ADVERTISEMENT

ಪ್ರಯೋಗಮುಖಿ ಪೃಥ್ವಿ ಅಂಬರ್‌

ಜನವರಿಯಲ್ಲಿ ತೆರೆಗೆ ಬರಲಿದೆ ‘ಗೋಲ್‌ಮಾಲ್‌’

ಪ್ರದೀಶ್ ಎಚ್.ಮರೋಡಿ
Published 3 ಡಿಸೆಂಬರ್ 2018, 19:45 IST
Last Updated 3 ಡಿಸೆಂಬರ್ 2018, 19:45 IST
ಪ್ರಥ್ವಿ ಅಂಬರ್
ಪ್ರಥ್ವಿ ಅಂಬರ್   

ಪೃಥ್ವಿ ಅಂಬರ್‌ ಸದ್ಯ ಕೋಸ್ಟಲ್‌ವುಡ್‌ನ ಬಹುಬೇಡಿಕೆಯ ನಟ. ‘ಬರ್ಕೆ’ ಸಿನಿಮಾದ ಮೂಲಕ 5 ವರ್ಷಗಳ ಹಿಂದೆಯೇ ಅವರು ತುಳು ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರೂ, 2016ರಲ್ಲಿ ಬಿಡುಗಡೆಯಾದ ‘ಪಿಲಿಬೈಲ್‌ ಯಮುನಕ್ಕ’ ಚಿತ್ರದ ಮೂಲಕ ಮನೆಮಾತಾದರು. ಬಳಿಕ ಸಾಲುಸಾಲು ಅವಕಾಶಗಳನ್ನು ಬಾಚಿಕೊಂಡಿರುವ ಪೃಥ್ವಿ ಅವರ ಬಹುನಿರೀಕ್ಷೆಯ ಮತ್ತೊಂದು ಚಿತ್ರ ‘ಗೋಲ್‌ಮಾಲ್‌’ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಬಿಬಿಎಂ ಮತ್ತು ಎಂಎ (ಕಮ್ಯೂನಿಕೇಷನ್‌) ಪದವೀಧರರಾದ ಪೃಥ್ವಿ, ಕಾಲೇಜು ಹಂತದಲ್ಲೇ ಬಹುಮುಖ ಪ್ರತಿಭೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಈ ಟೀವಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಡಾನ್ಸ್‌ ರಿಯಾಲಿಟಿ ಶೋನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು. ಬಳಿಕ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಂಡ ‘ಸೈ–2’ ಎಂಬ ರಿಯಾಲಿಟಿ ಶೋನಲ್ಲಿ ಫೈನಲ್‌ ಹಂತಕ್ಕೆ ತಲುಪಿದ್ದರು. ಮಾತಿನಲ್ಲೇ ಮಂಟಪ ಕಟ್ಟುವ ಸಂವಹನ ಸಾಮರ್ಥ್ಯವನ್ನು ಹೊಂದಿರುವ ಇವರು, ಮೂರು ವರ್ಷಗಳ ಕಾಲ ರೆಡ್‌ ಎಫ್‌ಎಂನಲ್ಲಿ ಆರ್‌ಜೆ (ರೇಡಿಯೋ ಜಾಕಿ)ಯಾಗಿ ಕೆಲಸ ಮಾಡಿದ್ದಾರೆ. ನಂತರ ಬಣ್ಣದ ಲೋಕದತ್ತ ಮುಖಮಾಡಿರುವ ಅವರು, ತಮ್ಮ ಸಿನಿ ಜರ್ನಿ ಮತ್ತು ಜನವರಿಯಲ್ಲಿ ತೆರೆಗೆ ಬರಲಿರುವ ಗೋಲ್‌ಮಾಲ್‌ ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

‘ಕೆಲ ವರ್ಷಗಳ ಹಿಂದೆ ನಿರ್ದೇಶಕ ಭರತ್‌ಕೃಷ್ಣ ಅವರು ‘ಬರ್ಕೆ’ ಚಿತ್ರಕ್ಕೆ ಆಡಿಷನ್‌ ಕರೆದಿದ್ದರು. ಅಲ್ಲಿ ನನ್ನ ಪ್ರತಿಭೆ ನೋಡಿ ಮೊದಲ ಅವಕಾಶ ನೀಡಿದರು. ಈ ಚಿತ್ರವು ಕರಾವಳಿಯಲ್ಲಿ 35 ದಿನ ಪ್ರದರ್ಶನ ಕಂಡಿತು. ಬಳಿಕ ಕೆಲ ವರ್ಷಗಳ ಕಾಲ ಬೆಂಗಳೂರಿನತ್ತ ಮುಖ ಮಾಡಿದೆ.

