ಸ್ವಪ್ರತಿಷ್ಠೆಯು ಮನುಷ್ಯನ ಬದುಕನ್ನು ಅಧೋಗತಿಯತ್ತ ಕೊಂಡೊಯ್ಯುತ್ತದೆ. ಇದರ ಸುತ್ತವೇ ಚಿತ್ರಕಥೆ ಹೆಣೆದಿದ್ದ ಸಚ್ಚಿ ನಿರ್ದೇಶನದ ‘ಅಯ್ಯಪ್ಪನುಂ ಕೋಶಿಯುಂ’ ಮತ್ತು ಜೀನ್ ಪೌಲ್ ಲಾಲ್ ನಿರ್ದೇಶನದ ‘ಡ್ರೈವಿಂಗ್ ಲೈಸೆನ್ಸ್’ ಸಿನಿಮಾಗಳು ಭಾರತೀಯ ಸಿನಿಪ್ರಿಯರ ಮನ ಗೆದ್ದಿದ್ದವು. ಮಲಯಾಳದ ಈ ಚಿತ್ರಗಳಲ್ಲಿ ಪ್ರಧಾನ ಪಾತ್ರ ನಿಭಾಯಿಸಿದ್ದು, ನಟ ಪೃಥ್ವಿರಾಜ್ ಸುಕುಮಾರನ್.
ಇದರ ಯಶಸ್ಸಿನ ನಡುವೆಯೇ ಈಗ ಅವರು ಮತ್ತೊಂದು ಹೊಸ ಸಾಹಸಕ್ಕೆ ಅಣಿಯಾಗುತ್ತಿದ್ದಾರೆ. ಬಿಗ್ ಬಜೆಟ್‌ನ ಭಾರತದ ಮೊದಲ ವರ್ಚುಯಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ನಿರ್ಮಾಣಗೊಂಡಿದ್ದ ‘ಅವತಾರ್’, ‘ದಿ ಲಯನ್ ಕಿಂಗ್’, ‘ಮ್ಯಾಂಡಲೋರಿಯನ್’ ಸರಣಿ ನಿರ್ಮಾಣವಾಗಿದ್ದೂ ಇದೇ ಕಾನ್ಸಪ್ಟ್‌ನಡಿಯೇ. ವರ್ಚುಯಲ್ ಫಿಲ್ಮ್ ತಂತ್ರಜ್ಞಾನದಡಿ ಪೃಥ್ವಿರಾಜ್ ನಟನೆಯ ಸಿನಿಮಾ ನಿರ್ಮಾಣವಾಗಲಿದೆ. ಇನ್ನೂ ಇದರ ಟೈಟಲ್ ಅಂತಿಮಗೊಂಡಿಲ್ಲ. ಇದೊಂದು ಎಪಿಕ್ ಕಥಾನಕವಾಗಿದೆ.
ಮಲಯಾಳ, ಹಿಂದಿ, ತಮಿಳು ಮತ್ತು ಕನ್ನಡದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಇದಕ್ಕೆ ಗೋಕುಲ್‌ರಾಜ್ ಭಾಸ್ಕರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಕಥೆಯ ವಿನ್ಯಾಸ ಕೂಡ ಅವರದ್ದೇ. ಪೃಥ್ವಿರಾಜ್ ಪ್ರೊಡಕ್ಷನ್ಸ್ ಮತ್ತು ಮ್ಯಾಜಿಕ್ ಪ್ರೇಮ್ಸ್‌ನಡಿ ಇದಕ್ಕೆ ಬಂಡವಾಳ ಹೂಡಲಾಗುತ್ತಿದೆ. ಶೀಘ್ರವೇ, ಪಾತ್ರವರ್ಗದ ಬಗ್ಗೆ ಘೋಷಿಸಲು ಚಿತ್ರತಂಡ ನಿರ್ಧರಿಸಿದೆ.
‘ಸಿನಿಮಾದ ಕಲೆ ಮತ್ತು ವಿಜ್ಞಾನದ ಹೊಸ ಅಧ್ಯಾಯದೊಳಕ್ಕೆ ನಾನು ಮೊದಲ ಬಾರಿಗೆ ಪ್ರವೇಶಿಸುತ್ತಿದ್ದೇನೆ. ಇದೊಂದು ರೋಚಕ ಅನುಭವ. ಹೊಸ ಸವಾಲುಗಳು ನನ್ನ ಮುಂದಿವೆ. ಹೊಸ ಅನ್ವೇಷಣೆಯಲ್ಲಿಯೂ ಸಾಗುತ್ತಿರುವೆ. ಅದೆಲ್ಲವನ್ನೂ ಈ ಎಪಿಕ್ ಕಥೆ ಹೇಳಲಿದೆ’ ಎಂದು ಪೃಥ್ವಿರಾಜ್ ಸುಕುಮಾರನ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.