1970 ರ ಸಂದರ್ಭದಲ್ಲಿ ಮಲಯಾಳ ಸಿನಿಮಾ ರಂಗದಲ್ಲಿ ಪ್ರೇಮ್ ನಸೀರ್ ಮತ್ತು ಮಧು ಅವರೊಂದಿಗೆ ಮಿನುಗಿದ ನಟ ಸುಕುಮಾರನ್ ನಾಯರ್. ಮಾದಕ ನೋಟ ಮತ್ತು ಹೊರಚಾಚಿದ ತುಟಿಯೊಂದಿಗೆ ವಿಶಿಷ್ಟ ಶೈಲಿಯ ‘ಡೈಲಾಗ್’ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಿದ್ದರು. ರಸಿಕ ನಾಯಕನಾಗಿಯೂ ವಿಕೃತ ಖಳನಾಗಿಯೂ ಮಲಯಾಳಿಗಳ ಮನಸ್ಸಿನಲ್ಲಿ ಮರೆಯಲಾಗದ ಮುದ್ರೆಯೊತ್ತಿದ್ದರು.
ನಿರ್ಮಾಪಕನೂ ಆಗಿದ್ದ ಸುಕುಮಾರನ್ ನಾಯರ್ ಅಕಾಲ ಮೃತ್ಯುವಿಗೆ ಒಳಗಾದಾಗ ತೀರಿಸಲಾಗದೆ ಬಿಟ್ಟು ಹೋದ ಆಸೆ ನಿರ್ದೇಶಕನಾಗಬೇಕು ಎಂಬುದು. ಆ ಆಸೆಯನ್ನು ಈಡೇರಿಸಲು ಮಗ ಪೃಥ್ವಿರಾಜ್ ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಸಿದ್ಧಗೊಂಡಿದೆ, ‘ಲೂಸಿಫರ್’. ನಟ ಮೋಹನ್‌ಲಾಲ್ ನಾಯಕನಾಗಿ ನಟಿಸಿರುವುದು ಈ ಚಿತ್ರದ ವೈಶಿಷ್ಟ್ಯ.
ಸುಕುಮಾರನ್ ನಾಯರ್ ಅವರ ಇಡೀ ಕುಟುಂಬ ಸಿನಿಮಾ ಕ್ಷೇತ್ರದಲ್ಲಿದೆ. ಪತ್ನಿ ಮಲ್ಲಿಕಾ ಸಿನಿಮಾ ಮತ್ತು ಕಿರುತೆರೆ ನಟಿ. ಪೃಥ್ವಿರಾಜ್ ಆ್ಯಕ್ಷನ್ ಪಾತ್ರಗಳ ಮೂಲಕ ಯುವಕರಿಗೆ ರೋಮಾಂಚನ ನೀಡುತ್ತಿರುವ, ಭಾವುಕ ಪಾತ್ರಗಳನ್ನು ನಿರ್ವಹಿಸಿ ಕಲಾರಸಿಕರನ್ನು ಮುದಗೊಳಿಸುತ್ತಿರುವ ಕಲಾವಿದ. ಅವರ ಅಣ್ಣ ಇಂದ್ರಜಿತ್ ತಂದೆಯಂತೆ ನಾಯಕ–ಖಳ ನಟನ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
2002ರಲ್ಲಿ ‘ನಂದನಂ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪೃಥ್ವಿ ಬಹಳ ಬೇಗ ಪ್ರಸಿದ್ಧಿಗೇರಿದರು. ನಿರ್ಮಾಪಕ, ಗಾಯಕನಾಗಿಯೂ ಗಮನ ಸೆಳೆದರು. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದರು. ಅವರ ಅಂಗಸೌಷ್ಠವ ಮತ್ತು ಮಾತಿನ ಓಘ ಬಾಲಿವುಡ್ ಸಿನಿಮಾದಲ್ಲೂ ಅವಕಾಶ ಲಭಿಸುವಂತೆ ಮಾಡಿತು. ಈಗ ನಿರ್ದೇಶಕ
ಸುಕುಮಾರನ್ ನಾಯರ್ ನಿರ್ದೇಶಕನಾಗುವ ಕನಸು ಕಂಡಿದ್ದರು ಎಂಬುದನ್ನು ಪೃಥ್ವಿಗೆ ಹೇಳಿದ್ದು ತಾಯಿ ಮಲ್ಲಿಕಾ. ತಕ್ಷಣ ನಿರ್ದೇಶನಕ್ಕೆ ಇಳಿಯುವ ಮನಸ್ಸು ಮಾಡಿದ ಪೃಥ್ವಿ ಜೊತೆ ನಿರ್ಮಾಣದ ಜವಾಬ್ದಾರಿ ಹೊತ್ತವರು ಆ್ಯಂಟನಿ ಪೆರುಂಬಾವೂರ್. ಮಂಜು ವಾರಿಯರ್, ಮಮತಾ ಮೋಹನ್‌ದಾಸ್, ಟೊವಿನೊ ಥಾಮಸ್, ವಿವೇಕ್ ಒಬೆರಾಯ್, ಮುರಳಿ ಗೋಪಿ ಮುಂತಾದವರು ಅಭಿನಯಿಸಿದ್ದಾರೆ.
ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆದಿರುವ ಚಿತ್ರ ಮಾರ್ಚ್ 22ರಂದು ತೆರೆ ಕಾಣಲಿದೆ ಎಂದು ಪ್ರೊಡಕ್ಷನ್ ಕಂಟ್ರೋಲರ್ ಸಿದ್ಧ ಪಣಿಕ್ಕರ್ ಸಾಮಾಜಿಕ ತಾಣಗಳಲ್ಲಿ ಪ್ರಕಟಿಸಿದ್ದಾರೆ.
ಇದರಲ್ಲಿ ಮೋಹನ್‌ಲಾಲ್ ಅವರದು ವಿಭಿನ್ನ ಪಾತ್ರ. ಫ್ಯಾಂಟಸಿ ಕಥೆಯ ಹಿನ್ನೆಲೆಯಲ್ಲಿ ನಿರ್ಮಿಸಿರುವ ಚಿತ್ರ, ಸಾಮಾನ್ಯ ವ್ಯಕ್ತಿಯೊಬ್ಬ ಮನಸ್ಸು ಮಾಡಿದರೆ ಘನ ಕಾರ್ಯವನ್ನು ಕೂಡ ಮಾಡಬಲ್ಲ ಎಂಬ ಸಂದೇಶ ಇದೆ.
ಚಿತ್ರ ಬಿಡುಗಡೆಗೆ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮೋಹನ್‌ಲಾಲ್ ‘ಈ ಚಿತ್ರ ಪೃಥ್ವಿ ಅವರ ವೃತ್ತಿ ಜೀವನಕ್ಕೆ ತಿರುವು ನೀಡಬಲ್ಲುದು’ ಎಂದಿದ್ದಾರೆ. ‘ಪೃಥ್ವಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನಿರ್ದೇಶಕನ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ಈ ಕ್ಷೇತ್ರದಲ್ಲೂ ಉಜ್ವಲ ಭವಿಷ್ಯವಿದೆ’ ಎಂಬುದು ಮೋಹನ್‌ಲಾಲ್ ನೀಡಿರುವ ಸರ್ಟಿಫಿಕೆಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.