ADVERTISEMENT

'ನಿನ್ನಂಥೋರ್‌ ಯಾರೂ ಇಲ್ವಲ್ಲೋ' ಆ್ಯನಿಮೇಷನ್‌ನಲ್ಲಿ ಅಣ್ಣಾವ್ರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:30 IST
Last Updated 21 ಅಕ್ಟೋಬರ್ 2021, 19:30 IST
‘ರಣಧೀರ ಕಂಠೀರವ’ರಾಗಿ ಡಾ.ರಾಜ್‌ ಕುಮಾರ್‌
‘ರಣಧೀರ ಕಂಠೀರವ’ರಾಗಿ ಡಾ.ರಾಜ್‌ ಕುಮಾರ್‌   

ಡಾ.ರಾಜ್‌ಕುಮಾರ್‌ ‘ರಣಧೀರ ಕಂಠೀರವ’ರಾಗಿ ಮತ್ತೆ ತೆರೆಯ ಮೇಲೆ ಬಂದಿದ್ದಾರೆ. ‘ಪಿಆರ್‌ಕೆ ಆಡಿಯೊ’ ಯೂಟ್ಯೂಬ್‌ ಚಾನಲ್‌ನಲ್ಲಿ ‘ನಿನ್ನಂಥೋರ್‌ ಯಾರೂ ಇಲ್ವಲ್ಲೋ’ ಆ್ಯನಿಮೇಷನ್‌ ಹಾಡು ಬಿಡುಗಡೆಯಾಗಿದ್ದು, ನೋಡುಗರಿಂದ ಭರಪೂರ ಸ್ಪಂದನೆ ವ್ಯಕ್ತವಾಗಿದೆ. 4 ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಿಸಿದ್ದಾರೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಥೆ ‘ಡೇರ್‌ ಡೆವಿಲ್‌ ಮುಸ್ತಫಾ’ ತೆರೆಯ ಮೇಲೆ ತರಲು ಸಿದ್ಧವಾಗಿರುವ ‘ಸಿನಿಮಾಮರ’ ತಂಡ ಈ ದೃಶ್ಯ ವೈಭವವನ್ನು ಕಟ್ಟಿಕೊಟ್ಟಿದ್ದು, ವರನಟ ಮೈಸೂರು ರಾಜ್ಯದ ದೊರೆಯಾಗಿ ಕಾಣಿಸಿಕೊಂಡಿದ್ದಾರೆ. ರಂಗಭೀಷ್ಮ ಬಿ.ವಿ.ಕಾರಂತ ಸಂಯೋಜಿಸಿದ ಹವ್ಯಾಸಿ ರಂಗಭೂಮಿಯಪ್ರಸಿದ್ಧ ಗೀತೆಯನ್ನು ಚಿತ್ರತಂಡ ಸಿನಿಮಾಗೆ ಅಳವಡಿಸಿಕೊಂಡಿದೆ.

ಮಲ್ಲಯುದ್ಧ, ಜಂಬೂಸವಾರಿ, ಚಾಮುಂಡೇಶ್ವರಿಯಿಂದ ಕತ್ತಿ ಪಡೆಯುವುದು, ಸಿಂಹಾಸನಾರೋಹಣದಂಥ ಮೋಡಿ ಮಾಡುವ ದೃಶ್ಯ ವೈಭವನ್ನು ಮಂಗಳೂರಿನ ಪ್ಲಾಂಗಲ್‌ ಸ್ಟುಡಿಯೊ 2ಡಿ ಆ್ಯನಿಮೇಷನ್‌ನಲ್ಲಿ ರೂಪರೇಖೆ ಬರೆದಿದೆ.

ADVERTISEMENT

ವಾಸುಕಿ ವೈಭವ್‌ ಹಾಡಿರುವ ಗೀತೆಗೆ ನವನೀತ್‌ ಶ್ಯಾಮ್ ಸಂಗೀತ ನೀಡಿದ್ದಾರೆ. ಶಶಾಂಕ್‌ ಸೋಗಲ್‌ ನಿರ್ದೇಶನದ ಈ ಸಿನಿಮಾ, 2022ರ ವರ್ಷಾರಂಭದಲ್ಲಿ ತೆರೆಗೆ ಬರಲಿದೆ.

‘ತೇಜಸ್ವಿಯವರ ಓದುಗರೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯ ದೃಶ್ಯಕ್ಕೆ ಹಾಡನ್ನು ಬಳಸಲಾಗಿತ್ತು. ಅಣ್ಣಾವ್ರು ಅಭಿನಯಿಸಿದ್ದರೆ ಎಷ್ಟು ಚೆಂದಿತ್ತು ಎಂದೆನ್ನಿಸಿದ್ದೆ ತಡ ಆ್ಯನಿಮೇಷನ್‌ನಲ್ಲಿ ಹಾಡನ್ನು ರೂಪಿಸಲಾಗಿದೆ’ ಎಂದು ಚಿತ್ರದ ನಿರ್ದೇಶಕ ಶಶಾಂಕ್‌ ಸೋಗಲ್‌ ಹೇಳಿದರು.

‘ಆ್ಯನಿಮೇಷನ್‌ಗೆ ಅಭಿಮಾನಿಗಳೇ ನಿರ್ಮಾಪಕರು. ರಾಜ್‌ ಅವರ ಟೀಶರ್ಟ್‌ ಅನ್ನು 800ಕ್ಕೂ ಹೆಚ್ಚು ಅಭಿಮಾನಿಗಳು ಕೊಂಡು ನೆರವಾಗಿದ್ದಾರೆ. ಹಾಡನ್ನು ನೋಡಿದವರು ರಾಜ್‌ ಆ್ಯನಿಮೇಷನ್ ಚಿತ್ರ ಮಾಡಿ ಎಂದು ಹೇಳಿರುವುದೇ ಮುಂದಿನ ಕೆಲಸಗಳಿಗೆ ಸ್ಫೂರ್ತಿಯಾಗಿದೆ. ಇದೀಗ ಪ್ರೀತಿ ಹಾಗೂ ಎಚ್ಚರದಿಂದ ತೇಜಸ್ವಿ ಕಥೆಯನ್ನು ಸಿನಿಮಾ ಮಾಡಿದ್ದೇವೆ. ಕಥೆಯೇ ಚಿತ್ರದ ನಾಯಕನಾಗಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಫೆಬ್ರುವರಿಯಲ್ಲಿ ಬಿಡುಗಡೆಯಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.