ADVERTISEMENT

ಅದೃಷ್ಟವಂತೆ ಪ್ರಿಯಾ

ವಿಜಯ್ ಜೋಷಿ
Published 7 ಡಿಸೆಂಬರ್ 2018, 5:19 IST
Last Updated 7 ಡಿಸೆಂಬರ್ 2018, 5:19 IST
‘ಆರೆಂಜ್‌’ ಸಿನಿಮಾದಲ್ಲಿ ಗಣೇಶ್‌ ಮತ್ತು ಪ್ರಿಯಾ ಆನಂದ್‌
‘ಆರೆಂಜ್‌’ ಸಿನಿಮಾದಲ್ಲಿ ಗಣೇಶ್‌ ಮತ್ತು ಪ್ರಿಯಾ ಆನಂದ್‌   

ಅಭಿನಯಿಸಿದ ಮೊದಲ ಕನ್ನಡ ಸಿನಿಮಾ ನೂರು ದಿನ ಓಡುತ್ತದೆ ಎಂದು ಬಹುಭಾಷಾ ನಟಿ ಪ್ರಿಯಾ ಆನಂದ್‌ ಆಲೋಚಿಸಿದ್ದಿರಲಿಕ್ಕಿಲ್ಲ. ಆದರೆ, ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಂಡ ‘ರಾಜಕುಮಾರ’ ಸಿನಿಮಾ ಶತದಿನಗಳನ್ನು ಕಂಡಿತು. ಪ್ರಿಯಾ ಅವರಿಗೂ ಹೆಸರು ಸಂಪಾದಿಸಿಕೊಟ್ಟಿತು.

ಈಗ ಪ್ರಿಯಾ ಅವರು ಗಣೇಶ್ ಜೊತೆ ‘ಆರೆಂಜ್’ ಸಿನಿಮಾದಲ್ಲಿ ಅಭಿನಯಿಸಿದ್ದು, ಇದೇ ಶುಕ್ರವಾರ (ಡಿ. 7) ತೆರೆಗೆ ಬರುತ್ತಿದೆ. ‘ಕನ್ನಡ ಸ್ವಲ್ಪ ಸ್ವಲ್ಪ ಗೊತ್ತು’ ಎಂದು ಹೇಳುವ ಪ್ರಿಯಾ, ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಮಾತಿಗೆ ಸಿಕ್ಕಿದ್ದರು.

‘ಅಮ್ಮನ ಭಾಷೆ ತಮಿಳು. ಅಪ್ಪ ತಮಿಳು ಮತ್ತು ಮರಾಠಿ ಮಾತನಾಡುತ್ತಾರೆ. ನಾನು ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡುವೆ’ ಎನ್ನುತ್ತಲೇ ಮಾತು ಆರಂಭಿಸಿದರು.

ADVERTISEMENT

‘ಇದು (ಆರೆಂಜ್) ಕನ್ನಡದಲ್ಲಿ ನನಗೆ ಎರಡನೆಯ ಸಿನಿಮಾ. ನಾನು ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದೆ. ರಾಜಕುಮಾರ ಸಿನಿಮಾದಲ್ಲಿ ಪುನೀತ್ ಜೊತೆ ನಟಿಸಲು ಕನ್ನಡದ ಮಟ್ಟಿಗೆ ಹೊಸದಾದ ಮುಖ ಬೇಕಿತ್ತು. ಹಾಗಾಗಿ, ಆ ಚಿತ್ರದ ನಿರ್ಮಾಪಕರು ನನ್ನನ್ನು ಆಯ್ಕೆ ಮಾಡಿಕೊಂಡರು. ನಾನು ನಟಿಸಿದ ಕನ್ನಡದ ಮೊದಲ ಚಿತ್ರ ಸೂಪರ್‌ ಹಿಟ್ ಆಗಿದ್ದು ನನ್ನ ಅದೃಷ್ಟ’ ಎಂದು ಒಂದೇ ಉಸುರಿನಲ್ಲಿ ಹೇಳಿದರು.

‘ಆರೆಂಜ್‌’ ಸಿನಿಮಾದಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿದ್ದರ ಹಿಂದೆಯೂ ‘ಹೊಸ ಮುಖ’ದ ಹುಡುಕಾಟದ ಕಾರಣ ಇದೆ. ಈ ಚಿತ್ರದ ನಿರ್ದೇಶಕ ಪ್ರಶಾಂತ್ ರಾಜ್ ಅವರು ಗಣೇಶ್ ಜೋಡಿಯಾಗಿ ಹೊಸ ಮುಖವೊಂದನ್ನು ತೋರಿಸುವ ನಿರ್ಧಾರ ಮಾಡಿದ್ದರು. ಆಗ ಅವರಿಗೆ ಕಂಡಿದ್ದು ಪ್ರಿಯಾ ಆನಂದ್.

ನಾನು ಕನ್ನಡದಲ್ಲಿ ಆರಂಭದಿಂದಲೂ ಬೆಸ್ಟ್‌ ನಟ, ತಂತ್ರಜ್ಞರ ಜೊತೆ ಕೆಲಸ ಮಾಡುತ್ತಿದ್ದೇನೆ. ಇದೊಂದು ಅದೃಷ್ಟ’ ಎಂದು ಹೇಳಿದ ಪ್ರಿಯಾ, ಗಣೇಶ್ ಹಾಗೂ ಪುನೀತ್ ಅವರಲ್ಲಿನ ಸಾಮ್ಯತೆಗಳನ್ನು ತಾವು ಕಂಡ ಬಗೆಯಲ್ಲಿ ವಿವರಿಸಿದರು.

