ನಟಿ ಪ್ರಿಯಾ ಆನಂದ್ ಹುಟ್ಟಿದ್ದು ಚೆನ್ನೈನಲ್ಲಿ. ತಮಿಳಿನ ‘ವಾಮನನ್’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅವರು ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮಲಯಾಳದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸ್ಟಾರ್‌ನಟರ ಜೊತೆಗೆ ತೆರೆ ಹಂಚಿಕೊಂಡಿರುವುದು ಅವರ ಹೆಗ್ಗಳಿಕೆ. ಕನ್ನಡದಲ್ಲಿ ಆಕೆ ನಟಿಸಿದ ಮೊದಲ ಚಿತ್ರ ಪುನೀತ್ ರಾಜ್‌ಕುಮಾರ್ ನಟನೆಯ ‘ರಾಜಕುಮಾರ’.
ಲಾಕ್‌ಡೌನ್ ಪರಿಣಾಮ ಪ್ರಿಯಾ ಸಿನಿಮಾ ಚಟುವಟಿಕೆಯಿಂದ ಬಿಡುವು ಪಡೆದಿದ್ದರು. ಈಗ ಹಿಂದಿಯ ವೆಬ್ ಸರಣಿ ಮೂಲಕ ಮತ್ತೆ ಆ್ಯಕ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಈ ಸರಣಿಗೆ ‘ಸಿಂಪಲ್ ಮರ್ಡರ್‘ ಎಂಬ ಶೀರ್ಷಿಕೆ ಇಡಲಾಗಿದೆ. ಅಂದಹಾಗೆ ಇದು ಆಕೆ ಮೊದಲ ವೆಬ್ ಸರಣಿಯೂ ಹೌದು. ಇದರಲ್ಲಿ ಸಚಿನ್ ಪಾಠಕ್, ಮುಖೇಶ್ ಛಾಬ್ರಾ, ಅಯಾಜ್ ಖಾನ್, ಮೊಹಮ್ಮದ್ ಜೀಶನ್ ಅಯೂಬ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ, ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಇದರ ಶೂಟಿಂಗ್ ನಡೆಯುತ್ತಿದೆಯಂತೆ. ಮರ್ಡರ್ ಮಿಸ್ಟರಿ ಕಥಾನಕ ಇದು. ಇದನ್ನು ನಿರ್ದೇಶಿಸುತ್ತಿರುವುದು ಸಚಿನ್ ಪಾಠಕ್. ಸೋನಿ ಲೈವ್‌ನಲ್ಲಿ ಇದು ಪ್ರಸಾರ ಕಾಣಲಿದೆ.
‘ಉತ್ತಮ ಭವಿಷ್ಯದ ನಿರೀಕ್ಷೆಯಲ್ಲಿ ನಾನು ಡಿಜಿಟಲ್ ಲೋಕಕ್ಕೆ ಕಾಲಿಡುತ್ತಿರುವೆ. ಈ ವೆಬ್ ಸರಣಿಯು ನನ್ನ ವೃತ್ತಿಬದುಕಿನಲ್ಲಿಯೇ ಮಹತ್ವದ ಉಡುಗೊರೆ’ ಎಂದು ಪ್ರಿಯಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಸ್ತುತ ಆಕೆ ತಮಿಳಿನ ‘ಸುಮೊ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪಕ್ಕಾ ಕಾಮಿಡಿ ಚಿತ್ರ ಇದು. ಶಿವರಾಜ್‌ಕುಮಾರ್ ನಟನೆಯ ಕನ್ನಡದ ‘ಆರ್‌ಡಿಎಕ್ಸ್’ ಚಿತ್ರಕ್ಕೂ ಅವರೇ ಹೀರೊಯಿನ್. ಇದಕ್ಕೆ ಬಂಡವಾಳ ಹೂಡುತ್ತಿರುವುದು ತಮಿಳಿನ ಸತ್ಯಜ್ಯೋತಿ ಸಂಸ್ಥೆ. ಈಗಾಗಲೇ, ಈ ಚಿತ್ರದ ಮುಹೂರ್ತವೂ ನೆರವೇರಿದೆ. ಕೊರೊನಾ ಪರಿಣಾಮ ಶೂಟಿಂಗ್ ಶುರುವಾಗಿಲ್ಲ. ತಮಿಳಿನ ನಿರ್ದೇಶಕ ರವಿ ಅರಸು ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.