ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ನಿರಾಶ್ರಿತರಾಗಿರುವವರಿಗೆ ಸಹಾಯ ಮಾಡುವಂತೆ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವ ನಾಯಕರನ್ನು ಒತ್ತಾಯಿಸಿದ್ದಾರೆ. ಯೂನಿಸೆಫ್‌ನ ಸೌಹಾರ್ದಯುತ ರಾಯಭಾರಿಯಾಗಿರುವ ಚೋಪ್ರಾ ಅವರು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತಾದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
'ವಿಶ್ವ ನಾಯಕರೇ, ನಿರಾಶ್ರಿತರಿಗೆ ಈಗ ಅಗತ್ಯವಿರುವ ಬೆಂಬಲವನ್ನು ಅವರಿಗೆ ನೀಡಬೇಕಿದೆ. ಹೀಗಾಗಿ ಇದನ್ನು ಖಚಿತಪಡಿಸಿಕೊಳ್ಳಲು ಪ್ರಪಂಚದಾದ್ಯಂತ ನಿರಾಶ್ರಿತರ ಪರವಾಗಿ ನೀವು ನಿಲ್ಲುವ ಅಗತ್ಯವಿದೆ' ಎಂದು ಹೇಳಿದ್ದಾರೆ.
'ನಿರಾಶ್ರಿತರು ಅನುಭವಿಸುತ್ತಿರುವುದನ್ನು ನಾವು ಸುಮ್ಮನೆ ನಿಂತು ನೋಡಲು ಆಗುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಫೆಬ್ರುವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್ ಮೇಲೆ ದಾಳಿಯನ್ನು ಪ್ರಾರಂಭಿಸಿದವು. ಅಂದಿನಿಂದ ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಸುಮಾರು 20 ಲಕ್ಷ ಮಕ್ಕಳು ನೆರೆಯ ದೇಶಗಳಲ್ಲಿ ಸುರಕ್ಷತೆಯ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.
'ಇದು ಎರಡನೇ ಮಹಾಯುದ್ಧದ ನಂತರದ ಅತ್ಯಂತ ವೇಗವಾಗಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಮಕ್ಕಳ ಸ್ಥಳಾಂತರವಾಗಿದೆ' ಎಂದು ಪ್ರಿಯಾಂಕಾ ಚೋಪ್ರಾ ವಿಡಿಯೊದಲ್ಲಿ ಹೇಳಿದ್ದಾರೆ.
39 ವರ್ಷದ ನಟಿ, ವಿಶ್ವ ನಾಯಕರನ್ನು ಎಲ್ಲೆಡೆ ನಿರಾಶ್ರಿತರ ಪರವಾಗಿ ನಿಲ್ಲುವಿರಾ ಮತ್ತು ಅವರಿಗೆ ಅಗತ್ಯವಿರುವ ಶತಕೋಟಿ ಕೊಡುಗೆ ನೀಡುವಿರಾ ಎಂದು ಪ್ರಶ್ನಿಸಿದ್ದಾರೆ.
ಉಕ್ರೇನ್‌ನ ಮಕ್ಕಳಿಗೆ ಸಹಾಯ ಮಾಡಲು ಪ್ರಿಯಾಂಕಾ ಚೋಪ್ರಾ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬಯೋದಲ್ಲಿ ಯುನಿಸೆಫ್ ದೇಣಿಗೆ ಲಿಂಕ್ ಅನ್ನು ಲಗತ್ತಿಸಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತು ಮಾಡಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಆದೇಶ ಹೊರಡಿಸಿದೆ. ಉಕ್ರೇನ್‌ನಲ್ಲಿ ಮುಂದುವರಿದ ಮಾನವ ಹಕ್ಕುಗಳು ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು.
ಉಕ್ರೇನ್‌ನ ಬುಕಾ ನಗರದಿಂದ ವಾಪಸ್ಸಾಗುವಾಗ ರಷ್ಯಾ ಸೇನೆಯು ನೂರಾರು ನಾಗರಿಕರನ್ನು ಕೊಂದು ಹಾಕಿದೆ ಎಂದು ಉಕ್ರೇನ್ ಆರೋಪಿಸಿತ್ತು. ಉಕ್ರೇನ್‌ನಲ್ಲಿ ರಷ್ಯಾ ಎಸಗಿರಬಹುದಾದ ಯುದ್ಧಾಪರಾಧಗಳ ಕಾರಣ ಮಾನವ ಹಕ್ಕುಗಳ ಮಂಡಳಿಯಿಂದ ಅದನ್ನು ಅಮಾನತು ಮಾಡುವ ನಿರ್ಣಯವನ್ನು ಸಾಮಾನ್ಯ ಸಭೆ ಮಂಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.