‘ಇಬ್ಬರೂ ಬಹಳ ಒಳ್ಳೆಯ ವ್ಯಕ್ತಿಗಳು. ಬಹಳ ಸಹಜ ಎಂಬಂತೆ ಎಲ್ಲರ ಜೊತೆ ಬೆರೆಯುತ್ತಾರೆ. ಎಲ್ಲ ಕನ್ನಡ ನಟರೂ ಹೀಗೆಯೇ ಇರುತ್ತಾರಾ ಎಂಬುದು ಗೊತ್ತಿಲ್ಲ. ಆದರೆ, ಗಣೇಶ್ ಹಾಗೂ ಪುನೀತ್ ಚಿತ್ರೀಕರಣದ ಸೆಟ್‌ಗೆ ಬಂದ ತಕ್ಷಣ ಪ್ರತಿ ವ್ಯಕ್ತಿಯ ಮುಖದಲ್ಲೂ ಕಿರುನಗು ಮೂಡುತ್ತದೆ. ಅವರು ಸೆಟ್‌ಗೆ ಬಂದಾಗ ಎಲ್ಲರಿಗೂ ಖುಷಿ ಆಗುತ್ತದೆ’ ಎಂದರು.

ಇಬ್ಬರು ನಟರಲ್ಲಿ ತಾವು ಕಂಡುಕೊಂಡ ವ್ಯತ್ಯಾಸವನ್ನು ಪ್ರಿಯಾ ಹೇಳುವುದು ಹೀಗೆ: ‘ಗಣೇಶ್ ಅವರು ಸೆಟ್‌ನಲ್ಲಿ ಹೆಚ್ಚು ತೊಡಗಿಕೊಂಡಿರುತ್ತಾರೆ. ಪುನೀತ್ ಅವರು ಪ್ರೊಡಕ್ಷನ್‌ ಪೂರ್ವದ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಗಣೇಶ್ ಮತ್ತು ಪುನೀತ್ ಜನರ ಪಾಲಿಗೆ ಸ್ಟಾರ್‌ಗಳು. ಅಷ್ಟೇ ಅಲ್ಲ, ಅವರು ಸಿನಿಮಾ ತಂತ್ರಜ್ಞರ ಪಾಲಿಗೂ ಸ್ಟಾರ್‌ಗಳು.’

ಪ್ರಿಯಾ ಅವರು ಕನ್ನಡದಲ್ಲಿ ಅಭಿನಯಿಸಿರುವ ಎರಡೂ ಸಿನಿಮಾಗಳು ಕೌಟುಂಬಿಕ ಕಥಾಹಂದರ ಹೊಂದಿರುವ ಸಿನಿಮಾಗಳು. ಅಂಥ ಸಿನಿಮಾಗಳನ್ನೇ ಅವರು ಹುಡುಕುತ್ತಿರುತ್ತಾರಾ ಎಂಬ ಪ್ರಶ್ನೆಗೆ ‘ಹಾಗೇನೂ ಇಲ್ಲ’ ಎಂಬ ಉತ್ತರ ಸಿಗುತ್ತದೆ.

‘ಬದುಕಿನ ಕರಾಳ ಮುಖಗಳನ್ನು ತೋರಿಸುವ ಚಿತ್ರಗಳಲ್ಲಿ ಅಭಿನಯಿಸುವುದೂ ನನಗೆ ಇಷ್ಟ. ಆದರೆ ಅಂತಹ ಸಿನಿಮಾಗಳಲ್ಲಿ ತೋರಿಸುವ ಅಂಶಗಳು ಖಚಿತವಾಗಿರಬೇಕು. ಸಿನಿಮಾ ಶಾಕಿಂಗ್‌ ಆಗಿರಬೇಕು ಎಂಬ ಉದ್ದೇಶದಿಂದ ಅರೆಬೆಂದ ಅಂಶಗಳನ್ನು ತೋರಿಸುವುದು ಸರಿಯಲ್ಲ. ಉದ್ದೇಶ ಶುದ್ಧವಾಗಿರಬೇಕು’ ಎನ್ನುವುದು ಪ್ರಿಯಾ ಅವರ ಖಚಿತ ನಿಲುವು.

ಪ್ರಿಯಾ ಅವರು ಈಗ ಸಿನಿಮಾದಲ್ಲಿನ ಥಳುಕು ಬಳುಕುಗಳ ಬಗ್ಗೆ ಹೆಚ್ಚು ಆಲೋಚಿಸುತ್ತಿಲ್ಲವಂತೆ. ಅವೆಲ್ಲ, ವೃತ್ತಿ ಜೀವನದ ಆರಂಭದಲ್ಲಿ ಮುಖ್ಯವಾಗಿ ಕಾಣಿಸಬಹುದು. ಆದರೆ, ನಂತರದ ಹಂತಗಳಲ್ಲಿ ಗುಣಮಟ್ಟವೇ ಮುಖ್ಯವಾಗುತ್ತದೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.