ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ, ಗಾಯಕ ನಿಕ್ ಜೊನಾಸ್ ಅವರು ಬಾಡಿಗೆ ತಾಯಿಯ (ಸರೊಗಸಿ) ಮೂಲಕ ಮಗು ಪಡೆದಿದ್ದರು.
ಪ್ರಿಯಾಂಕಾ –ನಿಕ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ನಿರ್ಧರಿಸಿದ್ದು ಯಾಕೆ ಎಂಬುದರ ಕುರಿತು ಪರ ವಿರೋಧ ಚರ್ಚೆಗಳು ನಡೆದಿದ್ದವು. ಆದರೆ, ಈ ಕುರಿತು ದಂಪತಿ ಬಹಿರಂಗ ಪ್ರತಿಕ್ರಿಯೆ ನೀಡಿರಲಿಲ್ಲ.
ಇದೀಗ ಬಾಡಿಗೆ ತಾಯ್ತನದ ವಿಚಾರವಾಗಿ ಮೌನ ಮುರಿದಿರುವ ಪ್ರಿಯಾಂಕಾ, ಜನರ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ, ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.
‘ಮಾಲತಿ ಮೇರಿ ಜನಿಸುವಾಗ ನಾನು ಆಪರೇಷನ್ ರೂಂನಲ್ಲಿ ಇದ್ದೆ. ಅವಳು ತುಂಬಾನೇ ಚಿಕ್ಕವಳಾಗಿದ್ದಳು. ನನ್ನ ಕೈಗಿಂತ ಚಿಕ್ಕವಳಿದ್ದಳು. ಮನೆಗೆ ಕರೆತರುವುದಕ್ಕೂ ಮುನ್ನ ಅವಳನ್ನು ನಾವು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದೇವೆ. ನಿತ್ಯ ನಾವು ಆಸ್ಪತ್ರೆಗೆ ತೆರಳುತ್ತಿದ್ದೆವು’ ಎಂದು ಹೇಳಿಕೊಂಡಿದ್ದಾರೆ.
‘ನನಗೆ ನನ್ನದೇ ಆದ ಆರೋಗ್ಯ ಸಮಸ್ಯೆಗಳು ಇವೆ’ ಎಂದಷ್ಟೇ ಹೇಳಿದ್ದು, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಮೂಲಕ ಜನರ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
ಪ್ರಿಯಾಂಕಾ– ನಿಕ್ ದಂಪತಿ ಮಗಳಿಗೆ ‘ಮಾಲತಿ ಮೇರಿ’ ಎಂದು ಹೆಸರಿಟ್ಟಿದ್ದಾರೆ. ಈ ಮಗು ನಿಗದಿತ ಅವಧಿಗಿಂತ ಮೂರು ತಿಂಗಳು ಮೊದಲೇ ಜನಿಸಿತ್ತು ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಈ ವಿಚಾರವನ್ನು ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ.
ಸದ್ಯ ಹಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿರುವ ಪ್ರಿಯಾಂಕಾ, ಅಮೆರಿಕದಲ್ಲಿ ನೆಲೆಸಿದ್ದಾರೆ. ಪ್ರಿಯಾಂಕಾ ಹಾಗೂ ನಿಕ್ 2018ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ಮದುವೆಯಾಗಿದ್ದರು.
‘ನಾವು ಬಾಡಿಗೆ ತಾಯಿಯ ಮೂಲಕ ಮಗು ಪಡೆದಿದ್ದೇವೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಈಗ ನಮ್ಮ ಕುಟುಂಬದ ಮೇಲೆ ಗಮನ ಹರಿಸಿದ್ದೇವೆ’ ಎಂದು ಪ್ರಿಯಾಂಕಾ –ನಿಕ್ ದಂಪತಿ 2022ರ ಜನವರಿಯಲ್ಲಿ ಹೇಳಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.