ADVERTISEMENT

‘ಗಂಧದಗುಡಿ’ಗೆ ಅಭಿಮಾನದ ಮುನ್ನುಡಿ

ಅಭಿಮಾನಿಗಳ ಭಾವತೀವ್ರತೆಯಲ್ಲಿ ಪುನೀತ್ ನೆನಪಿನ ಓಕುಳಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 21:04 IST
Last Updated 21 ಅಕ್ಟೋಬರ್ 2022, 21:04 IST
ಪುನೀತಪರ್ವದಲ್ಲಿ ವಿಜಯ ಪ್ರಕಾಶ್ ಅವರ ‘ಬೊಂಬೆ ಹೇಳುತೈತೆ’ ಹಾಡಿಗೆ ಪುನೀತ್ ಕುಟುಂಬದವರು ಭಾವುಕರಾದ ಕ್ಷಣ
ಪುನೀತಪರ್ವದಲ್ಲಿ ವಿಜಯ ಪ್ರಕಾಶ್ ಅವರ ‘ಬೊಂಬೆ ಹೇಳುತೈತೆ’ ಹಾಡಿಗೆ ಪುನೀತ್ ಕುಟುಂಬದವರು ಭಾವುಕರಾದ ಕ್ಷಣ   

ಬೆಂಗಳೂರು: ಸಹಸ್ರ ಜನರ ಅಭಿಮಾನದ ಪ್ರವಾಹ, ಕೇಕೆ, ಜಯಘೋಷ, ಧ್ವನಿ ಬೆಳಕಿನ ಚಿತ್ತಾರ.. ವೈಭವ, ಕೊನೆಯಲ್ಲಿ ಭಾವತೀವ್ರತೆಯು ಗಾಢ ಮೌನದೊಂದಿಗೆ ‘ಪುನೀತ ಪರ್ವ’ ಇಲ್ಲಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆಯಿತು.

ನಟ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ಅ.29ಕ್ಕೆ ಒಂದು ವರ್ಷ ತುಂಬಲಿದೆ. ಅವರು ಪಾಲ್ಗೊಂಡ ಸಾಕ್ಷ್ಯಚಿತ್ರ ‘ಗಂಧದಗುಡಿ’ ಅ. 28ರಂದು ಬಿಡುಗಡೆಯಾಗಲಿದೆ. ಅದರ ಬಿಡುಗಡೆ ಪೂರ್ವ ಕಾರ್ಯಕ್ರಮವಿದು.

ಪುನೀತ್ ಭಾವಚಿತ್ರವಿದ್ದ ಬಿಳಿಯ ಧ್ವಜ, ಕನ್ನಡಧ್ವಜ, ಮಿನುಗು ದೀಪದ ಭಾವಚಿತ್ರ ಹಿಡಿದು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಚಿತ್ರರಂಗದ ತಾರೆಯರು, ಅಭಿಮಾನಿಗಳು ಶ್ವೇತ ವಸ್ತ್ರಧಾರಿಗಳಾಗಿ ಭಾಗವಹಿಸಿ ಅಪ್ಪು ಅವರಿಗೆ ಗೌರವ ಸಲ್ಲಿಸಿದರು.

ADVERTISEMENT

ಅಭಿಮಾನಿಗಳೇ ನಮ್ಮನೆ ದೇವ್ರು... ಜಾಕಿ ಜಾಕಿ ಜಾಕಿ...ಗಾನ ಬಜಾನಾ... ನೀನೇ ನೀನೇ ಮನಸ್ಸೆಲ್ಲಾ ನೀನೇ.. ಹಾಡುಗಳು ಧ್ವನಿವರ್ಧಕದಲ್ಲಿ ಮೊಳಗುತ್ತಿದ್ದಂತೆ ಪ್ರೇಕ್ಷಕರಲ್ಲಿ ಭಾವೋದ್ದೀಪನವಾಗುತ್ತಿತ್ತು. ಅರಿವಿಲ್ಲದೆ ಹೆಜ್ಜೆ ಹಾಕುತ್ತಿದ್ದರು. ಒಮ್ಮೆ
ಮೌನವಾಗುತ್ತಿದ್ದರು.

