‘ಒರು ಅಡಾರ್ ಲವ್’ ಚಿತ್ರದಲ್ಲಿನ ಕಣ್ಸನ್ನೆಯಿಂದಲೇ ದಿನ ಬೆಳಗಾಗುವುದರೊಳಗೆ ದೇಶದಾದ್ಯಂತ ಜನಪ್ರಿಯತೆ ಗಳಿಸಿದವರು ಮಲಯಾಳಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್.
ಕೆ. ಮಂಜು ನಿರ್ಮಾಣದ ‘ವಿಷ್ಣು ಪ್ರಿಯ’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿರುವ ಈ ಬೆಡಗಿಗೆ ಸ್ಯಾಂಡಲ್‌ವುಡ್ ಎಂದರೆ ಪಂಚಪ್ರಾಣವಂತೆ. ಮೊದಲ ಪತ್ರಿಕಾಗೋಷ್ಠಿಯಲ್ಲಿಯೇ ಕನ್ನಡ ಕಲಿಯುವುದಾಗಿ ವಾಗ್ದಾನ ಮಾಡಿದ್ದ ಈಕೆ, ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡದಲ್ಲೇ ಸಂದೇಶ ಬರೆದು ಕನ್ನಡಿಗರ ಗಮನ ಸೆಳೆದಿದ್ದಾರೆ.
‘ನನ್ನ ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಪ್ರಿಯ ಮಾಡುವ ನಮಸ್ಕಾರಗಳು. ನನ್ನ ಮೊದಲನೇ ಕನ್ನಡ ಸಿನಿಮಾ ‘ವಿಷ್ಣು ಪ್ರಿಯ’ಕ್ಕೆ ಸಪೋರ್ಟ್ ಮಾಡಿ. ನಿಮ್ಮ ಪ್ರೀತಿ, ಆಶೀರ್ವಾದ ನನ್ನ ಮತ್ತು ಚಿತ್ರತಂಡದ ಮೇಲಿರಲಿ’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಕನ್ನಡ ಕಲಿತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿನ ನಟನೆ ತನಗೆ ಕನ್ನಡದಲ್ಲಿ ಒಳ್ಳೆಯ ಅವಕಾಶಗಳನ್ನು ತಂದುಕೊಡಲಿದೆ ಎನ್ನುವುದು ಅವರ ನಿರೀಕ್ಷೆ.
ನವಿರು ಪ್ರೇಮಕಥೆಯ‘ವಿಷ್ಣು ಪ್ರಿಯ’ ನೈಜ ಘಟನೆ ಆಧರಿಸಿದ ಚಿತ್ರ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಇದರ ನಾಯಕ. ಮಲಯಾಳ, ತಮಿಳಿನ ಹಲವು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ವಿ.ಕೆ. ಪ್ರಕಾಶ್ ಅವರೇ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.
‘ಪ್ರಿಯಾ ಅವರ ಪಾತ್ರದ ಒಂದು ದಿನದ ಚಿತ್ರೀಕರಣವಷ್ಟೇ ಮಾತ್ರ ಬಾಕಿ ಇದೆ. ಆಕೆ ಅತ್ಯುತ್ತಮ ನಟಿ. ಕನ್ನಡಿಗರ ಪ್ರೀತಿ ಅಭಿಮಾನಕ್ಕೆ ಮಾರುಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಆಕೆಗೆ ಉತ್ತಮ ಭವಿಷ್ಯವಿದೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಕೆ. ಮಂಜು. ಅಂದಹಾಗೆ ಪ್ರಿಯಾ ಅವರು ಪ್ರಶಾಂತ್ ಮಂಬುಲ್ಲಿ ನಿರ್ದೇಶನದ ಬಾಲಿವುಡ್‌ನ ‘ಶ್ರೀದೇವಿ ಬಂಗ್ಲೊ’ ಚಿತ್ರದಲ್ಲೂ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.