ಉದ್ಯಮಿ ಮುಸ್ತಫಾ ರಾಜ್ ಜೊತೆಗೆ ಸಪ್ತಪದಿ ತುಳಿದ ಬಳಿಕವೂ ನಟಿ ಪ್ರಿಯಾಮಣಿಗೆ ಸಿನಿಮಾದಲ್ಲಿ ಬೇಡಿಕೆ ಕಡಿಮೆಯಾಗಿಲ್ಲ. ಕನ್ನಡ, ತೆಲುಗು, ತಮಿಳಿನಲ್ಲಿ ಆಕೆ ನಟಿಸುತ್ತಿರುವ ಸಿನಿಮಾಗಳೇ ಇದಕ್ಕೆ ನಿದರ್ಶನ. ಕನ್ನಡದಲ್ಲಿ ಆಕೆ ನಟಿಸಿದ ಕೊನೆಯ ಚಿತ್ರ ‘ನನ್ನ ಪ್ರಕಾರ’. ಈಗ ಆಕೆ ‘ಕ್ವಟೇಷನ್ ಗ್ಯಾಂಗ್’ ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಇದೊಂದು ಪಕ್ಕಾ ಗ್ಯಾಂಗ್‌ಸ್ಟರ್ ಚಿತ್ರ. ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿವೇಕ್.
ಈ ಚಿತ್ರದ ಮೂಲಕ ಅರುಣ್ ವಿಜಯ್ ಬೆಳ್ಳಿತೆರೆಯಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಈ ಚಿತ್ರ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳದಲ್ಲಿ ನಿರ್ಮಾಣವಾಗಲಿದೆ. ಕಾಲಿವುಡ್ ನಿರ್ದೇಶಕ ಲೋಕೇಶ್ ಕನಕರಾಜ್ ಇದರ ಟೈಟಲ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಆ್ಯಕ್ಷನ್, ರೊಮ್ಯಾಂಟಿಕ್ ಸೇರಿದಂತೆ ಹಲವು ಪಾತ್ರಗಳಿಗೆ ಪ್ರಿಯಾಮಣಿ ಬಣ್ಣ ಹಚ್ಚಿದ್ದಾರೆ. ‘ಕ್ವಟೇಷನ್ ಗ್ಯಾಂಗ್’ ಚಿತ್ರದಲ್ಲಿ ಅವರದ್ದು ಕಂಟ್ರಾಕ್ಟ್ ಕಿಲ್ಲರ್ ಪಾತ್ರ. ಗಾಯತ್ರಿ ಸುರೇಶ್ ಇದಕ್ಕೆ ಬಂಡವಾಳ ಹೂಡಿದ್ದಾರೆ.
ಅಂದಹಾಗೆ ‘ಕ್ವಟೇಷನ್ ಗ್ಯಾಂಗ್’ ಎಂಬುದು ದರೋಡೆಕೋರರು ಮತ್ತು ಕೊಲೆಗಡುಕರ ಗುಂಪು. ಕೇರಳದಲ್ಲಿ ಸಕ್ರಿಯವಾಗಿರುವ ಈ ತಂಡದ ಕಾರ್ಯ ಚಟುವಟಿಕೆಯು ಹೊರರಾಜ್ಯಗಳಿಗೂ ವಿಸ್ತರಿಸಿದೆ. ತನ್ನ ಭೀಭತ್ಸ ಕೃತ್ಯಗಳಿಂದಲೇ ಇದು ಕುಖ್ಯಾತಿ ಪಡೆದಿದೆ. ಸಂಘಟಿತ ಅಪರಾಧ ಚಟುವಟಿಕೆ ನಡೆಸುವುದರಲ್ಲಿ ಈ ಗುಂಪಿನವರು ಸಿದ್ಧಹಸ್ತರು. ಮಹಿಳೆಯರೂ ಈ ಗುಂಪಿನಲ್ಲಿದ್ದಾರಂತೆ. ಈ ಗ್ಯಾಂಗ್‌ನ ರಕ್ತಪಾತದ ಸುತ್ತವೇ ಇದರ ಚಿತ್ರಕಥೆ ಹೆಣೆಯಲಾಗಿದೆ.
ಪ್ರಿಯಾಮಣಿ ಪಾಲಿಗೆ ಈ ಸಿನಿಮಾ ವಿಶೇಷತೆಯಿಂದ ಕೂಡಿದೆ. ಅವರು ಈ ಚಿತ್ರದ ಮೂಲಕ ಮತ್ತೆ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಕೊನೆಯದಾಗಿ ನಟಿಸಿದ ತಮಿಳು ಚಿತ್ರ ‘ಚಾರುಲತಾ’. ಇದು ತೆರೆಕಂಡಿದ್ದು 2012ರಲ್ಲಿ. ‘ಕ್ವಟೇಷನ್ ಗ್ಯಾಂಗ್’ ಮುಂದಿನ ವರ್ಷ ತೆರೆ ಕಾಣುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.