ಪುನೀತ್ ಅವರ ಬೃಹತ್ ಕಟೌಟ್‌ಗಳು ಹಾಡುಗಳ ಭಾವಕ್ಕೆ ಸ್ಪಂದಿಸಿದಂತೆ ಭಾಸವಾಯಿತು. ಅಪ್ಪು ಅಪ್ಪು ಘೋಷಣೆ ಪದೇಪದೇ ಮೊಳಗಿತು. ನೂರಾರು ಕ್ಯಾಮೆರಾಗಳು ಪ್ರೇಕ್ಷಕರ ಭಾವ ಸೆರೆ ಹಿಡಿದವು. ಪುನೀತ್ ರಾಜ್ ಕುಮಾರ್ ಅವರ ಬಾಲನಟನೆಯ ತುಣುಕುಗಳು ಪರದೆಗಳಲ್ಲಿ ಬಿತ್ತರಗೊಂಡವು. ಪುನೀತ್ ಅವರು ಹಾಡಿದ್ದ ‘ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ’ ಹಾಡನ್ನು ಪುನೀತ್ ಸಹೋದರ ರಾಘವೇಂದ್ರ ರಾಜ್ ಕುಮಾರ್ ಹಾಡಿದರು. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಪುನೀತ್ ಚಿತ್ರಗಳ ಹಾಡು ಹಾಡಿದರು. ಇದೇ ವೇಳೆ ಅಭಿಮಾನಿಗಳು ಮೊಬೈಲ್ ಟಾರ್ಚ್ ಬೆಳಗಿ ಗೌರವ ಸಲ್ಲಿಸಿದರು.

ಗಾಯಕರಾದ ಟಿಪ್ಪು, ಕುನಾಲ್ ಗಾಂಜಾವಾಲ, ಅರ್ಮಾನ್ ಮಲಿಕ್ ಅವರು ಪುನೀತ್ ಚಿತ್ರಗಳ ಗೀತೆಗಳನ್ನು ಹಾಡಿದರು. ಕೊನೆಯಲ್ಲಿ ವಿಜಯಪ್ರಕಾಶ್ ಅವರು ಹಾಡಿದ ‘ಗೊಂಬೆ ಹೇಳುತೈತೆ...’ ಹಾಡಿಗೆ ಚಿತ್ರರಂಗದ ಪ್ರಮುಖರು ಹಾಗೂ ಪುನೀತ್ ಕುಟುಂಬದ ಎಲ್ಲರೂ ವೇದಿಕೆಯಲ್ಲಿ ಧ್ವನಿಗೂಡಿಸಿದರು. ಹಾಡು ಕೊನೆಗೊಳ್ಳುತ್ತಿದ್ದಂತೆಯೇ ಪುನೀತ್ ಪತ್ನಿ ಅಶ್ವಿನಿ, ಸಹೋದರ ಶಿವರಾಜ್ ಕುಮಾರ್ ಸಹಿತ ಎಲ್ಲರೂ ಕಣ್ಣೀರಾದರು. ಕಾರ್ಯಕ್ರಮದ ಕೊನೆಯಲ್ಲಿ ಅಮಿತಾಬ್ ಬಚ್ಚನ್ ಅವರ ವಿಡಿಯೊ ಸಂದೇಶ ಬಿತ್ತರಗೊಂಡಿತು.

ರಮೇಶ್ ಅರವಿಂದ್, ರಮ್ಯಾ, ರವಿಚಂದ್ರನ್, ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಪುನೀತ್ ಅವರನ್ನು ಸ್ಮರಿಸಿದರು. ರಾಣಾ ದಗ್ಗುಬಾಟಿ, ಸಿದ್ಧಾರ್ಥ, ಸೂರ್ಯ, ಯಶ್, ನಿಖಿಲ್ ಕುಮಾರಸ್ವಾಮಿ, ಡಾಲಿ ಧನಂಜಯ, ಅನು ಪ್ರಭಾಕರ್, ಪ್ರಿಯಾ ಆನಂದ್, ಸಂಸದೆ ಸುಮಲತಾ ಅಂಬರೀಶ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಮುರುಗೇಶ್ ನಿರಾಣಿ, ನಾರಾಯಣಗೌಡ ಮತ್ತು ಚಿತ್ರದ ನಿರ್ದೇಶಕ ಅಮೋಘವರ್ಷ ಇದ್ದರು. ರಾಜ್ಯದ ಹಲವೆಡೆಯಿಂದ ಬಸ್, ಕಾರು, ಟೆಂಪೋ, ಬೈಕ್‌ಗಳಲ್ಲಿ ಅಭಿಮಾನಿಗಳು ಬಂದಿದ್ದರು. ಅರಮನೆ ರಸ್ತೆಯ ಎಲ್ಲ ಭಾಗಗಳಲ್ಲೂ ಸಂಚಾರ ದಟ್ಟಣೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.