೆ ಸೂಸಿ ಹುರಿದುಂಬಿಸಿದರು.
ಅನುಶ್ರೀಯವರ ಬಿಡುವಿಲ್ಲದ ಮಾತು, ಧ್ವನಿಯ ಏರಿಳಿತ ನೋಡುಗರನ್ನು ಕುರ್ಚಿಯಿಂದ ಬಿಟ್ಟೇಳದಂತೆ ಹಿಡಿದಿಟ್ಟಿದ್ದವು. ಲವಲವಿಕೆಯ ರಮೇಶ್ ಅರವಿಂದ್, ನಮ್ಮನೆಯ ಹುಡುಗಿಯಂತಿದ್ದ ಶ್ರುತಿ ಬಂದಾಗಲಂತೂ ಜನರು ತಮ್ಮ ಇರುವನ್ನೇ ಮರೆತು, ಮೈಯೆಲ್ಲ ಕಿವಿಯಾಗಿಸಿದ್ದರು.
ಗಂಧರ್ವಲೋಕದ ಪಾರಿಜಾತದಂತೆ ಕಂಗೊಳಿಸುತ್ತಿದ್ದ ಬಿ.ಸರೋಜಾದೇವಿ ವೇದಿಕೆಗೆ ಬಂದಾಗ, ಎಲ್ಲರೂ ಗೌರವದಿಂದ ಎದ್ದುನಿಂತು ವಂದನೆ ಸಲ್ಲಿಸಿದರು. ಅನುಭವ, ಅನುಭಾವ ಮತ್ತು ಅರಿವಿನ ಸಂಗಮವೆಂಬಂತೆ ಅವರ ವ್ಯಕ್ತಿತ್ವ, ಅವರ ಮಾತುಗಳಲ್ಲಿಯೇ ಬೆಳಕು ಕಂಡಿತು. ಬೆನ್ನಿನುದ್ದಕ್ಕೂ ಹರವಿದ್ದ ಕೇಶರಾಶಿ, ಎಲ್ಲರ ಕಣ್ಮನ ಸೆಳೆಯುವ ಕಂಗಳು, ನಸುನಗೆ, ಗಂಭೀರ ವದನ, ಮಿದುಮಾತು ಮನದಾಳದಿಂದ ಗೌರವ ಬರುವಂತಿತ್ತು.
ಅವರ ಸಿನಿಪಯಣದ ರೀಲ್ಸ್ ಮುಗಿಯುತ್ತ ಬಂದಾಗ ಎಲ್ಲರಲ್ಲಿಯೂ ಅಭಿಮಾನದ ನೋಟ. ಯಾರೂ ಹೇಳದೆಯೇ ಎದ್ದು ನಿಂತು ಗೌರವ ಸೂಚಿಸಿದ್ದು, ಬಿ.ಸರೋಜಾದೇವಿ ಮತ್ತು ಕನ್ನಡಿಗರ ಪ್ರೀತಿಯ ಶಿವಣ್ಣನಿಗೆ.
ಇದೇ ಗೌರವ, ಪ್ರೀತಿಯಾಗಿ ಬದಲಾಗಿದ್ದು, ಕೇಕೆಯಾಗಿ, ಸಿಳ್ಳೆಯಾಗಿ, ಕರತಾಡನವಾಗಿ ಬದಲಾಗಿದ್ದು.. ಶಿವರಾಜಕುಮಾರ್ ವೇದಿಕೆಗೆ ‘ವಾರೆನೋಟ ಬೀರೈತೆ’ ಹಾಡಿಗೆ ಹೆಜ್ಜೆ ಹಾಕಿದಾಗ. ವಿದ್ಯುಲ್ಲತೆಯಂತೆ ಹೆಜ್ಜೆ ಹಾಕಿದ ಶಿವಣ್ಣ ತಮ್ಮ ಮನದಾಳದ ಮಾತುಗಳನ್ನು ಹೇಳಿದಾಗ ’ಪ್ರಜಾವಾಣಿ ಸಿನಿ ಸಮ್ಮಾನದ ‘ಕನ್ನಡ ಸಿನಿ ಧ್ರುವತಾರೆ‘ ಪ್ರಶಸ್ತಿಗೂ ಸಾರ್ಥಕ್ಯ ದೊರೆಯಿತು.
