ಕಲಾ ಕುಟುಂಬದಿಂದಲೇ ಬಂದು ಬಂಗಾಳಿ ಚಿತ್ರಗಳಲ್ಲಿ ಹೆಸರು ಮಾಡಿ, ಈಗ ಚಂದನವನದಲ್ಲೇ ನೆಲೆಯಾಗಿರುವವರು ನಟಿ ಪ್ರಿಯಾಂಕಾ ಉಪೇಂದ್ರ. ಅವರ ಚಿತ್ರಗಳು 50ರ ಗಡಿ ತಲುಪಿವೆ. ಇದೇ ವೇಳೆ ‘ಡಿಟೆಕ್ಟಿವ್ ತೀಕ್ಷ್ಣ’ ಆಗಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್‌ನಿಂದ ಆ್ಯಕ್ಷನ್ ಕ್ವೀನ್ ಆದವರೆಗಿನ ಹೆಜ್ಜೆಗಳ ಮೆಲುಕು ಇಲ್ಲಿದೆ.
50 ಚಿತ್ರಗಳವರೆಗೆ ಬಂದ ಬದುಕಿನ ಪಯಣವನ್ನೊಮ್ಮೆ ಅವಲೋಕಿಸಬಹುದೇ?
ಹೌದು, ಹಿಂದಿರುಗಿ ನೋಡಿದಾಗ ಐವತ್ತು ಚಿತ್ರಗಳವರೆಗೆ ಬಂದಿದ್ದೇನೆಯೇ ಎಂದು ಅಚ್ಚರಿ ಮತ್ತು ಸಂತೋಷ ಒಟ್ಟಿಗೇ ಆಗುತ್ತಿದೆ. ಈ ವಿಷಯದಲ್ಲಿ ನಾನು ತುಂಬಾ ಆಶೀರ್ವಾದ ಪಡೆದವಳು. ದೊಡ್ಡ ನಿರ್ದೇಶಕರು, ಒಳ್ಳೆಯ ನಾಯಕ ನಟರ ಜೊತೆ ಕೆಲಸ ಮಾಡಿದ್ದೇನೆ. ಇಲ್ಲಿ ನಟನೆಯಷ್ಟೇ ಅಲ್ಲ, ಜೀವನದ ಪಾಠಗಳನ್ನು ಕಲಿತಿದ್ದೇನೆ. ಬಸು ಚಟರ್ಜಿ ಅವರ ನಿರ್ದೇಶನದೊಂದಿಗೆ ನನ್ನ ಸಿನಿಪಯಣ ಆರಂಭವಾಯಿತು. ಬಂಗಾಳಿಯ ‘ಯೊದ್ಧ’ (1997) ನನ್ನ ಮೊದಲ ಚಿತ್ರ. ‘ಹೋಥಾತ್ ಬ್ರಿಷ್ಟಿ’ ನಾನು ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ ಚಿತ್ರ. ಮುಂದೆ ಸರಣಿ ಚಿತ್ರಗಳು ಬಂದವು. ಬಳಿಕ ಮುಂಬೈ ಸೇರಿದೆ ಅಲ್ಲಿಂದ ಹೈದರಾಬಾದ್‌ಗೆ ಬಂದೆ. ಅಲ್ಲಿಂದ ನನ್ನ ದಕ್ಷಿಣ ಭಾರತದ ಚಿತ್ರ ಪ್ರಯಾಣ ಆರಂಭವಾಯಿತು.
ಬಂಗಾಳದಿಂದ ಬಂದು ಇಲ್ಲಿ ನೆಲೆಯಾಗುತ್ತೀರಿ ಎಂದು ಅನಿಸಿತ್ತಾ?
