ವೇಣು ಉದುಗುಲ ನಿರ್ದೇಶನದ ತೆಲುಗಿನ ‘ವಿರಾಟ ಪರ್ವ’ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ರಾನಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿರುವ ಇದು ಪಿರಿಯಾಡಿಕ್ ಸಿನಿಮಾ. ಲಾಕ್‌ಡೌನ್ ಮುಗಿದ ಬಳಿಕ ಸಿನಿಮಾದ ಉಳಿದ ಭಾಗದ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.
ನಟಿ ಪ್ರಿಯಾಮಣಿ ಈ ಚಿತ್ರದಲ್ಲಿ ನಕ್ಸಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ. ಲಾಕ್‌ಡೌನ್‌ನಿಂದಾಗಿ ಆಕೆಯ ಪಾತ್ರ ಚಿತ್ರೀಕರಣ ಅಪೂರ್ಣವಾಗಿದೆಯಂತೆ. ಹಾಗಾಗಿ, ಮರುಚಿತ್ರೀಕರಣಕ್ಕೆ ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾಕ್ಕೆ ಸುಧಾಕರ್ ಮತ್ತು ಸುರೇಶ್ ಬಾಬು ಬಂಡವಾಳ ಹೂಡಿದ್ದಾರೆ. ಬಾಲಿವುಡ್ ನಟಿ ನಂದಿತಾ ದಾಸ್ ಕೂಡ ಇದರಲ್ಲಿ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ತಮಿಳಿನ ‘ಅಸುರನ್’ ಚಿತ್ರದ ತೆಲುಗು ರಿಮೇಕ್ ಆದ ‘ನಾರಪ್ಪ’ ಚಿತ್ರದಲ್ಲೂ ಪ್ರಿಯಾಮಣಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ನಟ ವೆಂಕಟೇಶ್ ಅವರ ಪತ್ನಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯಿದೆ. ಕೊರೊನಾ ಭೀತಿ ಕಡಿಮೆಯಾದ ಬಳಿಕ ಶುರುವಾಗಲಿರುವ ತೆಲುಗಿನ ಎರಡು ರಿಯಾಲಿಟಿ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿಯೂ ಕಾಣಿಸಿಕೊಳ್ಳಲು ಅವರು ತಯಾರಿ ನಡೆಸಿದ್ದಾರಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.