ನಭದ ತಾರೆಗಳೆಲ್ಲ ಭೂಲೋಕಕ್ಕೆ ಹೋಗುವ ವರ ಕೇಳಿ ಬಂದಂತೆ, ವೈಟ್‌ಪೆಟಲ್ಸ್‌ನಲ್ಲಿ ಕಂಗೊಳಿಸುತ್ತಿದ್ದರೆ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದರು. ಮುಂದಿನವರ್ಷದ ಸಿನಿ ಸಮ್ಮಾನದ ನಿರೀಕ್ಷೆಯಲ್ಲಿಯೇ ತಾರಾಗಣವೂ, ಅಭಿಮಾನಿಗಳೂ ಬೀಳ್ಕೊಟ್ಟರು.
ಗಂಭೀರ ನಡೆಯೊಂದಿಗೆ ವೇದಿಕೆಯ ಮೇಲೆ ಬಂದರು. ಸಭಿಕರಿಂದ ಸಣ್ಣ ಮಕ್ಕಳು ಪ್ರೀತಿಯಿಂದ ಕೂಗು ಹಾಕಿದರು ’ಡಾಲಿ.. ಡಾಲಿ‘ ಆ ಕಡೆ ಸಣ್ಣದೊಂದು ನೋಟ ಬೀರಿದರು. ಕೈಬೀಸಬೇಕೆಂಬ ಆಸೆಯನ್ನು ಅದುಮಿಟ್ಟು ಸಭಾ ಮರ್ಯಾದೆಯತ್ತ ಹೆಚ್ಚು ಗಮನಕೊಟ್ಟರು. ಸಂಭ್ರಮ ಮತ್ತು ಸಂಘರ್ಷಗಳ ನಡುವೆ ಬಂದಂತೆ ಬಂದವರೇ ಗಂಭೀರವಾಗಿ ಪ್ರಜಾವಾಣಿ ಸಿನಿ ಸಮ್ಮಾನ ಗೌರವವನ್ನು ಸ್ವೀಕರಿಸಿದರು.
ಕರುನಾಡ ಕರ್ನಾಟಕ ಸುಂದರಿಯು ಹೊಂಬಣ್ಣದ ಹೂಬಳ್ಳಿಯನ್ನು ಹೊತ್ತಿರುವ ಪ್ರಶಸ್ತಿಯನ್ನು ಹಿಡಿಯುವುದೇ ಖುಷಿ ಎಂಬಂತೆ ಸ್ವೀಕರಿಸಿದರು. ಅನುಶ್ರೀ ಅವರು ‘ಮೌನವಾಗಿಯೇ ಉಳಿದು ಬಿಟ್ಟೆ’ ಸಾಲುಗಳ ಬಗ್ಗೆ ನೆನಪಿಸಿದರು. ಕನ್ನಡದ ಕಾರು ಆಟೊಗಳ ಮೇಲೆಯೂ ರಾರಾಜಿಸಿರುವ ಈ ಸಾಲುಗಳನ್ನು ಒಮ್ಮೆ ಹೇಳುವಿರಾ ಎಂದು ಕೇಳಿದಾಗ.. ಒಂದರೆ ಗಳಿಗೆ ಆ ಸಾಲುಗಳನ್ನು ನೆನಪಿಸಿಕೊಂಡರು. 'ಓ ಬದುಕೇ ನೀನು ಮೌನವಾಗಿಯೇ ಉಳಿದುಬಿಟ್ಟೆ....!! ಎಂತೆಂಥ ಪ್ರಶ್ನೆಗಳನ್ನಿಟ್ಟೆ? ಎಂತೆಂಥ ಪೋಷಾಕು ತೊಟ್ಟೆ? ಉದ್ದಗಲಕ್ಕೂ ಮಿತಿಗಳನ್ನೇ ಇಟ್ಟು ಮಿತಿಮೀರಲು ಒಮ್ಮೊಮ್ಮೆ ಅನುಭವಿಸು ಎಂದು ಮೌನವಾಗಿಯೇ ಉಳಿದಬಿಟ್ಟೆ... ಹೇಳುತ್ತಲೇ ಒಂದೆರಡು ಸೆಕೆಂಡುಗಳ ಬ್ರೇಕು ಪಡೆದು ಸಾಲುಗಳು ನೆನಪಾಗ್ತಿಲ್ವಲ್ಲ ಅಂದವರೇ ಮುಂದಿನ ಸಾಲಿಗೆ ನಡೆದರು.. ’ಏನೇನೆಲ್ಲಾ ಗಳಿಸಿಕೊಟ್ಟೆ. ಏನೇನೆಲ್ಲಾ ಕಳೆದುಬಿಟ್ಟೆ. ಏನೇನೆಲ್ಲಾ ಕಲಿಸಿ. ಏನೇನೆಲ್ಲಾ ಮರೆಸಿ ಸುಖ ದುಖ ನಿನ್ನದು ಎಂದು ನೀನು ಮೌನವಾಗಿಬಿಟ್ಟೆ. ಓ ಬದುಕೇ ನೀನು ಮೌನವಾಗಿಯೇ ಉಳಿದುಬಿಟ್ಟೆ..!‘ ಬದುಕು ಮೌನವಾದ ಕುರಿತು ಮೈಯೆಲ್ಲ ಕಿವಿಯಾಗಿಸಿಕೊಂಡಿದ್ದ ಸಭಿಕರ ಉಸಿರಾಟ ಬಿಟ್ಟರೆ ಏನೂ ಕೇಳುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡವರೆಲ್ಲ ಕರತಾಡನ ಮಾಡಿ ಮೆಚ್ಚುಗೆ ಸ್ವೀಕರಿಸಿದರು. ಸಂಭ್ರಮದಿಂದಲೇ ಧನಂಜಯ ಪ್ರೀತಿಯಿಂದ ‘ವರ್ಷದ ಅತ್ಯುತ್ತಮ ಸಾಧನೆ’ ಗೌರವವನ್ನು ಎದೆಗಾನಿಕೊಂಡು ವೇದಿಕೆಯಿಂದ ಇಳಿದರು. ಇಳಿದಾಗಲೂ ಅದೇ ಪ್ರೀತಿಯ ಕರೆ ’ಡಾಲಿ... ಡಾಲಿ..‘ ಅನುರಣಿಸುತ್ತಿತ್ತು.
ತಮ್ಮ ಸಿನಿ ಪಯಣದ ಬಗ್ಗೆ ನಟ ರಮೇಶ್ ಅರವಿಂದ್ ಹಾಗೂ ನಟಿ ಶ್ರುತಿ ಮನದಾಳ ಹಂಚಿಕೊಂಡರು. ‘ನಾನು ಶಾಲಾ ಕಾಲೇಜು ದಿನಗಳಲ್ಲಿ ಸಿನಿಮಾ ನೋಡುತ್ತಿದ್ದೆ. ಆ ವೇಳೆ ಸಿನಿಮಾಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಎಂಜಿನಿಯರಿಂಗ್ ಕಾಲೇಜಿಗೆ ಬಹಳ ಸೀರಿಯಸ್ ಆಗಿ ಹೋಗುತ್ತಿದ್ದೆ. ಚಿತ್ರರಂಗಕ್ಕೆ ಬಂದ ಬಳಿಕ ಸಿನಿಮಾವೇ ನಮಗೆ ಎಲ್ಲವೂ ಆಗಿತ್ತು. ನಟನೆ ಎನ್ನುವುದು ದಿನನಿತ್ಯದ ತಿದ್ದುಪಡಿಯಾಗಿದೆ. ಈಗ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಪರಿಕಲ್ಪನೆ ಬಂದಿದೆ. ಆದರೆ 65 ವರ್ಷಗಳ ಹಿಂದೆಯೇ ಐದಾರು ಭಾಷೆಗಳಲ್ಲಿ ಕನ್ನಡ ಸಿನಿಮಾ ಡಬ್ಬಿಂಗ್ ಆಗಿದ್ದವು. ಆಯಾ ಕಾಲಕ್ಕೆ ಅನುಗುಣವಾಗಿ ತಂತ್ರಜ್ಞಾನ ಅಳವಡಿಕೆ ನಡೆದಿದೆ’ ಎಂದು ರಮೇಶ್ ಅರವಿಂದ್ ನೆನಪಿನ ಹೆಜ್ಜೆ ಹಾಕಿದರು.