ಖಂಡಿತಾ ಊಹಿಸಿರಲಿಲ್ಲ. ತೆಲುಗಿನಲ್ಲಿ ನನ್ನ ಮೊದಲ ಚಿತ್ರ ‘ಸೂರಿ’ ಮಾಡಿದಾಗ ಭಯ ಇತ್ತು. ಏಕೆಂದರೆ ಭಾಷಾ ಸಮಸ್ಯೆ ಇತ್ತು. ‘ರಾ’ ಸಿನಿಮಾ ಮಾಡಿದಾಗಲೂ ಇದೇ ಸಮಸ್ಯೆ ಇತ್ತು. ‘ಸೂರಿ’ ಚಿತ್ರದ ಸಂದರ್ಭದಲ್ಲೇ ಉಪೇಂದ್ರ ಅವರು ‘ರಾ’ ಸಿನಿಮಾಕ್ಕೆ ಪಾತ್ರಗಳ ಆಯ್ಕೆ ಮಾಡುತ್ತಿದ್ದರು. ತೆಲುಗಿನ ಹಿರಿಯ ನಿರ್ದೇಶಕರೊಬ್ಬರು ಉಪೇಂದ್ರ ಅವರ ಬಗ್ಗೆ ಸಾಕಷ್ಟು ಹೇಳಿದ್ದರು. ತೀವ್ರ ಆತಂಕದ ನಡುವೆಯೇ ಬಂದಿದ್ದೆ. ಬಹಳ ಪರಿಶ್ರಮ ಇತ್ತು.
ಪ್ರಿಯಾಂಕಾ ಜೊತೆ ಉಪೇಂದ್ರ ಸೇರಿಕೊಂಡದ್ದು ಯಾವಾಗ?
ಎಚ್2ಒ ಚಿತ್ರದ ಸಂದರ್ಭ ನಾವು ಹೆಚ್ಚು ನಿಕಟವಾದೆವು. ಹಾಗೆಂದು ಹೆಚ್ಚು ಕಾಲ ಕಳೆಯಲು ಆಗುತ್ತಿರಲಿಲ್ಲ. ಮೊಬೈಲ್ ಎಲ್ಲರ ಬಳಿಯೂ ಇರಲಿಲ್ಲ ನೋಡಿ. ಈ ನಡುವೆ ಉಪೇಂದ್ರ ಅವರು ‘ಹಾಲಿವುಡ್’ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ನಾನೂ ಬಂಗಾಳಿ ಚಿತ್ರಗಳಲ್ಲಿ ಬ್ಯುಸಿ ಆಗಿದ್ದೆ. ಆಸ್ಟ್ರೇಲಿಯಾದಿಂದ ವಾಪಸಾದ ಮೇಲೆ ಒಂದು ದಿನ ಉಪೇಂದ್ರ ನನ್ನನ್ನು ಮದುವೆಯಾಗುತ್ತೀರಾ ಎಂದು ಕೇಳಿಯೇಬಿಟ್ಟರು. ನಮ್ಮಿಬ್ಬರಿಗೂ ಬೇರೆ ಯಾರೂ ಈ ದೃಷ್ಟಿಯಲ್ಲಿ ಹಿಡಿಸಿರಲಿಲ್ಲ. ಹಾಗಾಗಿ ಇಬ್ಬರೂ ಮದುವೆಗೆ ಪರಸ್ಪರ ಒಪ್ಪಿದೆವು. ಹೌದು, ನಮ್ಮಿಬ್ಬರ ಸಂಸ್ಕೃತಿಗೆ ಬಹಳ ವ್ಯತ್ಯಾಸವಿದೆ. ಹಾಗಾಗಿ ಸ್ವಲ್ಪ ಆತಂಕ ಇತ್ತು. ಈಗ ಎಲ್ಲವೂ ಹೊಂದಾಣಿಕೆ ಆಗಿದೆ.
ಕನ್ನಡ ಎಲ್ಲಿ ಕಲಿತಿರಿ?
ವೃತ್ತಿಯ ಮೂಲಕವೇ ಕಲಿತಿದ್ದೇನೆ. ಬರೆಯಲು, ಓದಲು ಕಲಿಯಬೇಕು. ಬಂಗಾಳಿ ಚಿತ್ರಗಳಿಗೆ ನಾನೇ ಧ್ವನಿ ಕೊಡುತ್ತೇನೆ. ಕನ್ನಡ ಚಿತ್ರಗಳಿಗೆ ಬೇರೆಯವರು ಧ್ವನಿ ಕೊಡುತ್ತಿದ್ದಾರೆ. ಆದರೆ, ಜಾಹೀರಾತು, ಟಿವಿ ಷೋಗಳು, ಬ್ರಾಂಡ್ ರಾಯಭಾರಿಯ ಕಾರ್ಯಕ್ರಮಗಳಿಗೆ ನಾನೇ ಧ್ವನಿ ಕೊಡುತ್ತೇನೆ. ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ.
ನಿಮ್ಮ ವೃತ್ತಿಗೆ ಉಪೇಂದ್ರ ಅವರ ಬೆಂಬಲ ಹೇಗಿದೆ?
ತುಂಬಾ ಇದೆ. ನಾವು ಇಲ್ಲಿ ಕೂಡು ಕುಟುಂಬದಲ್ಲಿದ್ದೇವೆ. ಮದುವೆಯಾದ ಮೇಲೂ 9 ಬಂಗಾಳಿ ಚಿತ್ರಗಳಲ್ಲಿ ನಟಿಸಿದ್ದೇನೆ. ಮಕ್ಕಳು ಸಣ್ಣವರಿದ್ದಾಗ ಅವರಿಗೆ ಸಮಯ ಕೊಡಬೇಕು ಎಂಬ ನಿಬಂಧನೆ ನಮ್ಮಿಬ್ಬರಲ್ಲೂ ಇತ್ತು. ಮಕ್ಕಳು ದೊಡ್ಡವರಾಗುತ್ತಿದ್ದಂತೆಯೇ ಸ್ವಲ್ಪ ಓಡಾಟ ಕಷ್ಟವಾಗುತ್ತಿತ್ತು. ಹಾಗಾಗಿ, ಇಲ್ಲಿಯೇ ಪ್ರಯತ್ನ ಮಾಡೋಣ ಎಂದು ಶುರು ಮಾಡಿದೆ. ಆಗ ಉಪೇಂದ್ರ ಜೊತೆ ‘ಶ್ರೀಮತಿ’ ಮಾಡಿದೆ. ಆ ಬಳಿಕ ‘ಕ್ರೇಜಿಸ್ಟಾರ್’, ‘ಪ್ರಿಯಾಂಕಾ’, ‘ಮಮ್ಮಿ’ ಹೀಗೆ ಚಿತ್ರಗಳು ಯಶಸ್ವಿಯಾಗುತ್ತಾ ಹೋದವು. ಒಂದು ಚಿತ್ರಕ್ಕೂ ಇನ್ನೊಂದಕ್ಕೂ ಸಾಕಷ್ಟು ಅಂತರ ತೆಗೆದುಕೊಂಡು ಮನೆ, ಕುಟುಂಬ ಮತ್ತು ವೃತ್ತಿಯನ್ನು ನಿಭಾಯಿಸುತ್ತೇನೆ.
ಚಿತ್ರ ನಿರ್ಮಾಣದ ಕನಸು ಇದೆಯೇ?
– ಹೌದು ಕೋವಿಡ್ ಪೂರ್ವದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದೆವು. ಕೋವಿಡ್‌ನಿಂದಾಗಿ ಆ ಯೋಜನೆ ಸ್ವಲ್ಪ ನಿಧಾನವಾಯಿತು. ಮುಂದೆ ನೋಡೋಣ.
ಗ್ಲಾಮರ್‌ನಿಂದ ಆ್ಯಕ್ಷನ್ ಕ್ವೀನ್ ಅನಿಸಿಕೊಳ್ಳುವವರೆಗಿನ ಪರಿವರ್ತನೆಯ ಹಾದಿ ಬಗ್ಗೆ?