ADVERTISEMENT

ಅಲ್ಲಿ ಅಶು ಬೆದ್ರ ಅವರ ‘ಸಾಗರ ಸಂಗಮ’ ಧಾರಾವಾಹಿಯಲ್ಲಿ ಅವಕಾಶ ಕೊಟ್ಟರು. ಬಳಿಕ ಅವರದೇ ನಿರ್ದೇಶನದ ‘ರಾಧಾಕಲ್ಯಾಣ’, ವಿನುಬಳಂಜ ನಿರ್ದೇಶನದ ‘ಲವಲವಿಕೆ’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತ್ತು. ಈ ನಡುವೆ ಸೂರಜ್‌ ಅವರ ‘ಎಕ್ಕಸಕ’ ಚಿತ್ರದ ನಾಯಕನಟ ಪಾತ್ರಕ್ಕೆ ವಾಯ್ಸ್‌ ಡಬ್‌ ನೀಡಿದ್ದೆ. ಈ ವೇಳೆ ಸೂರಜ್‌ ಅವರು ಮುಂದೆ ನನಗೆ ಅವಕಾಶ ನೀಡುವಂತೆ ಭರವಸೆ ನೀಡಿದ್ದರು. ಹೀಗಾಗಿ, ನಂತರ ಸಿಕ್ಕದ ದೊಡ್ಡ ಅವಕಾಶವೇ ‘ಪಿಲಿಬೈಲ್‌ ಯಮುನಕ್ಕ’ ಎನ್ನುತ್ತಾರೆ ಅವರು.

‘ಈ ಚಿತ್ರ ನನ್ನ ಜೀವನದ ದೊಡ್ಡ ಟರ್ನಿಂಗ್‌ ಪಾಯಿಂಟ್‌. ಈ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಬಂದವು. ನಂತರ ನನಗೂ ಅವಕಾಶಗಳು ಹೆಚ್ಚಾದವು. ‘ಪಮ್ಮಣ್ಣೆ ದಿ ಗ್ರೇಟ್‌’ ಚಿತ್ರದ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಯಿತು. ಇದೀಗ ಒಂದರ ಮೇಲೊಂದು ಚಿತ್ರ
ಬಿಡುಗಡೆಗೆ ಸಿದ್ಧವಾಗುತ್ತಿವೆ. ಕನ್ನಡದ ‘ಕರ್ವ’, ‘ತ್ರಿ ಸ್ಲೇಲಿ’, ‘ಪ್ರವೇಶ’, ‘ಡಿ.ಕೆ.ಬಾಸ್‌’, ತುಳುವಿನ ‘ಗೋಲ್‌ಮಾಲ್‌’, ‘2 ಎಕರೆ’,
‘ಕುದುಕನ ಮದಿಮೆ’, ‘ಲಾಸ್ಟ್‌ಬೆಂಚ್‌’, ‘ಎನ್ನ’ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದು, ಬಹುತೇಕ ಚಿತ್ರಗಳ ಚಿತ್ರೀಕರಣ ಕಾರ್ಯ ಮುಗಿದಿದೆ. ‘ಗೋಲ್‌ಮಾಲ್’ ಚಿತ್ರ ಜನವರಿಯಲ್ಲಿ ತೆರೆಗೆ ತರಲು ಚಿತ್ರತಂಡ ಪ್ರಯತ್ನಿಸುತ್ತಿದೆ’ ಎಂದರು ಪೃಥ್ವಿ.

‘ಗೋಲ್‌ಮಾಲ್‌ ಚಿತ್ರದಲ್ಲಿ ನನ್ನದು ಮಾಸ್‌ ಪಾತ್ರ. ನನ್ನನ್ನು ನಾನೇ ಈ ಚಿತ್ರದ ಮೂಲಕ ಪ್ರಯೋಗಕ್ಕೆ ಒಳಪಡಿಸಿದ್ದೇನೆ. ನಾನೂ ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಹೊಂದಿದ್ದೇನೆ. ಪ್ರೇಕ್ಷಕರು ಬಯಸುವ ಆ್ಯಕ್ಷನ್‌, ಸೆಂಟಿಮೆಂಟ್‌, ಲವ್‌, ಥ್ರಿಲ್‌ ಇದರಲ್ಲಿದೆ. ನಿರ್ದೇಶಕ
ರಮಾನ‌ಂದ್‌ ನಾಯಕ್‌ ಅವರು ತುಂಬಾ ತಾಳ್ಮೆಯಿಂದ ಯೋಜನೆಯನ್ನು ಹಾಕಿ ಚಿತ್ರವನ್ನು ತಯಾರಿಸಿದ್ದಾರೆ. ಕನ್ನಡ ಚಿತ್ರಗಳಿಗೆ ಕಡಿಮೆ ಇಲ್ಲದಂತೆ ತಾಂತ್ರಿಕತೆಯನ್ನು ಸಮರ್ಪಕವಾಗಿ ಬಳಸಿರುವುದು ಇದರ ವಿಶೇಷ’.

‘ಸಾಯಿಕುಮಾರ್‌ ಅವರಂತಹ ಮೇರು ನಟರ ಜತೆ ಅಭಿನಯಿಸಿರುವುದು ನನಗೆ ಅತ್ಯಂತ ಖುಷಿಕೊಟ್ಟಿದೆ. ಅವರ ಚಿತ್ರ ನೋಡಿ, ಡೈಲಾಗ್‌ ಕೇಳಿ ಬೆಳೆದ ನನಗೆ ಅವರ ಜತೆಯಲ್ಲೇ ತೆರೆಯನ್ನು ಹಂಚಲು ಅವಕಾಶ ಸಿಕ್ಕಿರುವುದರಿಂದ ಹೊಸ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು. ಅವರು ತಮ್ಮ ಪಾತ್ರದ ಬಗ್ಗೆ ಹೊಂದಿರುವ ಶ್ರದ್ಧೆ, ಪೂರ್ವ ತಯಾರಿ ನೋಡಿ ನಮಗೆ ಆಶ್ವರ್ಯವಾಯಿತು’ ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ಪೃಥ್ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.