ನಟಿ ಹಾಗೂ ನಿರೂಪಕಿ ಅನುಶ್ರೀಯ ಬಂಧನಕ್ಕೆ ‘ಷುಗರ್ ಡ್ಯಾಡಿ’ಯೊಬ್ಬರು ತಡೆಗೋಡೆಯಾಗಿದ್ದಾರೆ ಎಂದು ನಿನ್ನೆ ಟ್ವಿಟರ್‌ನಲ್ಲಿ ಗಂಭೀರ ಆರೋಪ ಮಾಡಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ, ‘ಪೊಲೀಸರು ಬಂಧನಕ್ಕೆ ಮುಂದಾದರೆ ಆಕೆ ಹೊಸ ಡ್ರಾಮಾ ಶುರು ಮಾಡುತ್ತಾರೆ’ ಎಂದು ಇಂದು ಟ್ವೀಟ್ ಮಾಡಿದ್ದಾರೆ.
‘ಕೊರೊನಾ ಇದೆ. ಹತ್ತಿರ ಬರಬೇಡಿ. ಇದು ಇವತ್ತು ಪ್ರದರ್ಶನ ಆಗಲಿರೋ ಹೊಸ ಡ್ರಾಮಾ. ಪೊಲೀಸ್ ಅರೆಸ್ಟ್ ಮಾಡ್ತಾರೆ ಅಂತ ಗೊತ್ತಾದ ತಕ್ಷಣಕ್ಕೆ ಶುರು ಆಗುತ್ತೆ ಕಥೆ. ಇದು ಇಂದು ಶುರುವಾಗುವ ನಾಟಕದ ರಾಣಿಯ ಹೊಸ ಅವತಾರ’ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
‘ರಾಜಕಾರಣಿಗಳು ಯಾವುದಾದರೂ ಪ್ರಕರಣದಲ್ಲಿ ಸಿಲುಕಿದಾಗ ಬಂಧನಕ್ಕೆ ಒಳಗಾಗುವುದು ಸಹಜ. ಬಂಧನಕ್ಕೆ ಪೊಲೀಸರು ಬಂದಾಗ ಎದೆನೋವು ಕಾಣಿಸಿಕೊಂಡಿದೆ ಎಂದು ನಾಟಕವಾಡುತ್ತಾರೆ. ಇದು ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಪ್ರಯೋಗಿಸುವ ಹಳೆಯ ಶೈಲಿ. ಪೊಲೀಸರು ಅನುಶ್ರೀಯನ್ನು ಅರೆಸ್ಟ್ ಮಾಡಲು ಬಂದಾಗ ನನಗೆ ಕೋವಿಡ್–19 ಸೋಂಕು ಇದೆ ಎಂದು ಪ್ರಮಾಣ ಪತ್ರ ನೀಡುತ್ತಾಳೆ ಈ ಡ್ರಾಮಾ ಕ್ವೀನ್’ ಎಂದಿದ್ದಾರೆ.
‘ನನ್ನನ್ನು ಬೆಳೆಸಿದ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ’ ಎಂದು ನಿನ್ನೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೊದಲ್ಲಿ ಅನುಶ್ರೀ ತಿಳಿಸಿದ್ದರು.
ಇದನ್ನೂ ಓದಿ... ಫೇಸ್‌ಬುಕ್‌ನಲ್ಲಿ ಅನುಶ್ರೀ ಕಣ್ಣೀರು
‘ನೋಟಿಸ್ ಬಂದಿದ್ದು ನೋವಾಗಿಲ್ಲ. ಸಿಸಿಬಿ ವಿಚಾರಣೆಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಆಗಲ್ಲ. ಈ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿಯಿಂದ ನೋವಾಗಿದೆ. ಅಂತೆಕಂತೆಗಳಿಂದ ನನ್ನ ಕುಟುಂಬಕ್ಕೆ ಸಾಕಷ್ಟು ನೋವಾಗಿದೆ’ ಎಂದು ಕಣ್ಣೀರಿಟ್ಟಿದ್ದರು.
ಈ ನಡುವೆಯೇ ಆಕೆ ರಾಜ್ಯದ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿದ್ದರು ಎನ್ನುವ ಮಾಹಿತಿಯೂ ಹೊರಬಿದ್ದಿತ್ತು. ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆಕೆಯ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿಯಿಂದ ನೋಟಿಸ್ ಜಾರಿಯಾದ ಬಳಿಕ ಮೂವರು ರಾಜಕಾರಣಿಗಳಿಗೆ ಆಕೆ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಆಕೆ ವಿಡಿಯೊ ಸಂದೇಶ ನೀಡಿದ ಬೆನ್ನಲ್ಲೇ‘ಅನುಶ್ರೀಗೆ ರಕ್ಷಣೆಯಾಗಿ ಷುಗರ್ ಡ್ಯಾಡಿಯೊಬ್ಬರು ನಿಂತಿದ್ದಾರೆ. ಆದರೆ, ಆಕೆಯ ಬಂಧನವಾಗುವುದು ನಿಶ್ಚಿತ. ಆ ಮೂಲಕ ಮತ್ತಷ್ಟು ರಹಸ್ಯಗಳು ಹೊರಬೀಳಲಿವೆ’ ಎಂದು ಸಂಬರಗಿ ಆರೋಪ ಮಾಡಿದ್ದರು.
ಇದನ್ನೂ ಓದಿ... ಅನುಶ್ರೀಯ ಬಂಧನಕ್ಕೆ ತಡೆ ಗೋಡೆಯಾಗಿರುವ ಆ ಷುಗರ್ ಡ್ಯಾಡಿ ಯಾರು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.