‘ಉಗ್ರಾವತಾರ’ದ ಬಳಿಕ ಆ್ಯಕ್ಷನ್ ದೃಶ್ಯಗಳು ಚೆನ್ನಾಗಿ ಬಂದಿವೆ ಎಂಬ ಕಾರಣಕ್ಕೆ ಅಂಥ ಪಾತ್ರಗಳು ಹುಡುಕಿಕೊಂಡು ಬಂದವು. ಹಾಗೆಂದು ನಾನು ಅಷ್ಟಕ್ಕೇ ಸೀಮಿತಳಲ್ಲ. ಟೀಚರ್, ಗೃಹಿಣಿ, ತಾಯಿ, ನರ್ಸ್... ಇಂಥ ಸಾಫ್ಟ್ ಪಾತ್ರಗಳನ್ನೂ ಮಾಡಿದ್ದೇನೆ. ಮಹಿಳಾ ಪ್ರಧಾನ ಪಾತ್ರಗಳ ಪೈಕಿ ಅದು ನನಗೆ ಸೂಕ್ತವೇ ಎಂದು ನೋಡಿ ಆಯ್ಕೆ ಮಾಡಿಕೊಳ್ಳುತ್ತೇನೆ. ಮಹಿಳೆ ಸಾಹಸ ಪಾತ್ರಧಾರಿಯಾಗಿ ಕಾಣಿಸಿಕೊಂಡದ್ದು ಕಡಿಮೆ. ಈಗ ಕಮರ್ಷಿಯಲಿ ನೋಡಿದಾಗ ಹಾರರ್ ಮತ್ತು ಆ್ಯಕ್ಷನ್ ಚಿತ್ರಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಕೆಲವು ಆ್ಯಕ್ಷನ್ ದೃಶ್ಯಗಳನ್ನು ಮಾಡುವುದು ಕಷ್ಟ. ಆದರೂ ಪ್ರಯತ್ನ ಸಾಗಿದೆ.
ಯಾರು ‘ಡಿಟೆಕ್ಟಿವ್ ತೀಕ್ಷ್ಣ’?
ಡಿಟೆಕ್ಟಿವ್ ತೀಕ್ಷ್ಣ ತುಂಬಾ ಚುರುಕು ಮತ್ತು ಬುದ್ಧಿವಂತ ಖಾಸಗಿ ಪತ್ತೆದಾರಿ. ಇಲ್ಲಿ ಇಂಟರ್‌ನ್ಯಾಷನಲ್ ಅಪೀಲ್ ಇರುವಂತಹ ಲುಕ್ ಕೊಟ್ಟಿದ್ದಾರೆ. ಹೊಸ ಪ್ರಕಾರದ ಪಾತ್ರ ಇದು. ರಘು ಅವರು ಇದಕ್ಕಾಗಿ ಸುಮಾರು 9 ತಿಂಗಳು ವಿವರವಾದ ಕೆಲಸ ಮಾಡಿದ್ದಾರೆ. ವಾಸ್ತವಕ್ಕೆ ಹತ್ತಿರವಾಗಿರುವಂತೆ ಚಿತ್ರ ಇದೆ. ಹೆಣ್ಣುಮಕ್ಕಳಿಗೆ ಸಕಾರಾತ್ಮಕ ಸಂದೇಶ ಇದೆ.
ಮಕ್ಕಳನ್ನು ಚಿತ್ರರಂಗಕ್ಕೆ ಕರೆತರುತ್ತೀರಾ?
ಮಕ್ಕಳು ಪ್ಯಾಷನೇಟ್ ಆಗಿ ಚಿತ್ರರಂಗಕ್ಕೆ ಬರಬೇಕು. ಇದರಲ್ಲಿ ಪ್ಲಸ್–ಮೈನಸ್ ಎರಡೂ ಇವೆ. ನಟ ನಟಿಯರ ಮಕ್ಕಳು ಎಂದರೆ ತುಂಬಾ ಹೋಲಿಕೆ ಮಾಡುತ್ತಾರೆ. ಅದೆಲ್ಲದ್ದಕ್ಕೂ ಅವರು ಸಿದ್ಧರಾಗಿರಬೇಕು. ಮಕ್ಕಳಿಗೆ ಇದನ್ನೆಲ್ಲಾ ಹೇಳುತ್ತಿರುತ್ತೇನೆ. ಅವರಿನ್ನೂ ಚಿಕ್ಕವರು ಮುಂದೆ ನೋಡೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.