ADVERTISEMENT

'ಯುವ ರತ್ನ'ದಲ್ಲಿ ಪುನೀತ್ ರಾಜ್‌ಕುಮಾರ್ ಸ್ಟೂಡೆಂಟ್‌ ಪವರ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 19:30 IST
Last Updated 26 ಸೆಪ್ಟೆಂಬರ್ 2019, 19:30 IST
ಪುನೀತ್‌ ರಾಜ್‌ಕುಮಾರ್
ಪುನೀತ್‌ ರಾಜ್‌ಕುಮಾರ್   

‘ನಟಸಾರ್ವಭೌಮ’ ಚಿತ್ರದ ಬಳಿಕ ನಟ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಸಂತೋಷ್‌ ಆನಂದರಾಮ್ ನಿರ್ದೇಶನದ ಈ ಚಿತ್ರದ ಶೂಟಿಂಗ್‌ ಅರ್ಧದಷ್ಟು ಪೂರ್ಣಗೊಂಡಿದೆ. ಕಥೆ, ಚಿತ್ರಕಥೆಯ ನೊಗವನ್ನು ಅವರೇ ಹೊತ್ತಿದ್ದಾರೆ. ಚಿತ್ರಕ್ಕೆ ‘ಪವರ್ ಆಫ್ ಯೂತ್’ ಎಂಬ ಅಡಿಬರಹವೂ ಇದೆ.

ಎರಡು ವರ್ಷದ ಹಿಂದೆ ಸಂತೋಷ್‌ ಆನಂದರಾಮ್‌ ಮತ್ತು ಪುನೀತ್‌ ಕಾಂಬಿನೇಷನ್‌ನಡಿ ತೆರೆಕಂಡಿದ್ದ ‘ರಾಜಕುಮಾರ’ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಹಾಗಾಗಿಯೇ, ‘ಯುವರತ್ನ’ನ ಮೇಲೂ ನಿರೀಕ್ಷೆ ದು‍ಪ್ಪಟ್ಟಾಗಿದೆ.

ಪ್ರಸ್ತುತ ಶೈಕ್ಷಣಿಕ ರಂಗದಲ್ಲಿ ಕಾರ್ಪೊರೇಟ್‌ ಸಂಸ್ಕೃತಿ ಎಲ್ಲೆ ಮೀರಿದೆ. ಇದರಿಂದ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಬದುಕು ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದೆ. ಇದರ ಸುತ್ತವೇ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ, ಗುರು– ಶಿಷ್ಯರ ನಡುವಿನ ಸಂಬಂಧ ಕುರಿತು ಹೇಳಲಾಗಿದೆ. ನವಿರು ಪ್ರೇಮಕಥೆಯೂ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ADVERTISEMENT

ಪುನೀತ್‌ ಇದರಲ್ಲಿ ಸ್ಟೂಡೆಂಟ್‌ ಆಗಿ ಕಾಣಿಸಿಕೊಂಡಿರುವುದು ವಿಶೇಷ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಹೆಚ್ಚಿದ ಒತ್ತಡದಿಂದಾಗಿ ದಸರಾ ಹಬ್ಬಕ್ಕೆ ಟೀಸರ್ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಘೋಷಿಸಿದೆ.

ಬೆಂಗಳೂರು, ಮೈಸೂರು, ಧಾರವಾಡದಲ್ಲಿ ಶೂಟಿಂಗ್‌ ನಡೆಸಲಾಗಿದೆ. ಕಥೆ ಹಾಗೂ ಮೇಕಿಂಗ್‌ನಿಂದಲೇ ದೊಡ್ಡ ಸದ್ದು ಮಾಡುತ್ತಿರುವ ಈ ಚಿತ್ರ ಡಿಸೆಂಬರ್‌ನಲ್ಲಿ ಥಿಯೇಟರ್‌ಗೆ ಬರುವ ನಿರೀಕ್ಷೆ ಇದೆ. ‌ಟಾಲಿವುಡ್‌ ಮೂಲಕ ಬಣ್ಣದಲೋಕ ಪ್ರವೇಶಿಸಿದ್ದ ಸಯೇಷಾ ಸೈಗಲ್‌ ಅವರು, ಪುನೀತ್‌ಗೆ ಜೋಡಿಯಾಗಿದ್ದಾರೆ. ವಿಜಯ್‌ ಕಿರಗಂದೂರ್‌ ಬಂಡವಾಳ ಹೂಡಿದ್ದಾರೆ. ಎಸ್‌. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ್‌ ಅಂಗುರಾಜ್‌ ಅವರ ಛಾಯಾಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.