ನವದೆಹಲಿ: ನಟಿ ಪ್ರಿಯಾಂಕಾ ಚೋಪ್ರಾ ಅವರ ಜನೋಪಯೋಗಿ ಕೆಲಸಕ್ಕಾಗಿ ನವೆಂಬರ್ 3ರಂದು 15ನೇ ವಾರ್ಷಿಕ ಯುನಿಸೆಫ್ ಸ್ನೋಫ್ಲೇಕ್ ಬಾಲ್ ಕಾರ್ಯಕ್ರಮದಲ್ಲಿ'ಡ್ಯಾನಿ ಕೇ ಮಾನವೀಯ ಪ್ರಶಸ್ತಿ' ನೀಡಲಾಗಿದೆ.
ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಮಕ್ಕಳ ಹಕ್ಕುಗಳ ಸೌಹಾರ್ದಯುತ ರಾಯಭಾರಿಯಾಗಿರುವ 37 ವರ್ಷದ ನಟಿ ತಮ್ಮ ತಾಯಿ ಮಧು ಚೋಪ್ರಾ ಅವರೊಂದಿಗೆ ತೆರಳಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಕುರಿತ ಫೋಟೊಗಳನ್ನುಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
'ಯುನಿಸೆಫ್‌ಗಾಗಿ ಕೆಲಸ ಮಾಡುವ ಜನರ ದಣಿವರಿಯದ ಪ್ರಯತ್ನಗಳು ಮತ್ತು ಅಚಲವಾದ ಬದ್ಧತೆ ನನ್ನನ್ನು ಚಕಿತಗೊಳಿಸಿದೆ.ಈ ಪ್ರಯಾಣದ ಭಾಗವಾಗಲು ನನಗೆ ಅವಕಾಶ ನೀಡಿದಕ್ಕಾಗಿ ಧನ್ಯವಾದಗಳು. ನಿಮ್ಮ ಸೌಹಾರ್ದಯುತ ರಾಯಭಾರಿಯಾಗಿ ಸೇವೆ ಸಲ್ಲಿಸುವುದು ನನ್ನ ಜೀವನದ ಭಾಗ್ಯ' ಎಂದು ಬರೆದುಕೊಂಡಿದ್ದಾರೆ.
ಫ್ಯಾಷನ್ ಡಿಸೈನರ್ ಡಯೇನ್ ವಾನ್ ಫರ್ಸ್ಟನ್‌ಬರ್ಗ್ ಯುನಿಸೆಫ್ ಸ್ನೋಫ್ಲೇಕ್ ಬಾಲ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಶಸ್ತಿಯನ್ನು ನೀಡಿದ್ದಾರೆ. ಫ್ಯಾಶನ್ ಡಿಸೈನರ್ ಅವರೊಂದಿಗಿರುವ ಫೋಟೊ ಹಂಚಿಕೊಂಡು, 'ಈ ಪ್ರಶಸ್ತಿಯನ್ನು ನನಗೆ ನೀಡಲು ತಮ್ಮ ಸಮಯ ಮತ್ತುಉತ್ಸಾಹಕ್ಕೆನನ್ನ ಧನ್ಯವಾದಗಳು ಡಯೇನ್ ವಾನ್ ಫರ್ಸ್ಟನ್‌ಬರ್ಗ್. ಸುದೀರ್ಘ, ವಿಶಿಷ್ಟವಾದ ಸಾಧನೆಗಳ ಪಟ್ಟಿಯನ್ನು ಹೊಂದಿರುವ ಮಹಿಳೆಯಿಂದ ಪ್ರಶಸ್ತಿ ಬರುತ್ತಿರುವುದಕ್ಕೆ ತುಂಬ ಅರ್ಥವಿದೆ' ಎಂದು ಬರೆದಿದ್ದಾರೆ.
ಕ್ವಾಂಟಿಕೋದ ನಟಿ ಯುನಿಸೆಫ್ ಅಂತರರಾಷ್ಟ್ರೀಯ ಕಲ್ಯಾಣ ಸಂಸ್ಥೆಯೊಂದಿಗೆ ಸುಮಾರು ಒಂದು ದಶಕದಿಂದ ಸಂಬಂಧ ಹೊಂದಿದ್ದು, ಮಕ್ಕಳ ಹಕ್ಕುಗಳು, ಮಹಿಳಾ ಹಕ್ಕುಗಳು ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಯುವತಿ ಮತ್ತು ಯುವಕರ ಸಬಲೀಕರಣದ ಕುರಿತಾದ ಕಾರ್ಯಕ್ರಮದ ಒಂದು ಭಾಗವಾಗಿ ಇಥಿಯೋಪಿಯಾಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.