ಶ್ರುತಿ ಮಾತನಾಡಿ ‘ಸಿನಿಮಾ ರಂಗಕ್ಕೆ ಬರಲು ನನಗೆ ಅಪ್ಪನೇ ಸ್ಫೂರ್ತಿ. ತಂದೆ ರಂಗಭೂಮಿ ಕಲಾವಿದರು. ನಾನು ಟಿಕೆಟ್ ಹರಿದು ಜನರನ್ನು ಒಳಗೆ ಬಿಡುತ್ತಿದ್ದೆ. ಸಹೋದರ ಶರಣ್‌ನನ್ನು ಸಿನಿಮಾ ಕ್ಷೇತ್ರಕ್ಕೆ ತರುವ ಇಚ್ಛೆ ಅಪ್ಪನಿಗಿತ್ತು. ವಿವಿಧ ಪಾತ್ರಗಳ ಮೂಲಕ ನಾನು ನಗುತ್ತಾ ಇದ್ದೇನೆ. ಆಗ ಹತ್ತಿಪ್ಪತ್ತು ಸಿನಿಮಾ ಮಾಡಿ ಹೆಸರು ಮಾಡುತ್ತಿದ್ದೆವು. ಈಗ ಸಿನಿಮಾಕ್ಕೆ ಮೊದಲೇ ಕಲಾವಿದರು ಹೆಸರು ಮಾಡುತ್ತಿದ್ದಾರೆ. ನಮಗೆ ಕಲಿಯಲು ಅವಕಾಶ ಇರುತ್ತಿತ್ತು. ಈಗ ಹಾಗಿಲ್ಲ. ಎಲ್ಲವೂ ಕಲಿತಿರಬೇಕು ಎಂದು ತಿಳಿಸಿ ‘ರಾಮಾ ಶಾಮಾ ಭಾಮಾ’ ಚಿತ್ರದ ಡೈಲಾಗ್ ಹೇಳಿ ರಂಜಿಸಿದರು.
ನೋಡಿದಾಕ್ಷಣ ಕಿತ್ತೂರು ಚೆನ್ನಮ್ಮನ ಕೆಚ್ಚಿನ ಮಾತು ಬೆಳಕಿನ ಕಿಡಿಯಂಥ ಮೂಗುತಿ ಇಂದಿಗೂ ಅದೇ ಪ್ರಖರ ಧ್ವನಿ ನಿಖರ ಮಾತು. ಬೆನ್ನಿನಗುಂಡ ಇಳಿದ ಕೇಶರಾಶಿ. ವಜ್ರದ ಓಲೆಗೂ ಕಂಗಳಿಗೂ ಜುಗಲ್‌ಬಂದಿ ಇರುವಂಥ ಮಿಂಚು. ಬಿ. ಸರೋಜಾದೇವಿ ವೇದಿಕೆಗೆ ನಡೆದು ಬಂದಾಗ ಸಭಿಕರೆಲ್ಲರೂ ನಿಂತು ಕರತಾಡನ ಮಾಡಿ ಮೆಚ್ಚುಗೆ ಸೂಚಿಸಿದರು. ಗೌರವ ಸೂಚಿಸಿದರು.
ಮಾಗಿದ ಜೀವ ಪ್ರತಿಯೊಂದಕ್ಕೂ ಸಂಕ್ಷಿಪ್ತವಾಗಿ ಸಣ್ಣದೊಂದು ನಗೆಯರಳಿಸಿ ತುಟಿ ನಾವಿನಂತೆ ಇಷ್ಟೇ ಹಿಗ್ಗಿಸಿಕೊಂಡು ಮಾತಾಡಿದರು. ಕನ್ನಡಿಗರನ್ನು ಹೊಗಳಿದರು. ದೊಡ್ಡಣ್ಣನೊಂದಿಗೆ ವೇದಿಕೆಯಿಂದಲೇ ಮಾತಾಡಿದರು. ರಾಜಣ್ಣನನ್ನು ನೆನೆದು ಭಾವುಕರಾದರು. ಈ ವಯಸ್ಸಿನಲ್ಲಿಯೂ ಚಂದ ಕಾಣ್ತೀರಿ. ನಿಮ್ಮ ಸೌಂದರ್ಯದ ಗುಟ್ಟು ಎಂದಾಗ.. ’ಸುಂದರವಾದ ಮನಸು ಎಲ್ಲರನ್ನೂ ಪ್ರೀತಿಸುವ ಮನಸು ಇರುವುದರಿಂದ ಸೌಂದರ್ಯ ಹೆಚ್ಚುತ್ತದೆ’ ಎಂಬ ಉತ್ತರ ನೀಡಿದರು.
ಕೂರಲೆಂದೇ ಕುರ್ಚಿ ತರಿಸಿದಾಗಲೂ ನಾನು ನಿಂತೇ ಮಾತಾಡುತ್ತೇನೆ ಎಂದು ನೇರ ನಿಲುವಿನಲ್ಲಿ ನಿಂತು ಮಾತಾಡಿದ ಬಿ. ಸರೋಜಾದೇವಿ ನಿಧಾನವಾಗಿ ವೇದಿಕೆಯಿಂದ ನಿರ್ಗಮಿಸಿದಾಗ ಸಭಿಕರಲ್ಲಿ ಸಂತೋಷದ ಕಣ್ಣಪಸೆ ತುಂಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.