ADVERTISEMENT

‘ಮೈದಾನ್‌’ ಪ್ರವೇಶಿಸಿದ ಪ್ರಿಯಾಮಣಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 19:30 IST
Last Updated 21 ಜನವರಿ 2020, 19:30 IST
ಪ್ರಿಯಾಮಣಿ
ಪ್ರಿಯಾಮಣಿ   

ಅಜಯ್‌ ದೇವಗನ್‌ ನಾಯಕನಾಗಿ ನಟಿಸುತ್ತಿರುವ ಭಾರಿ ಮಹಾತ್ವಾಕಾಂಕ್ಷೆಯ ‘ಮೈದಾನ್‌’ ಸಿನಿಮಾದಲ್ಲಿ ನಾಯಕಿ ಕೀರ್ತಿ ಸುರೇಶ್‌ ಜಾಗಕ್ಕೆಚಿತ್ರತಂಡ ನಟಿ ಪ್ರಿಯಾಮಣಿ ಅವರನ್ನು ತರುತ್ತಿದೆ.

ಈ ಚಿತ್ರದ ಮೂಲಕ ನಟಿ ಕೀರ್ತಿ ಸುರೇಶ್‌ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು. ಈ ಚಿತ್ರಕ್ಕಾಗಿ ಅವರು ಭಾರಿ ತೂಕವನ್ನೂ ಇಳಿಸಿಕೊಂಡು ತಯಾರಿ ನಡೆಸಿದ್ದರು. ಆದರೆ ಈಗ ಈ ಫುಟ್‌ಬಾಲ್ ಕತೆಯಾಧಾರಿತ ಚಿತ್ರದಲ್ಲಿ ನಟಿ ಪ್ರಿಯಾಮಣಿ, ಅಜಯ್‌ ದೇವಗನ್‌ ಜೊತೆ ನಟಿಸಲಿದ್ದಾರೆ ಎನ್ನುವುದು ನಿಕ್ಕಿಯಾಗಿದೆ.

ಈ ಚಿತ್ರವನ್ನು ‘ಬದಾಯಿ ಹೋ’ ಖ್ಯಾತಿಯ ಅಮಿತ್‌ ರವೀಂದ್ರನಾಥ್‌ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಅಜಯ್‌ ದೇವಗನ್‌ ಭಾರತದ ಫುಟ್‌ಬಾಲ್‌ ತಂಡದಲ್ಲಿ 1950ರಿಂದ 1963ರವರೆಗೆ ತರಬೇತುಗಾರರಾಗಿದ್ದ ಸಯ್ಯದ್‌ ಅಬ್ದುಲ್‌ ರಹೀಂ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ADVERTISEMENT

ಈ ಸಿನಿಮಾಕ್ಕೆ ನಟಿ ಕೀರ್ತಿ ಸುರೇಶ್‌ ತುಂಬಾ ಯಂಗ್‌ ಆಗಿ ಕಾಣಿಸುತ್ತಿದ್ದರಿಂದ ಅವರು ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ‘ಕೀರ್ತಿ ಸುರೇಶ್‌ ಒಂದು ದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರೀಕರಣದ ಬಳಿಕ ನಿರ್ದೇಶಕರು ಹಾಗೂ ಸ್ವತಃ ಕೀರ್ತಿ ಸುರೇಶ್‌ ಅವರೂ ಸಹ ಪಾತ್ರದಲ್ಲಿ ತುಂಬಾ ಯಂಗ್‌ ಆಗಿ ಕಾಣುತ್ತಿರುವ ಬಗ್ಗೆ ಚರ್ಚಿಸಿದ್ದರು.ಈ ಚಿತ್ರಕ್ಕಾಗಿ ಅವರು ತುಂಬಾ ಸಣ್ಣಗಾಗಿದ್ದರು. ಹೀಗಾಗಿ 27 ವರ್ಷದ ಕೀರ್ತಿ ಅವರ ಬದಲಿಗೆ 35 ವರ್ಷದ ನಟಿ ಪ್ರಿಯಾಮಣಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಚಿತ್ರತಂಡ ತಿಳಿಸಿದೆ.

ಪ್ರಿಯಾಮಣಿ ಅವರು ಮನೋಜ್‌ ವಾಜಪೇಯಿ ಅವರ ಅಮೆಜಾನ್‌ ಒರಿಜಿನಲ್‌ನ ‘ಫ್ಯಾಮಿಲಿ ಮ್ಯಾನ್‌’ನಲ್ಲಿ ನಟಿಸಿದ್ದರು. ಹಾಗೇ ಜಯಲಲಿತಾ ಅವರ ಜೀವನಕತೆಯಾಧಾರಿಯ ‘ತಲೈವಿ’ ಚಿತ್ರದಲ್ಲಿ ಶಶಿಕಲಾ ಪಾತ್ರ ನಿರ್ವಹಿಸಲಿದ್ದಾರೆ. ಮೈದಾನ್‌ ಸಿನಿಮಾವನ್ನು ಝೀ ಸ್ಟುಡಿಯೋಸ್‌, ಬೋನಿ ಕಪೂರ್‌, ಆಕಾಶ್‌ ಚಾವ್ಲಾ, ಅರುಣಾವ ಜಾಯ್‌ ಸೇನ್‌ಗುಪ್ತಾ ನಿರ್ಮಾಣ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.